Friday, December 4, 2009

ನಿತ್ಯ ಪ್ರಳಯ !


ಕಳೆದ ಕೆಲವು ದಿನಗಳಿಂದ ಒಂದೇ ಸಮನೆ ಅದು ಒಂದೇ ರೀತಿಯ ಮೇಲ್ ಹಾಗೂ ಮೆಸೇಜ್ಗಳು.ತಲೆಕೆಡುವಷ್ಟು,ಹಾಗಂತ ಯಾರ ಮೇಲು ಕೋಪ ಮಾಡಿಕೊಳ್ಳುವ ಹಾಗಿಲ್ಲ,ಕಾರಣ ಇಷ್ಟೆ ಅವರೆಲ್ಲರು ನನ್ನ ಆಪ್ತ ವಲಯ.ಹೋಗ್ಲಿ ಮನಕ್ಕೆ ಖುಷಿ ಕೊಡುವಂತಹ ಮೆಸೇಜ್ ಗಳ ಅದು ಅಲ್ಲ,ಇತ್ತೀಚೆಗೆ ಎಲ್ಲರ  ಮನದಲ್ಲಿ ಹೊಕ್ಕಿರುವುದು  ಪ್ರಳಯದ ಭೂತದ ಮೆಸೇಜ್ಗಳು.ಅಕಸ್ಮಾತ್ 1012  ಪ್ರಳಯದ ನಂತರ  ನಾವು ಸತ್ತು ಪುನರ್ಜನ್ಮ ಎತ್ತಿದರೆ ನೀನು ನನಗೆ ಏನಾಗ ಬಯಸುತ್ತಿಯ? ಆಪ್ಷನ್ಗಳು...ಸರಿ ಉತ್ತರ ಕೊಟ್ಟಾಗ ಕೆಲವರಿಗೆ ಇಷ್ಟ ಆಗ್ತಾ ಇತ್ತು,ಒಂದಷ್ಟು ಜನರು ಛೇ ಹೌದ ಅನ್ನುವ ಬೇಸರ ವ್ಯಕ್ತಪಡಿಸಿದ್ದರು.ವಿಜಯ ಕರ್ನಾಟಕದ ಹಾಸನದ ಸ್ಥಾನಿಕ  ಸಂಪಾದಕ ನನ್ನ  ಆತ್ಮೀಯ ಮಿತ್ರ ರಾಕೇಶ್ ಪೂಂಜಾ ಓದಿದ್ದು ಬರೆದದ್ದು ಸಾಕು ಇನ್ನೇನು ಪ್ರಳಯ ಆಗುತ್ತೆ,ಆಮೇಲೆ ಎಲ್ ಕೆಜಿಯಿಂದ ಓದೋದು ಇದ್ದೆ ಇದೆಯಲ್ಲ ಎನ್ನುವ ತುಂಟ ಮೆಸೇಜ್ ಕಳುಹಿಸಿದ್ದರು,ನಾನು ತಕ್ಷಣ ಆಯ್ತು ಮಹರಾಯರೇ ಒಂದೇ ಶಾಲೆ ಹಾಗೂ ಸೆಕ್ಷನ್ಗೆ ಸೇರೋಣ  ಮುಂದಿನ ಜನ್ಮದಲ್ಲಿ ಅಂತ  ಪ್ರತಿಯುತ್ತರ ಕಳುಹಿಸಿದ್ದೆ,ಮುಂದಿನ ಜನ್ಮದಲ್ಲೂ  ಪುನಃ ನಿಮ್ಮ ಕಾಟವೇ  ಅನ್ನುವಂತೆ ನಗುವಿನ ಚಿತ್ರ ಹಿಂಬಾಲಿಸಿತ್ತು.ವಿಜಯ ಕರ್ನಾಟಕ ಪತ್ರಿಕೆಯ ಲವಲವಿಕೆಯ ಪುಟ ವಿನ್ಯಾಸಕ ನನ್ನ ಮತ್ತೊಬ್ಬ ಆತ್ಮೀಯ ಗೆಳೆಯ ಸತೀಶ್ ಕುಮಾರ್  ಅಯ್ಯೋ ಭಗವಂತ ಎನ್ನುವ ಕೂಗಿನ ಉತ್ತರ ಕಳುಹಿಸಿದ್ದರು! ಛೇ  !! :)
ಪ್ರಳಯ ಅನ್ನುವ ಪದವೇ ನಮ್ಮಲ್ಲಿ ಆತಂಕ ತರುತ್ತೆ, ಯಾಕೆ ಯಾಕೆ ? ಕಾರಣ ನಿಜ ಹೇಳ ಬೇಕು ಅಂದ್ರೆ ಆ ಭಯ ಎಲ್ಲ ಕಳೆದು ಕೊಂಡು ಬಿಡ್ತೀವಿ ಅನ್ನುವ ಮೂಲ ಅಂಶದ ಅಡಿಯಲ್ಲಿ ನಿಂತಿರುತ್ತದೆ.ಆದ್ರೆ ಕಳೆದುಕೊಳ್ಳುವ ಹಾಗೆನ್ನುವುದಕ್ಕಿಂತಲೂ ಈ ಪ್ರಳಯ  ಅನ್ನುವುದು ನಮ್ಮ ಬದುಕಲ್ಲಿ ಅದೆಷ್ಟು ಸರ್ತಿ ಬಂದು ಇಡೀ ಬದುಕನ್ನು ಮೂರಾ ಬಟ್ಟೆ ಮಾಡಿಲ್ಲ.ವರ್ಷಾನುಗಟ್ಟಲೆ ಪ್ರೀತಿಸಿದ ಹುಡುಗ ಕೈಕೊಟ್ಟಾಗ ಎಲ್ಲಿಯೂ  ನಿಲ್ಲದ ಸ್ಥಿತಿ  ಹೊಂದುವ ಹುಡುಗಿ, ಇಲ್ಲ ನಾನು ನಿನ್ನ ಫ್ರೆಂಡ್ ಗೆ ಮನ ಸೋತಿದ್ದು,ನಿನಗೆ ಹೇಗೆ ಹೇಳೋದು ಅಂತ ಸುಮ್ಮನೆ ಲವ್ ಮಾಡಿದೆ ಅಂದಾಗ ಮಂದೆಯಲ್ಲಿ ತನ್ನ ಅಮ್ಮನನ್ನು ಕಳೆದುಕೊಂಡ  ಎಳೆಗರುವಿನ ಸ್ಥಿತಿಯಂತಹ ಮನಸ್ತತ್ವ  ಹೊಂದುವ ಹುಡುಗ,ಅಷ್ಟು ವರ್ಷ ಸಾಕಿದ ಮಗಳು -ಮಗನಿಂದ ಸಿಗುವ ಅಪಮಾನ ,ಅವರು ನಿರೀಕ್ಷೆ ಮಾಡದಂತಹ ಬದಲಾವಣೆ,ಕಾರಣಗಳು ಹೆಚ್ಚಾಗ್ತಾನೆ ಹೋಗುತ್ತೆ.ಇದು ಬದುಕಿನಲ್ಲಿ ನಿರಂತವಾಗಿ  ನಡೆಯುತ್ತಿರುವ ಪ್ರಳಯಗಳು.ಆದರೆ ಇದನ್ನು ನಾವ್ಯಾರು ಹೇಳಿ  ಪರಿಹಾರ ಪಡೆಯೋಕೆ ಹೋಗಲ್ಲ,,ಯಾಕೆಂದ್ರೆ ಒಂದು ಪ್ರಳಯದ  ಸಂಭ್ರಮ ಮುಗಿದರೆ ಮತ್ತೊಂದು ಸಿದ್ಧವಾಗಿರುತ್ತದೆ. ಇವೆಲ್ಲ  ಒಂದು ರೀತಿ,ಮತ್ತೊಂದಿದೆ,ಅದು ನಾವೆ ಖುದ್ದು ನಮ್ಮ ತಲೆ ಮೇಲೆ ಎಳೆದುಕೊಳ್ಳುವ  ಪ್ರಳಯಗಳು.ಅದೇನೋ ಹೇಳ್ತಾರಲ್ಲ ಇರಲಾರದೆ ಇರುವೆ....! ಬೀದಿಯಲ್ಲಿ ಹೋಗುವ ಮಾರಿ.....! ಆಗ ಅನುಭವಿಸುವ ಆಘಾತ ಬೇಡಾ ನಮ್ಮ ಕಥೆ...! ನನ್ನ ಕಂಡ್ರೆ ಅವರಿಗೆ ಇಷ್ಟ ಎಂದು ತಿಳಿಯುವುದು,ಅವರು ಎಂದಿಗೂ ನನ್ನ ಕೈ ಬಿಡಲ್ಲ ಅಂತ ತಿಳಿಯುವುದು, ನಾವು ಅವರ ಬದುಕಿನ ಅವಿಭಾಜ್ಯ  ಅಂತ ತಿಳಿಯುವುದು.... ಇವೆಲ್ಲ  ನಮ್ಮ ತಪ್ಪು ಕಲ್ಪನೆ,ಭ್ರಮೆ ಅಂತ ತಿಳಿದಾಗ ಸಹ ನಮ್ಮ ಪರಿಸ್ಥಿತಿ ಹೇಗಿರುತ್ತೆ ಅಂತ ಹೇಳುವಷ್ಟೇ ಇಲ್ಲ! ಪ್ರಕೃತಿಯಲ್ಲಿ ನಡೆಯುವ ಪ್ರಳಯದಿಂದ ಜೀವ ಒಂದೇ ಏಟಿಗೆ ಹೊರತು ಹೋಗಿ ಬಿಡುತ್ತೆ,ಆದರೆ ಬದುಕಿನಲ್ಲಿ ನಡೆಯುವ ಇಂತಹ ಪ್ರಳಯಗಳು  ಪ್ರತಿ ಕ್ಷಣ ನಮ್ಮನ್ನು ಸಾಯಿಸುತ್ತಲೇ  ಇರುತ್ತದೆ,ಇದಕ್ಕೆ ಪರಿಹಾರ ಇದೆಯಾ ????????????

Saturday, November 28, 2009

ಜ್ಞಾಪಕ ಇರಲಿ


ಇತ್ತೀಚೆಗೆ ನೀನು ಯಾವುದೇ ಪುಸ್ತಕದ ಬಿಡುಗಡೆ,ಒಟ್ಟಾರೆ ಎಲ್ಲೂ ಕಾಣ್ತಾನೆ ಇಲ್ಲ ಅಂತ ಸಣ್ಣಗೆ ರೇಗಿದ ಗೆಳೆಯ... ಮಾತು ಮುಂದುವರೆಸುತ್ತಾ  ನಿಜ ತಾನೇ ನನ್ ಮಾತು ಎಂದು ಕೇಳಿದ.ನೂರಕ್ಕೆ ನೂರಷ್ಟು ನೂರು ನಿಜ ಕಣಪ್ಪ ಎಂದು ಹೇಳಿ ನಕ್ಕೆ.ಕೇವಲ ಇತ್ತಿಚೆಗಲ್ಲ, ಈ ವರ್ಷದಲ್ಲಿ ಜನವರಿಯಿಂದ ಈವರೆಗೂ ಯಾವುದೇ ಕಾರ್ಯಕ್ರಮಕ್ಕೂ ಭಾಗವಹಿಸಿಲ್ಲ,ಅದರಲ್ಲಂತೂ  ಪುಸ್ತಕದ ಬಿಡುಗಡೆಗೆ ಉಹುಂ ಹೋಗೆ ಇಲ್ಲ ಬೇಕಾದಷ್ಟು ಸಮಯ ಇದ್ರು...ಎಂದು ಹೇಳಿದೆ,ಯಾಕೇಂತ ಅಂದ ಗೆಳೆಯ,ನನ್ನ ಮಾತು ಆಶ್ಚರ್ಯ ತರಿಸಿತ್ತು.ಪುಸ್ತಕ ಬಿಡುಗಡೆ ಮಾತ್ರವಲ್ಲ  ಕೆಲವು ಸಂಗತಿಗಳು ನನಗೆ ಅತ್ಯಂತ ಪ್ರಿಯ ಎನ್ನುವ ಸಂಗತಿ ಗೆಳೆಯ ಬಲ್ಲ,ಅಂತಹುದರಲ್ಲಿ ಈ ದಿವ್ಯ ಮೌನದ ಬಗ್ಗೆ ಸಣ್ಣ ಆತಂಕ.ಇಲ್ಲ ಗೆಳೆಯ ನೀನುತಿಳಿದಿರುವಂತೆ ಏನು ಆಗಿಲ್ಲ ,ಯಾಕೋ ಬೇಡ ಅಂತ ಅನ್ನಿಸಿತು,ಮುಖ್ಯವಾಗಿ ನಾನು ಒಬ್ಬಳು ಹೋಗದೆ ಇದ್ರೆ ಹಾಗೂ ನನ್ನಂತಹವಳು ಒಬ್ಬಳು ಪುಸ್ತಕ ಓದದೆ ಇದ್ರೆ ಆ ರೈಟರ್ ಗೆ ಯಾವುದೇ ರೀತಿಯ ನಷ್ಟ ಆಗಲ್ಲ ಈ ಸತ್ಯ ನೀನು ಬಲ್ಲೆ.ಅದಲ್ಲದೆ ಸಾಕಷ್ಟು ಜನರ ಜೊತೆ  ಒಂದೊಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರು,ಅವರ ಪುಸ್ತಕ ಓದಿದರೂ ಒಂದು ಸಲಕ್ಕೂ ನಾನು ಅವರ ನೆನಪಿನ ಬುತ್ತಿಯ ತುತ್ತಾಗಲೇ ಇಲ್ಲ :) .ಆದ್ರೆ ನಾನು ಎಲ್ಲರಿಗು ಗೊತ್ತು ಅನ್ನುವ ಹುಂಬ ಭ್ರಮೆಯಲ್ಲಿ ಬದುಕಿದೆ.ಅದು ಸುಳ್ಳು ಅಂತ ಗೊತ್ತಾದ ನಂತರವೂ  ಪದೇಪದೆ ಒಂದೇ ರೀತಿಯ ತಪ್ಪು ಮಾಡುವುದರಿಂದ ನನಗೆ ನಾನು ಮೋಸ ಮಾಡಿಕೊಂಡ೦ಗೆ ಅಲ್ವ ! ಹಾಗೆ ಅನ್ನಿಸೋಕೆ ಶುರು ಆಯ್ತು.ನನ್ನ ಗಮನ ಸ್ವಲ್ಪ ಛಿದ್ರ ಛಿದ್ರ  ಆಗೋಕೆ ಆರಂಭ ಆಯ್ತು,ಉಹುಂ ಇಂತಹ ಸ್ವಭಾವ ನನ್ನದಲ್ಲ,ಅದಕ್ಕೆ ಕಾರಣ ಯೋಚಿಸಿದಾಗ ತಿಳೀತು,ನನ್ನ ಕಾಯಿಲೆಗೆ ನಾನೇ ಮದ್ದು ಅಂತ....!  ಗೊತ್ತಾದ ಬಳಿಕವು ನಾನು ಸುಮ್ಮನೆ ಇದ್ರೆ  ಕಾಯಿಲೆ ಜಾಸ್ತಿ ಆಗುತ್ತೆ  ಅಲ್ವ?! ನಿನಗೆ ಇನ್ನೊಂದು ಸಂಗತಿ ಹೇಳ್ ಬೇಕು ಇತ್ತೀಚೆಗೆ ದಟ್ಸ್  ಕನ್ನಡ ಸಂಪಾದಕ  ಶಾಮ ಸುಂದರ್ ಅವರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿ ಕುಳಿತು ಬಿಟ್ಟಿದ್ರು.ನನಗೆ ಪರಿಚಯ ಆದ ದಿನದಿಂದ ಹಾಗೆ ಮಾಡಿದ್ದು ಕಂಡಿರಲಿಲ್ಲ ,ಕೊನೆಗೆ ಸ್ವಲ್ಪ ಹೊತ್ತಾದ ಬಳಿಕ ಆನ್ ಮಾಡಿದರು,ಆಶ್ಚರ್ಯ ಚಕಿತಳಾಗಿ ಕೇಳಿದೆ ಇದೇನು ಹೀಗೆ ಅಂತ...! ಇಲ್ಲ ಸುಮ್ನೆ ಕಷ್ಟ ಆಗುತ್ತೆ ಕೆಲಸ ಮಾಡೋಕೆ,ಮತ್ತೊಂದು ಕೆಲವು ಫೋನ್ಗಾಗಿ  ನಾವು ಕಾಯ್ತಾ ಇರ್ತೀವಿ ಆದರೆ ಅದು ಬರೋದೆ ಇಲ್ಲ....! ಹೇಳ್ತಾ ಹೋದರು, ಆ ಬಳಿಕ ನಾನು ನಕ್ಕು ಹೇಳಿದ್ದು ನನ್ ಪ್ರಕಾರ  ನಮ್ಮ ಬದುಕಿನ ಬಗ್ಗೆ ಕಾಳಜಿ ವಹಿಸುವವರು ಕೆಲವೇ ಕೆಲವರು,ಅವರಿಗೆ ನಮ್ಮ ಸಣ್ಣಪುಟ್ಟ ಬೇಸರಗಳು ದೊಡ್ಡದಾಗಿ ಕಾಣುತ್ತೆ, ಅವರು ನಾವು ಬ್ಯಾಡ ಅಂತ ಅಂದ್ರು ನಮ್ಮನ್ನು ಸಂಪರ್ಕಿಸುತ್ತ  ಇರ್ತಾರೆ,ಸಾಕಷ್ಟು ಸರ್ತಿ ನಾವು ಮೂರ್ಖತನದಿಂದ ಸ್ವಿಚ್ ಆಫ್  ಮಾಡಿ ,ಮನದ ಬಾಗಿಲು ಮುಚ್ಚಿಟ್ಟು  ಸ್ವಸ್ಥವಾಗಿ ಕುಳಿತು ಬಿಟ್ಟಿರುತ್ತೇವೆ.,ನಾವು ಬಾಗಿಲು ತೆಗೆದಾಗ ಆ ಹೃದಯವಂತರು ಮಿಸ್ ಆಗಿ ಬಿಟ್ಟಿರುತ್ತಾರೆ ,ಯಾಕೆಂದ್ರೆ  ನಮ್ಮಂತೆ ಅವರಿಗೂ ಸಮಯ ಬಹಳ  ಮುಖ್ಯ ! ಸಿಕ್ಕ ಅಮೃತ ಕಲಶ ಕೈಯಾರೆ ನಾವೆಬಿಸಾಕಿ ಬಿಟ್ಟು ಆಮೇಲೆ ಅದಕ್ಕಾಗಿ  ಹುಡುಕಿದರೆ ಅದು ಮತ್ತೊಬ್ಬರ ಕೈಗೆ ಸಿಕ್ಕಿರುತ್ತೆ, ಶಾಶ್ವತವಾಗಿ ಕಳೆದುಕೊಂಡ ನಮಗೆ ಚಡಪಡಿಕೆ  ಮಾತ್ರ  ಸಿಕ್ಕೋದು.ಯಾಕೆಂದ್ರೆ ನಾವು ಮರೆತರೆ ಅವರಿಗೆ ಜ್ಞಾಪಕ ಇಟ್ಟುಕೊಳ್ಳುವ ದರ್ದು ಇರಲ್ಲ .ಪ್ರೀತಿಸುವ- ಕಾಳಜಿ ವಹಿಸುವವರನ್ನು ಎಂದಿಗೂ ಬಿಟ್ಟು ಕೊಡ ಬಾರದು.ನಿಮ್ಮ ಫೋನ್ ಬುಕ್ ನಲ್ಲಿ ಇರುವ ಅಷ್ಟು ಹೆಸರಲ್ಲಿ  ಈ ಲಿಸ್ಟ್ ಗೆ ಸೇರಿದವರು ಕೇವಲ ಎಂಟರಿಂದ ಹತ್ತು ಜನ ಇರಬಹುದು, ಅವರನ್ನು ಎಂದಿಗೂ ಬಿಡಬೇಡಿ...! ಅಕಸ್ಮಾತ್  ದಿವ್ಯ ಮೌನದ ಅಗತ್ಯ ಇದೆ ಅಂದಾಗ ಪುಟ್ಟ  ಸಹನೆ ತೆಗೆದುಕೊಂಡು ಆ ಕೆಲವೇ ಜನಕ್ಕೆ ಸ್ವಲ್ಪ ಹೊತ್ತು ನಾನು ಸಿಗಲ್ಲ ಅಂತ  ಮೆಸೇಜ್ ಮೂಲಕಹೇಳಿಬಿಡಿ. ಇದು ನನ್ನ ಅಭಿಪ್ರಾಯ,ಸಾರಿ ನಾನು ಹೀಗೆ ಒಂದುಚೂರು ತಲೆಹರಟೆ  ಎಂದುಹೇಳಿದೆ,ಶಾಮ್ ಜೋರಾಗಿ ನಕ್ಕು ಸ್ವೀಟ್ ಈಡಿಯಟ್  ಎಂದರು. ..! ಮಾತು ಎಲ್ಲಿಗೋ ಹೊಯ್ತಲ್ವ ಗೆಳೆಯ,ನಿನಗೂ ನನ್ನ ಸಲಹೆ ಎಂದಿಗೂ ಮರೆತವರ ಬಳಿ ನಿನ್ನ ಬಗ್ಗೆ ಜ್ಞಾಪಿಸಲು ಹೋಗಬೇಡ...! ಗೆಳೆಯ ಅಕ್ಕರೆಯಿಂದ ನಕ್ಕ !

Wednesday, September 23, 2009

ಸತ್ಯ ಒಪ್ಪಿಕೊಳ್ತೇನೆ!

ನೀವು ಎಂತಹ ಸಂದರ್ಭದಲ್ಲೂ ಕೋಪ ಮಾಡಿಕೊಳ್ಳುವುದಿಲ್ಲ ,ಕೆಲಸದಲ್ಲಿ ಒತ್ತಡ ಹೊಂದಿರುವುದಿಲ್ಲ,ಸಿಕ್ಕಾಪಟ್ಟೆ ಬೇಸರ ಆಗಿದ್ರು ಅದನ್ನು ಬೇರೆಯವರ ಮೇಲೆ ತೋರಿಸೊಲ್ಲ ನಿಮ್ಮ ಈ ಗುಣ ನನಗೆ ತುಂಬಾ ಇಷ್ಟ ಆಗುತ್ತದೆ ಅಂತ ಗೆಳತಿ ಒಬ್ಬಳು ಹೇಳಿದಳು.ನಾನು ಮಾತನಾಡಲಿಲ್ಲ.ನಾನ್ ನೋಡಿ ಯಾವುದೋ ಕೋಪ ಯಾರ ಮೇಲೋ ಹಾಕಿ ನನ್ನ ಮನಸ್ಸನ್ನು ಸರಿ ಮಾಡಿಕೊಂಡು ಬಿಡ್ತೀನಿ,ಆದರೆ ನಿಮ್ ರೀತಿಯ ಗುಣ ಬೆಳೆಸಿಕೊಳ್ಳುವುದು ಅಂದ್ರೆ ಕಷ್ಟದ ಕೆಲಸ ಹೀಗೆ ಯಾಕೋ ಗೆಳತಿ ಮನಸ್ಸನ್ನು ಬಿಚ್ಚಿ ಮುಂದಿಟ್ಟಳು.ಏನು ಹೇಳಲು ತೋಚದೆ ಥ್ಯಾಂಕ್ಸ್ ಅಂತ ಹೇಳಿ ನಕ್ಕೆ.ನಾನು ಸಹನೆ ಹೊಂದಿದ್ದೇನೆ ಅಂತ ನೀವು ಹೇಳ್ತೀರಿ ಆದರೆ ತುಂಬಾ ಜನರು ನನಗೆ ಸಹನೆ ಕಡಿಮೆ ಅಂತ ಹೇಳ್ತಾರೆ,ಹೋಗ್ಲಿ ಬಿಡಿ ಎರಡು ಅಭಿಪ್ರಾಯವನ್ನು ಸ್ವೀಕರಿಸಿ ಬಿಡ್ತೀನಿ ಅಂತ ಹೇಳಿದೆ. ಅದಕ್ಕವಳು ಇಲ್ಲ ಜಯ್ ನಿಮ್ಮನ್ನು ಕಳೆದ ನಾಲ್ಕು ವರ್ಷಗಳಿಂದ ಕಂಡಿದ್ದೇನೆ,ಆದರೆ ಎಂದಿಗೂ ಕೆಲಸದ ವಿಷಯದಲ್ಲಿ ಲೋಪ ಮಾಡಿಲ್ಲ,ನೀವು ಎಂತಹ ಸಂದರ್ಭದಲ್ಲೂ ಮುಖದಲ್ಲಿರುವ ನಗೆಯನ್ನು ಕಡಿಮೆ ಮಾಡಿಕೊಂಡಿಲ್ಲ ಅದರ ರಹಸ್ಯ ಏನು ಅಂತ ಒಂದೇ ಸಮನೆ ವರಾತ ಹಿಡಿದು ಬಿಟ್ರು .ನಿಜ ಹೇಳಲಾ ಗೆಳತಿ,ನಾನು ಸತ್ಯವನ್ನು ಒಪ್ಪಿಕೊಳ್ಳುವ ಗುಣ ಬೆಳೆಸಿಕೊಂಡಿದ್ದೇನೆ.ಅಂದರೆ ನನಗೆ ಸಂಬಂಧಪಟ್ಟ ಸತ್ಯ ಯಾವುದೇ ಆಗಿರಲಿ ಸ್ವೀಕರಿಸುತ್ತೇನೆ ಅದೆಷ್ಟೇ ಕಹಿ ಆಗಿದ್ರು.ಪ್ರಾಯಶ: ಆ ಅಂಶ ನನ್ನನ್ನು ಸದಾ ಸಮಚಿತ್ತ ಕಾಪಾಡಿಕೊಳ್ಳುವುದಕ್ಕೆ ಕಾರಣ ಆಗಿರಬಹುದು.ನನ್ನ ಗೆಲುವಿಗೆ ನಾನೆಷ್ಟು ಕಾರಣ ಆಗಿರ್ತೇನೋ,ಅದೇ ರೀತಿ ನನ್ನ ಸೋಲಿಗೂ ನಾನೇ ಕಾರಣ ಆಗಿರ್ತೀನಿ.ಕೆಲವು ಅಂಶಗಳಿಗೆ ಪರಿಹಾರ ಇಲ್ಲದಾಗ ಯೋಚಿಸಿ ಪ್ರಯೋಜನ ಇರುವುದಿಲ್ಲ.ನನ್ನ ಮನಸ್ಸು ಸದಾ ಹಸಿರಾಗಿ ಇರುವಂತೆ ನನಗೆ ನಾನು ಉತ್ತಮ ರೀತಿಯಲ್ಲಿ ಕೌನ್ಸಿಲಿಂಗ್ ಮಾಡಿಕೊಳ್ತೀನಿ.ನಮ್ಮ ಅಮ್ಮ ಒಂದು ವಿಷ್ಯ ಸದಾ ಹೇಳ್ತಾ ಇರ್ತಾರೆ,ನಿನಗೆ ಕೆಲಸದ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಇರಬಾರದು,ಯಾಕೆ ಗೊತ್ತ, ನಿನಗೆ ಎಷ್ಟೇ ಆಪ್ತರಾಗಿದ್ದರು ಅವರ ಮನೆಯಲ್ಲಿ ಅರ್ಧಗಂಟೆ ಹೆಚ್ಚು ಇರೋಕೆ ಸಾಧ್ಯಾನ? ಅವರಿಗೆ ನೀನೂ ಸಹಾಯ ಮಾಡಿರ ಬಹುದು ಆದರೆ ಅದನ್ನು ಅವರು ಬಹಳಷ್ಟು ಸಂದರ್ಭಗಳಲ್ಲಿ ಗುರುತಿಸಿ ಇರೋದಿಲ್ಲ .ನಿನಗೆ ಸಂದ ಬೇಕಾದ ಆದರವನ್ನು  ಮತ್ತೊಬ್ಬರು ಎಂಜಾಯ್ ಮಾಡ್ತಾ ಇರ್ತಾರೆ .ಅದು ಲೋಕ ನಿಯಮ,ಆದರೆ ನಿನ್ನ ದುಡಿಮೆ ಸ್ಥಳದಲ್ಲಿ ಹಾಗಲ್ಲ ಕೆಲಸ ಸಿಕ್ಕ ಕಡೆ ಅದರ ಮಾಲೀಕ-ಮುಖ್ಯಸ್ಥ ನೀನೂ ಪ್ರತಿದಿನ ಹೋದರು ಬೇಸರ ಮಾಡಿಕೊಳ್ಳುವುದಿಲ್ಲ,ನೀನೂ ಹೆಚ್ಚು ಸಮಯ ಕೆಲಸ ಮಾಡುತ್ತಾ ಅಲ್ಲೇ ಇದ್ದರೆ ಬೇಸರ ಹೊಂದದೆ ಮತ್ತೂ ಖುಷಿ ಪಡ್ತಾನೆ,ಅದೇ ರೀತಿ ನಿನಗೆ ತಪ್ಪದೆ ಪ್ರತಿ ತಿಂಗಳು ನಿನ್ನ ದುಡಿಮೆಗೆ ಪ್ರತಿಫಲ ಕೊಡ್ತಾನೆ ,ಇಲ್ಲಿ ಜಾಸ್ತಿ ಕಡಿಮೆ ಅನ್ನುವ ಅಂಶಕ್ಕೆ ಮಹತ್ವ ನೀಡಬಾರದು.ನೀನೂ ಕುಳಿತುಕೊಳ್ಳಲು ಸ್ಥಳ,ನಿನಗೊಂದು ಸ್ಥಾನ...ಹೀಗೆ...! ಎಲ್ಲವು ಸಿಕ್ಕಿರುತ್ತಲ್ಲ ಮಗಳೇ...ಆದ್ದರಿಂದ ಕೆಲಸವನ್ನು ಪ್ರೀತಿಸು,ನೀನಿರುವ ಸ್ಥಳದ ಬಗ್ಗೆ ಗೌರವ ಹೊಂದಿರು ಅಂತ ಹೇಳ್ತಾರೆ,ಇದು ನನ್ನ ಸೋಲಿನ ಸಂದರ್ಭದಲ್ಲಿ ನೆನಪಿಸಿಕೊಳ್ತೀನಿ.  ನನ್ನ ಹೃದಯಕ್ಕೆ ಅತಿ ಹೆಚ್ಚು ನೋವು ಆಗಲ್ಲ ಅಂತೇನೂ ಇಲ್ಲ ಡಿಯರ್,ಆಗ ನನ್ನ ಎಡಗೈ ಎತ್ತದೆ ಇರುವಷ್ಟು ನೋವಾಗುತ್ತದೆ.ಬಲಗೈ ಮೂಲಕ ಅದರ ನೋವು ಪರಿಹಾರ ಮಾಡಿಕೊಳ್ತೀನಿ.ನಿಮಗೆ ಗೊತ್ತಲ್ಲ ನಾನು ಲೆಫ್ಟಿ !!
ಆದರು ಕಳೆದ ವಾರ ದಿಂದ ಸಣ್ಣ ಡಿಪ್ರೆಶನ್ ನಲ್ಲಿ ಇದ್ದೇನೆ.ಹಿಂದಿನವಾರ ನನ್ನ ತಂದೆ ಅವರ ತಿಥಿ .ಹಲವು ವರ್ಷಗಳ ಹಿಂದೆ ನನ್ನಪ್ಪ ಅಪಘಾತದಲ್ಲಿ ಮರಣಿಸಿದರು.ಆ ಸಮಯದಲ್ಲಿ ಅವರ ಜೊತೆ ಅವರ ಗೆಳೆಯರೊಬ್ಬರು ಹೋಗಬೇಕಾಗಿತ್ತು,ಆದರೆ ಕಾರಣಾಂತರಗಳಿಂದ ಅವರು ನನ್ನ ಅಪ್ಪನ ಜೊತೆ ಹೋಗಲಿಲ್ಲವಂತೆ.ಅವರು ಬದುಕುಳಿದರು,ಆದರೆ ಕಳೆದವಾರ ಅದೂ ಇಷ್ಟು ವರ್ಷಗಳಾದ ಬಳಿಕ ನಮ್ಮ ತಂದೆ ಶ್ರಾದ್ಧದ ದಿನ ಅವರ ಸಾವು ಆಕ್ಸಿಡೆಂಟ್ನಲ್ಲಿ ಆಯಿತು,ಆದರೆ ಸತ್ತಿದ್ದು ಕರೆಂಟ್ ಶಾಕ್ನಿಂದ! ಮಳೆ ಬಿದ್ದಿತ್ತಲ್ಲ,ಮೊಮ್ಮಗನನ್ನು ಕರೆದುಕೊಂಡು ತೋಟಕ್ಕೆ ಹೋದರಂತೆ,ಅಲ್ಲಿ ಎಲೆಕ್ಟ್ರಿಕ್ ವೈರ್ ದಾರಿಗೆ ಅಡ್ಡವಾಗಿ ಬಿದ್ದಿತಂತೆ,ಅದನ್ನು ಅವರು ಕಾಲಲ್ಲಿ ಸರಿಸಿದ್ದಾರೆ,ಅಷ್ಟೆ ಅಜ್ಜ-ಮೊಮ್ಮಗ ಸ್ಪಾಟ್ ! ಅಲ್ಲಿಗೆ ಬಂದವರು ಅಪ್ಪನನ್ನು ಬಹಳ ಜ್ಞಾಪಿಸಿ ಕೊಂಡರಂತೆ. ಇಡಿ ದಿನ ತುಂಬಾ ದುಃಖ ಆಗಿತ್ತು,ಯಾರಿಗೂ ಹೇಳದೆ ದುಃಖಿಸಿದೆ,ನನ್ನ ಬೇಸರ ಅಲ್ವ ಎಂದು ಹೇಳಿದೆ ನಗುತ್ತಾ .ಗೆಳತಿ ಮೌನವಾಗಿ ಕೈ ಹಿಡಿದಳು.

Saturday, August 29, 2009

ಹೆಚ್ಚು ಸೇಫ್ಟಿ

ಗಣೇಶ ಹಬ್ಬದ ದಿನ ಅಣ್ಣನ ಫ್ರೆಂಡ್ ಅವರ ಮಗಳು ಬಂದಿದ್ದರು.ಆ ಮಗು ಪ್ರಾಯಶ: ಆರನೇ ಕ್ಲಾಸ್ ಇರ ಬೇಕು.ಸಂಜೆ ಬಂದವಳ ಬಳಿ ಅಮ್ಮ ಹಾಡು ಹೇಳು ಮರಿ ಅಂತ ಅಂದ್ರು,ಆ ಮಗು ತಕ್ಷಣ ಜೋರಾಗಿ ಶ್ಲೋಕ, ಹೇಳಲು ಆರಂಭ ಮಾಡಿ ಬಿಟ್ಲು,ಇರುವ ಅರ್ಧ ಗಂಟೆಯಲ್ಲೇ ಅವಳು ಇದ್ದ ಬದ್ದ ಹಾಡು ,ತನಗೆ ಗೊತ್ತಿರುವ ಡ್ಯಾನ್ಸ್,ಎಲ್ಲವು ಮುಗಿದು ಹೋಯ್ತು.ತುಂಬ ಚುರುಕಾದ ಮಗು,ನಿನ್ ಹೆಸರೇನು ಮಗು ಅಂತ ಬಂದ ಸ್ವಲ್ಪ ಹೊತ್ತಿನಲ್ಲೇ ಕೇಳಿದ್ದರು ಅಮ್ಮ,ಅವಳು ಮಾಳವಿಕಾ ಅಂತ ಉತ್ತರ ಕೊಟ್ಟಿದ್ದಳು,ಅರ್ಧಗಂಟೆ ಆದ ಬಳಿಕ ಈ ಹೆಸರು ಇಟ್ಟುಕೊಂಡ ವರೆಲ್ಲರೂ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿರ್ತಾರಲ್ಲ ಅಂತ ಅನ್ನಿಸಿದ್ದು ಸತ್ಯ! ನನ್ನ ಹೆಸರಿನಲ್ಲಿ ಗೆಲುವಿದೆ,ಆದರೆ ನನಗೆ ಗೆಲುವು ಸಿಕ್ಕಿದ್ದು ತುಂಬಾ ಕಡಿಮೆ.ಸ್ನೇಹ,ಬಾಂಧವ್ಯ ಎಲ್ಲದರಲ್ಲೂ ಸೋಲು...ಸೋಲು....! ಅದಕ್ಕೆ ನಾನು ಈಗಂತೂ ಹೆಚ್ಚು ಬಾಂಧವ್ಯ,ಸ್ನೇಹಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಲ್ಲ.ಚಿಕ್ಕವಳಾಗಿದ್ದಾಗ ನಾನು ಸದಾ ಗಜಮುಖನೆ ಗಣಪತಿಯೇ ಅನ್ನುವ ಹಾಡು ಹೆಚ್ಚು ಹೇಳ್ತಾ ಇದ್ದೆ.ನಮ್ಮ ದೊಡ್ಡಮ್ಮ ಮಂಗಳೂರಲ್ಲಿ ಇದ್ದರು,ರಜೆ ಕಳೆಯಲು ಅಲ್ಲಿಗೆ ಹೋಗಿದ್ದೆ,ಆಗ ಕೇವಲ ನಾಲ್ಕು ವರ್ಷ,ಮಂಗಳೂರಿನಲ್ಲಿ ಬೊಂಬೆ ಹಬ್ಬ,ಅಲ್ಲಿ ಯಾರ ಮನೆಗೆ ಕರಿಯಲಿ ಹೋಗಿ ತಪ್ಪದೆ ಗಜಮುಖನೆ ಹೇಳಿ ಪಣ್ಯಾರ ತಗೊಂಡು ಬರ್ತಾ ಇದ್ದೆ,:) ನನ್ನ ಹಾಡು ಕೇಳೋಕೆ ತಪ್ಪದೆ ನನ್ನನ್ನು ಅರಿಸಿನ ಕುಂಕುಮಕ್ಕೆ ಕರೆಯೋರು.ಧ್ವನಿ ಪಕ್ಕ ಕೀರಲೂ ಅಂದ್ರೆ ಕೀರಲು! ಯಾರಿಗೂ ಕೇರ್ ಮಾಡದೆ ಹಾಡು ಹೇಳಿ ಬಿಸಾಕ್ತಾ ಇದ್ದೆ.ಬದುಕು ನನ್ನನು ಪ್ರೀತಿಸಲಿಲ್ಲ ಅಂದ್ರು ನಾನು ಎಂದಿಗೂ ಧೃತಿಗೆಡಲಿಲ್ಲ,ಪ್ರಾಯಶ: ನನ್ನ ಬಾಲ್ಯದ ಆ ಧೈರ್ಯದ ಗುಣ ಒಂದಂಶ ನನ್ನನ್ನು ಮುನ್ನಡೆಸ್ತಾ ಇದೆ ಅಂತ ಕಾಣುತ್ತೆ.ಎಂತಹ ದುಃಖದ ಪರಿಸ್ಥಿಯಲ್ಲೂ ಅಳಲ್ಲ.ಆ ಗುಣ ಕೆಲವರಿಗೆ ಮಾದರಿ ಆದರೆ,ಒಂದಷ್ಟು ಜನ ಅಹಂಕಾರಿ ಅನ್ನುವ ಅವಾರ್ಡ್ ಕೊಟ್ಟಿದ್ದಾರೆ,ಅಳುವುದಕ್ಕಿಂತ,ಅವಾರ್ಡ್ ತೆಗೆದುಕೊಳ್ಳುವುದು ಹೆಚ್ಚು ಸೇಫ್ಟಿ.ಇದು ನನ್ನ ಅನುಭವ.

Thursday, August 20, 2009

ಇಷ್ಟು ಮಾಡಿ ಸಾಕು!


' ಅಷ್ಟು ಡೇ೦ಜರ್ರ?!' ಕುತೂಹಲ ತಡಿಯಲಾಗದೆ ಕೇಳಿದೆ.ನಗರ ಪ್ರಸಿದ್ಧ ವೈದ್ಯರು ಅವರು,ಅವರ ಪತ್ನಿಯು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ ಹೆಣ್ಣುಮಗಳು.ನನ್ನನ್ನು ಕಂಡ್ರೆ ಸ್ವಲ್ಪ ಜಾಸ್ತೀನೆ ಒಲವು ಈ ದಂಪತಿಗಳಿಗೆ.ಹಂದಿ ಜ್ವರದ ಗಲಾಟೆಯಿಂದ ಆಶ್ಚರ್ಯ ಹಾಗೂ ಆತಂಕದಿಂದ ಒದ್ದಾಡುತ್ತಾ ಇದ್ದ  ಅಸಂಖ್ಯಾತ ಜನರ ಪ್ರತಿನಿಧಿಯಂತೆ ಇತ್ತು ನನ್ನ ಧ್ವನಿ.ತಕ್ಷಣ ನಕ್ರು ಡಾಕ್ಟರ್. ಕಾಫಿ ಕುಡಿ ಮರಿ ಏನೂ ಆಗಲ್ಲ. ಅಂತ ಹೇಳಿ ನನ್ನ ಮುಂದೆ ಬಿಸ್ಕತ್ ಇಟ್ಟರು.ಆದರು ನಾನು ಬಿಡಲಿಲ್ಲ ,ಹಾಗಾದರೆ ಇದು ತೊಂದ್ರೆ ಕೊಡುವ ರೋಗ ಅಲ್ಲ ತಾನೇ ಅಂದೇ.ಅದಕ್ಕೆ ಅವರು ನೋಡ್ ಮಗು ಯಾರೇ ಆಗಲಿ ತಮ್ಮ ಶರೀರ,ಮನಸ್ಸು ಮತ್ತು ಪರಿಸರವನ್ನು ಶುಭ್ರವಾಗಿ ಇಟ್ಟುಕೊಂಡರೆ ಯಾವ ಸಮಸ್ಯೆಯು ಬಳಿಗೆ ಬರಲ್ಲ ಅಂತ ಅಂದ್ರು.ನಿಮ್ಮ ಮಾತು ನಿಜ ಅಂತ ಅಂದೇ.ನಿನಗೆ ಗೊತ್ತಿರುವ ಹಾಗೆ ಇದು ಒಂದು ಬಗೆಯ ಇನ್ಫ್ಲುಯನ್ಜಾ,ಈ ರೀತಿಯ ಸಮಸ್ಯೆಗಳು ಶೀತ ಪ್ರದೇಶದಲ್ಲಿ ಸಾಮಾನ್ಯ,ಆದ್ರೆ ಅದಕ್ಕೆ ಪೂರಕ ಔಷಧ ಕಂಡು ಹಿಡಿಯುವ ಕೆಲಸವೂ ಅಷ್ಟೇ ವೇಗವಾಗಿ ನಡಿಯುತ್ತೆ,ಅಷ್ಟರಲ್ಲಿ ಮನುಷ್ಯ ತನ್ನ ತಿಳಿಗೇಡಿತನದಿಂದ ಮತ್ತೊಂದು ಕಾಯಿಲೆ ತಂದು ಕೊಂಡಿರುತ್ತಾನೆ.ಇದು ಸಾಮಾನ್ಯ ಸಂಗತಿ,ನಾವು ಈಗೀಗ ನಿತ್ಯ ಅಗತ್ಯ ಅಂಶಗಳನ್ನು ಮರಿತಾ ಇದ್ದೇವೆ ,ಅದರ ಪರಿಣಾಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ.....! ಹೀಗೆ ಅನೇಕ ಅಂಶಗಳನ್ನು ಹೇಳಿದರು ವೈದ್ಯರು.ಅವರೊಂದಿಗೆ ಹರಟಿ ಹೊರ ಬಂದಾಗ ಒಬ್ಬ ಪುಟ್ಟ ಹುಡುಗಿ ಮಾಸ್ಕ್ ಹಾಕಿಕೊಂಡು ಬರ್ತಾ ಇದ್ಲು,ಈ ದೃಶ್ಯ ನಗರದಲ್ಲಿ ತುಂಬಾ ಸಾಮಾನ್ಯ ಆದ ಕಾರಣ ಅದರತ್ತ ಹೆಚ್ಚು ಗಮನ ಹರಿಸಲಿಲ್ಲ. ಶಾಲೆಯಿಂದ ಅಮ್ಮ ಮನೆಗೆ ಬಂದಿದ್ರು.ಅವರ ಬಳಿ ಡಾಕ್ಟರ ಜೊತೆ ನಡೆದ ಮಾತುಕಥೆ ಹೇಳಿದೆ.ಪರಿಸರ ಶುಭ್ರವಾಗಿ ಇಟ್ಟುಕೊಳ್ಳ ಬೇಕು ಅನ್ನುವ ಮಾತು ಸಹ ಬಹಳ ಮುಖ್ಯ.ನಮ್ಮ ಶಾಲೆಯಲ್ಲಿ ಕಸ ಗುಡಿಸುವವಳು ಒಂದು ಮಾತು ಹೇಳಿದ್ಲು ಗೊತ್ತ,ಇಷ್ಟು ದಿನ ಆ ಕಸ-ಈ ಕಸ ಅಂತ ಗುಡಿಸಿ ಗುಡಿಸಿ ಸಾಕಾಗಿತ್ತು,ಈಗ ಇನ್ನೊದು ಕಸ ಬೇರೆ ಹೆಚ್ಚಾಗಿದೆ ಎಂದು ಬೇಸರಿಸಿ ಕೊಂಡಳು ಅಂತ ಹೇಳಿ ನಕ್ರು,ಅರೆ ಹೌದಲ್ವಾ ಅಂತ ಅನ್ನಿಸಿತು.ನಾವು ನಮ್ಮ ಆರೋಗ್ಯದ ಜೊತೆಗೆ ಪರಿಸರವನ್ನು ಅನೇಕ ರೀತಿಯಲ್ಲಿ ಹಾಳು ಮಾಡ್ತಾ ಇದ್ದೇವೆ...ಹೀಗೆ ನನ್ನ ಯೋಚನಾ ಲಹರಿ ಸಾಗಿತ್ತು.ಸ್ವಲ್ಪ ಸಮಯದ ಬಳಿಕ ಅಂಗಡಿಗೆ ಹೋಗ ಬೇಕಾಯ್ತು.ಸೇಟು ಹುಡುಗರು ಅದರ ಯಜಮಾನರು.ಆ ಅಂಗಡಿಯಲ್ಲೂ ಇದೆ ಮಾತು.ಆಗ ಒಬ್ಬ ಹುಡ್ಗ ಹೇಳಿದ ಚಂದಾಗಿ ಬೆಳ್ಳುಳ್ಳಿ ತಿನ್ನಿ ಸರಿ ಆಗ್ತದೆ. ನೀವು ತಿನ್ನಲ್ಲ ಅಲ್ವ ಮತ್ತೆ ಎಲ್ಲರಿಗು ಈ ಔಷಧ ಹೇಳ್ತಾ ಇದ್ದೀರಿ, ಅಂದಾಗ 'ಅಮ್ಮ ಒಂದು ವಿಸ್ಯ ಹೇಳಲಾ... ಮನೆಯಲ್ಲಿ ಚಂದಾಗಿ ಊಟ ಮಾಡಿ,ಒಳ್ಳೆ ನೀರು ಕುಡೀರಿ ಕಣ್ತುಂಬ ನಿದ್ದೆ ಮಾಡಿ ಆಗ ಯಾವ ಕಾಯ್ಲಾ ನಿಮ್ಮ ಹತ್ರ ಬರಾಕಿಲ್ಲ 'ಅಂದ.ಅವನ ಮಾತು ಎಷ್ಟು ಸತ್ಯ !

Thursday, July 9, 2009

ಸಾಧ್ಯವೇ?!

'ಯಾರಾದ್ರು ಎದುರು ಸಿಕ್ಕರೆ ಚನ್ನಾಗಿ ಹೊಡೆದು ಬಿಡುವಷ್ಟು ಕೋಪ ಬಂದಿದೆ ನೀನು ಸಿಕ್ಕೇ ನನ್ ಹತ್ರ ಬೈಸಿಕೋ' ಅಂತ ಮಾತು ಶುರು ಮಾಡಿದಳು ಗೆಳತಿ.ತುಮಕೂರಿನ ಹೆಣ್ಣುಮಗಳು. ನಾನು ಕೆಲಸ ಮಾಡುವ ಕಡೆಯಲ್ಲಿ ಅಕೌ೦ಟೆಂಟ್.ಸ್ವಲ್ಪ ಓದುವ ಅಭ್ಯಾಸ ಆಕೆಗೆ.ಆಕೆ ತುಂಬ ಇಷ್ಟ ಪಟ್ಟು ಓದುತ್ತಿದ್ದ  ಲೇಖಕರೊಬ್ಬರ ಕೃತಿಗಳು ನನಗು ಇಷ್ಟವಾಗಿತ್ತು.ಇದೆ ನೆಪವಾಗಿ ಉತ್ತಮ ಸ್ನೇಹಕ್ಕೆ ದಾರಿ ಕೊಟ್ಟಿತ್ತು.ಸುಖ-ದುಃಖ ,ಸಂತೋಷ ಸಂಭ್ರಮ ಎಲ್ಲವು ಹಂಚಿಕೆ ಆಗ್ತಾ ಇರುತ್ತದೆ. ಆದರೆ ಆ ಗೆಳತಿಯ ಬದುಕು ಸಿಕ್ಕು ಸಿಕ್ಕು! ಒಂದನ್ನು ಬಿಡಿಸಿಕೊಂಡರೆ ಮತ್ತೊಂದು ಕಾಯ್ತಾ ಇರ್ತಾ ಇತ್ತು. ಅವಳ ಬೇಸರಕ್ಕೆ ಮುಖ್ಯ ಕಾರಣ ಒಂದರ್ಥದಲ್ಲಿ ನನ್ನ ಮೆಸೇಜ್ ಆಗಿತ್ತು.ಅಂದು ವಿಶ್ವ ಕ್ಷಮಾಯಾಚನಾ ದಿನ.ನನಗೆ ಆ ವಿಷ್ಯ ತಿಳಿದಿರಲಿಲ್ಲ,ನನ್ನ ಪುಟ್ಟ ಗೆಳತಿ ಒಬ್ಬಳು ಇದಕ್ಕೆ ಸಂಬಂಧಿಸಿದಂತೆ ಒಂದು ಮೆಸೇಜ್ ಮಾಡಿದ್ದಳು .ನಾನು ಅದನ್ನು ನನ್ನಿಂದ ಕಿರಿಕಿರಿಗೆ ಒಳಗಾದ ನನ್ನ ಆಪ್ತರಿಗೆ ಕಳುಹಿಸಿದೆ.ಯಾರಿಂದಲೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.ಆದರೆ ನನ್ನ ಗೆಳತಿ ಫೋನ್ ಮಾಡಿ ನನ್ನನ್ನು ಬೈದಳು.ಗಂಡ ಹಾಗೂ ಅಪ್ಪನಿಗೆ ಕಾಯಿಲೆ.ಮನೆಯಲ್ಲಿ ನಿಮಿಷ ಬಿಡುವಿಲ್ಲದಷ್ಟು ಕೆಲಸ,ಆಫೀಸಿನಲ್ಲಿ ಅಲುಗಾಡದಷ್ಟು ಜವಾಬ್ದಾರಿ,ಅದರ ಮಧ್ಯೆ ಆಗಾಗ ಆಫೀಸಿನಲ್ಲಿ ಕೆಟ್ಟು ಹಾಳಾಗುವ ಕಂಪ್ಯೂಟರ್ ,ಇವೆಲ್ಲದರ ಜೊತೆಗೆ ಕೆಲವು ಸಹೋದ್ಯೋಗಿಗಳ ಮಾಡುವ ಮಾನಸಿಕ ಹಿಂಸೆ,ಎಲ್ಲವನ್ನು ಹೇಳುತ್ತಾ ಅತ್ತೆ ಬಿಟ್ಟಳು.ನನಗೆ ಮಾತೆ ಹೊರಡಲಿಲ್ಲ.ಅಲ್ಲ ಕಣೆ ನನ್ನ ತಪ್ಪನ್ನು ಕ್ಷಮಿಸಿ ಬಿಡು ಅಂತ ಹೇಳಿದ್ದಿಯಲ್ಲ,ತಪ್ಪು ಮಾಡಿರುವ ವ್ಯಕ್ತಿಯನ್ನು ಸಾರಿ ಕೇಳಿದಷ್ಟು ಸುಲಭವಾಗಿ ಕ್ಷಮಿಸಲು ಸಾಧ್ಯವೇ? ಯೋಚಿಸು ಅಂತ ಹೇಳಿ ಮಾತು ಮುಗಿಸಿದಳು.ಅವಳು ಫೋನ್ ಇಟ್ಟಮೇಲೆ ಹಾಗೆ ಕುಳಿತೆ ಇದ್ದೆ,ಮಾತು ಆಡುವುದೇ ಬೇಡ ಅಂತ ಅನ್ನಿಸಿತ್ತು.ನನಗೆ ಅವಳು ಹೇಳಿದ ಕೊನೆ ಮಾತು ಗಾಢವಾಗಿ ಪರಿಣಾಮ ಬೀರಿತ್ತು.ನಿಜ ಅಲ್ವ ನಾವು ಬೇಕಾದಷ್ಟು ತಪ್ಪು ಮಾಡಿರ್ತೀವಿ,ಸಾಕಷ್ಟು ಸರ್ತಿ ಪಾಪದವರನ್ನು ನೋಯಿಸಿರುತ್ತಿವಿ,ಮಾತಲ್ಲೇ ಹೃದಯಕ್ಕೆ ಬರೆ ಹಾಕಿರ್ತೀವಿ, ನಮಗೆ ಅವರಿಗೆ ನೋವಾಗುತ್ತಿದೆ ಅಂತ ತಿಳಿದಿದ್ದರೂ ಪದೇಪದೆ ಅವರು ಇರಿಟೇಟ್ ಆಗುವ ವಿಷಯವನ್ನೇ ಆಡುತ್ತ ಮತ್ತಷ್ಟು  ಹರ್ಟ್ ಮಾಡಿರುತ್ತೇವೆ,ಸಾಕಷ್ಟು ತಪ್ಪುಗಳನ್ನು ಮಾಡಿರುತ್ತೇವೆ. ಇದು ತಪ್ಪು ಅಂತ ನಮಗೆ ಜ್ಞಾನೋದಯ ಆದ ಮೇಲೆ ಸಾರಿ ಕೇಳೋಕೆ ಹೊರತು ಬಿಡ್ತೀವಿ ವಿಶಾಲ ಮನಸ್ಸಿನವರಂತೆ!ನನ್ನ ಗೆಳತಿ ಹೇಳಿದಂತೆ ಸಾರಿ ಅಂತ ಕೇಳಿಬಿಟ್ಟರೆ ಮಾಡಿದ ತಪ್ಪನ್ನುಕ್ಷಮಿಸುವುದಕ್ಕೆ ಸಾಧ್ಯವೇ? ಏನೋ ನನಗೇನೂ ಗೊತ್ತಾಗ್ತಾ ಇಲ್ಲ!

Tuesday, June 16, 2009

ನನ್ನ ಅಸ್ತಿತ್ವ

'ಮೂರು ಕಾಸಿಗೂ ಪ್ರಯೋಜನ ಇರಲ್ಲ ಆದರೆ ತಮ್ಮನ್ನು ತಾವು ಉತ್ತಮ ಬರಹಗಾರರು ಅಂತ ತಿಳೀತಾರೆ.ಎರಡಕ್ಷರ ನೆಟ್ಟಗೆ ಬರೀದೆ ಇದ್ದರು ಅಹಂಕಾರಕ್ಕೆನೋ ಕಡಿಮೆ ಇರಲ್ಲ ' ಆತನ ಕೋಪ ಎಲ್ಲೇ ಮೀರಿತ್ತು.ಆ ಕೋಪ ನನ್ನ ಮೇಲೆ ಅಂತ ನನಗೆ ಚನ್ನಾಗಿ ಗೊತ್ತಿತ್ತು.ಮೌನವಾಗಿ ನನ್ನ ಪಾಡಿಗೆ ಕೆಲಸ ಮಾಡುತ್ತಿದ್ದೆ. ನನಗೆ ತುಂಬಾ ದುಃಖ ಆಗ್ತಾ ಇತ್ತು,ಆದರೆ ಮಾತಾಡಲಿಲ್ಲ.ಏನು ಅಸ್ತಿತ್ವ ಇಲ್ಲದೆ ಹೋದರು ಅಹಂಕಾರಕ್ಕೆನೂ ಕಡಿಮೆ ಇಲ್ಲ ಅಂತ ಆತ ಮಾತಿನ ಓಘ ಸಾಗಿತ್ತು.ನಾನು ಕೆಲಸ ಮಾಡುವ ಪತ್ರಿಕೆಗಳ ಒಂದಕ್ಕೆ ಆತ ಸಂಪಾದಕ.ಮಾಡಿದ ಕೆಲಸವನ್ನು ಮಾಡೇ ಇಲ್ಲ್ಲ ಅಂತ ನಿರ್ದಾಕ್ಷಿಣ್ಯವಾಗಿ ಹೇಳಿ ನನ್ನ ಮನಕ್ಕೆ ಬೇಸರ ತರಿಸಿದ್ದರು.ಕೆಲಸದ  ವಿಷಯದಲ್ಲಿ ನಾನು ಎಂದಿಗೂ ಹಿಂದೆ ಬಿದ್ದಿಲ್ಲ,ಅದು ನನ್ನ ಸ್ವಭಾವ,ಈತ ಒಟ್ಟಾರೆ ನನ್ನನು ಸೋಮಾರಿ ಅನ್ನುವ ಅರ್ಥದಲ್ಲಿ ಎಲ್ಲರ ಮುಂದೆ ಹೇಳಿದಾಗ ( ನೇರವಾಗಿ ಅಲ್ಲ) ಏನು ಮಾತಾಡುವ ಸ್ಥಿಯಲ್ಲಿ ನಾನು ಇರಲಿಲ್ಲ.ಆತ ಹೇಳಿದಂತೆ ನನಗೆ ಬರೆಯಲು ಬರದೆ ಇರ ಬಹುದು ಆದರೆ ಒಂದು ಪತ್ರಿಕೆ ನನಗೆ ಸುಮ್ಮನೆ ಜವಾಬ್ದಾರಿ ವಹಿಸಿಲ್ಲ ಎಂದು ಹೇಳುವ ಆಸೆ ಆದರು ಸುಮ್ಮನಾದೆ.ಅದಾದ ಕೆಲವು ದಿನಗಳ ನಂತರ ನನಗೆ ದಿನ ಪತ್ರಿಕೆಯೊಂದರ ಪತ್ರಕರ್ತ ನನಗೆ ನಿಮ್ಮ ಅಸ್ತಿತ್ವದ ಬಗ್ಗೆ ಸಂದೇಹವಿದೆ ಅಂತ ಹೇಳಿದ,ತುಂಬಾ ಆಶ್ಚರ್ಯ ಆಯ್ತು.ಯಾಕೆ ಹಾಗೆ ಅನ್ನಿಸಿತು ಅಂತ ಚಾಟ್ ಮಾಡ್ತಾ ಕೇಳಿದೆ,ಯಾಕೆ ಅಂತ ಅಂದ್ರೆ ನಿಮ್ಮ ಹೆಸರಿನ ಪತ್ರಕರ್ತರು ಇಲ್ಲ ಅಂತ ನಮ್ಮಲ್ಲಿ  ಹೇಳಿದರು,ಯಾರು ಈ ಮತ್ತು ಹೇಳಿದರೋ ಆ   ಹಿರಿಯ ಪತ್ರಕರ್ತರ ಹೆಸರು ಹೇಳಿದರು ಆತ.ನಗು ಬಂತು ನನಗೆ,ನಾನು ಸುಮ್ಮನಾಗದೆ ಹಾಗಾದರೆ ನಿಮ್ಮ ಪ್ರಕಾರ ನಾನು ಪತ್ರಕರ್ತೆಯಲ್ಲ ಅಲ್ವ ,ಆದ್ರೆ ನನ್ನ ಬಗ್ಗೆ ಹೇಳಿದ ಆ ವ್ಯಕ್ತಿಗೆ ನಾನೆಷ್ಟು ಗೊತ್ತು? ನನ್ನ ಬಗ್ಗೆ ಏನೇನು ಗೊತ್ತು ?ಅಂತ ಕೇಳಿದೆ,ಆದರೆ ಗೆಳೆಯ ಮಾತು ಬೆಳೆಸಲು ಇಚ್ಚಿಸಲಿಲ್ಲ.ಏನೇ ಆಗಿರಲಿ,ಅಸ್ತಿತ್ವ ಅನ್ನೋದು ಅಂದ್ರೇನು? ನನಗೆ ಏನುಹೇಳಲು ಆಗುತ್ತಿಲ್ಲ.

Monday, May 18, 2009

ಮಾರಲ್

'ಹೌದು ಜೇಜಮ್ಮ ಗಂಡ ಯಾರು ?' ಹಾಗಂತ ಶಿಲ್ಪ ಬಳಿ ಕೇಳಿದೆ. ತಕ್ಷಣ ಕೋಪದಿಂದ ಮುಖ ನೋಡಿದಳು.ಕಾರಣ ಇಷ್ಟೇ ,ಅಂದು ನನಗೆ ಸಿಕ್ಕಾಪಟ್ಟೆ ಜ್ವರ ಇತ್ತು.ಮನೆಯಲ್ಲಿ ಶಿಲ್ಪ ಹಾಗೂ ಕಲ್ಪ ಸೀರಿಯಸ್ಸಾಗಿ ಅರುಂಧತಿ ಅನ್ನುವ ತೆಲುಗು ಸಿನೆಮಾ ನೋಡುತ್ತಿದ್ದರು.ನಾನು ಅರೆಗಣ್ಣಲ್ಲಿ ನೋಡಲು ಆರಂಭಿಸಿದೆ..ಎಷ್ಟು ಹೊತ್ತಾದರೂ ನನಗೆ ಜೇಜಮ್ಮ (ಅರುಂಧತಿಯ ಮೊದಲ ಜನ್ಮದಲ್ಲಿ ಆ ಹೆಸರು )ಳ ಗಂಡ ಕಣ್ಣಿಗೆ ಕಂಡಿರಲಿಲ್ಲ.ಅದಕ್ಕೆ ಈ ಪ್ರಶ್ನೆ ಕೇಳಿದೆ.ಆಗ ಪುನಃ ಆ ಚಿತ್ರ ರೆವೈಂಡ್ ಮಾಡಿ ತೋರಿಸಿದಳು ಶಿಲ್ಪ.ಅವಳಿಗೆ ಈ ಚಿಕ್ಕಮ್ಮನ ಪೆದ್ದುತನ ಬಗ್ಗೆ ಮರುಕ ಆಗಿರ ಬೇಕು!ಆ ಬಡಪಾಯಿ ಗಂಡನ ಪಾತ್ರವೇ ಆ ಚಿತ್ರದಲ್ಲಿ ಇಲ್ಲ.ಜಾಣ ಪ್ರೇಕ್ಷಕರಿಗೆ ಮಾತ್ರ ಆತ ಕಂಡು ಬರ್ತಾನೆ.ಹೀಗೆ ತಲೆ ಕೆಟ್ಟು ಹೋದರೆ,ಮನಸ್ಸು ಪ್ರಫುಲ್ಲ ಆಗ ಬೇಕಾದರೆ,ತೆಲುಗು ಸಿನಿಮಾ ನೋಡ್ತೀನಿ.ಅದರಲ್ಲಿ ದೆವ್ವಕ್ಕೂ ಕುಂಕುಮ ಇಟ್ಟಿರುತ್ತಾರೆ..ಎಲ್ಲವು ವಿಚಿತ್ರ ಆ ಭಾಷೆ ಸಿನಿಮಾಗಳಲ್ಲಿ.ನಾನು ತಿಳಿಯದಂತೆ ಕರಿ ಪ್ರತಿನಿಧಿಸೋದು ದುಷ್ಟ ಶಕ್ತಿ (ಆದರೆ ಫ್ಯಾಶನ್ ರಂಗದಲ್ಲಿ ಕಪ್ಪಿಗಿರುವ ಮಹತ್ವವೇ ಭಿನ್ನ.ನನಗೆ ಕಪ್ಪು ಅಂದ್ರೇನೂ ತುಂಬಾ ಇಷ್ಟ) ಹಾಗೂ ಕೆಂಪೂ ದೇವರದು.ಇದೇನೇ ಇದು ದೆವ್ವಕ್ಕೆ ಕುಂಕುಮ ಇಟ್ಟಿದ್ದಾರೆ ಅಂತ ಪುನಃ ಪೆದ್ದು ಪ್ರಶ್ನೆ ಬಂತು ನನ್ನಿಂದ.ನನ್ನ ಕೀಟಲೆ ಅರ್ಥ ಮಾಡಿಕೊಂಡ ಕಲ್ಪ ತಕ್ಷಣ ಅಯ್ಯೋ ಇದು ಆಂಧ್ರ ದೆವ್ವ ಅದಕ್ಕೆ ಕುಂಕುಮ ಹಚ್ಚಿರೋದು ಅಂತ ನಕ್ಕಳು.
ಕುಂಕುಮದ ವಿಷಯಕ್ಕೆ ಬರೋದಾದರೆ ಕೆಂಪು ಕೋಪ, ಉದ್ರೇಕದ ಹಾಗೂ ಪ್ರೀತಿಯ ಸಂಕೇತ.ಸಾಮಾನ್ಯವಾಗಿ ಆಹಾರದ ತಯಾರಿಕೆಯಲ್ಲಿ ಕೆಂಪನ್ನೇ ಬಳಸೋದು,ಅಂದ್ರೆ ಅದು ಹಸಿವೆಯನ್ನು ಹೆಚ್ಚಿಸುತ್ತದೆ. ಮನುಷ್ಯ ಇನ್ನು ನಾಗರೀಕನಾಗಿ ಇರಲಿಲ್ಲ.ಆಗ ಆತ  ಬೇಟೆಯನ್ನು ಆಡುತ್ತಾ ಇದ್ದ.ಅವನಿಗೆ ಪ್ರತಿಬಾರಿಯೂ ಬೇಟೆ ಆಡಲು ಕೋಪ ಹಾಗೂ ಉದ್ರೇಕದ ಅವಶ್ಯಕತೆ ಇತ್ತು.ಆತ  ಆಗ ಏನು ಮಾಡಿದ ಗೊತ್ತ? ತಾನು ಕೊಂದ ಪ್ರಾಣಿಗಳ ರಕ್ತವನ್ನು ಸಮೀಪದ ಬಂಡೆಗೆ ಲೇಪಿಸುತ್ತಾ ಇದ್ದ.ಅದನ್ನು ಪ್ರತಿದಿನ ನೋಡಿ ರೋಷ ಉಕ್ಕಿಸಿಕೊಂಡು ಬೇಟೆಗೆ ಹೋಗುತ್ತಾ ಇದ್ದನಂತೆ.ಆದರೆ ಮಳೆ ,ಇನ್ನು ಹಲವಾರು ಕಾರಣದಿಂದ ಆ ರಕ್ತ ಬಂಡೆಯಿಂದ ಅಳಸಿಹೊಗಿರುತ್ತಿತ್ತು.ಆದರೆ ಆ ವ್ಯಕ್ತಿ ಪಾಪ!ಕೆಂಪು ನೋಡದೆ ಇರಲಾರ ಪರಿಣಾಮ ತನ್ನ ಸಂಗಾತಿ ಹಣೆಯ ಮೇಲೆ ಕೆಂಪು ಬಣ್ಣದ ಬೊಟ್ಟು(ರಕ್ತ ಆಗಿರ ಬಹುದು ,ಇಲ್ಲವೇ ಗಿಡದ ರಸ ಆಗಿರ ಬಹುದು) ಇಡುವ ಸಂಸ್ಕೃತಿ ಆರಂಭಿಸಿದ.ಹೀಗೆ ಆಚರಣೆಗೆ ಬಂದ ಬೊಟ್ಟು ಇಡುವ ಸಂಸ್ಕೃತಿ ಕೆಲವು ಕಡೆ ಜನಪ್ರಿಯ ಆಯಿತು.ಅಂದ್ರೆ ಕೆಂಪು ಪ್ರೀತಿ,ಉತ್ತೇಜನ ,ರೋಷ-ದ್ವೇಷದ ಸಂಕೇತ ಆಯಿತಲ್ಲ.ಸಾಮಾನ್ಯವಾಗಿ ಕುಂಕುಮದ ಮೂಲಕ ದುಷ್ಟ ಶಕ್ತಿಗಳನ್ನು ಓಡಿಸುವ ಪರಿಪಾಟ ಇದೆ.ಯಾಕೇಂತ ಅಂದ್ರೆ ಅದರಿಂದ ದೇವರಿಗೆ ಪೂಜೆ ಮಾಡಿರುತ್ತದೆ.ಈ ಸಿನೆಮಾದಲ್ಲಿ ದೆವ್ವಕ್ಕೆ ಕುಂಕುಮ ಇಟ್ಟಿರೋದು ಕಂಡು ನನಗೆ ಗಾಬರಿ.ಆ ಮೇಲೆ ಅನ್ನಿಸಿದ್ದು ತೆಲುಗು ಸಿನಿಮಾವನ್ನು ವೀಕ್ಷಿಸಿ ಮಜಾ ತಗೋ ಬೇಕೇ ವಿನಃ ಅದರಲ್ಲಿರುವ ವಿಷಯದ ಬಗ್ಗೆ ಯೋಚಿಸ ಬಾರದು ಅಂತ.ಬಹಳ ಹಿಂದೆ ಓದಿದ್ದೆ ,ಆಫ್ರಿಕದವರಿಗೆ ಭಾರತದ ಸಿನಿಮಾಗಳೆಂದರೆ ತುಂಬಾ ಇಷ್ಟ ಅಂತೆ.ಯಾಕೆ ಅಂತ ಅಂದ್ರೆ ಅದರಲ್ಲಿ ಬರುವ ಹಿರೋಯಿನ್ ನಾಚಿ - ಹೆದರಿ ಓಡುವುದು ,ನಾಚಿಕೆ ಪಡುತ್ತ ಹೀರೋನ್ನ ನೋಡೋದು.....! ಇನ್ನು ಹಲವಾರು ಅಂಶ ಅವರಿಗೆ ಸಕತ್ ಖುಷಿ ಕೊಡುತ್ತಂತೆ.ಈ ಸಿನಿಮಾ ನೋಡುವಾಗ ನನಗೆ ಆ ವಿಷಯ ಜ್ಞಾಪಕಕ್ಕೆ ಬಂತು.

Saturday, April 4, 2009

ಆಹಾ ಕೋಸಂಬರಿ...!

ರಾಮನವಮಿ ಬೇಸಿಗೆಯ ಹಬ್ಬ.ಸಾಮಾನ್ಯವಾಗಿ ಇದು ಒಂದು ಸಾರ್ವಜನಿಕರ ಹಬ್ಬ. ಪಾನ ಹೆಸರುಬೇಳೆ ಕೋಸಂಬರಿ ಇದರ ವಿಶೇಷತೆ.ಆದರೆ ಇದರ ಜೊತೆ ನೀರು ಮಜ್ಜಿಗೆ ,ಹಣ್ಣಿನ ರಸಾಯನ ಹೀಗೆ ಜಿಹ್ವಾಚಪಲಿಗರ ಶಕ್ತಿಯ ಅನುಗುಣವಾಗಿ ಲಿಸ್ಟ್ ದೊಡ್ಡದಾಗುತ್ತಾ ಹೋಗುತ್ತದೆ.ಅವೆಲ್ಲ ಇರಲಿ.ರಾಮನವಮಿ ಸಂದರ್ಭದಲ್ಲಿ ಮಾರ್ಕೆಟ್ನಲ್ಲಿ ಹೆಚ್ಚು ಕಾಣ ಸಿಗೋದು ಸೌತೆ ಕಾಯಿ ,ಮಾವಿನ ಕಾಯಿ,ಕರಬೂಜದ ಹಣ್ಣು , ಕಲ್ಲಂಗಡಿ....!ಹೀಗೆ ಬಾಯಾರಿಕೆ ತಣಿಸುವ ಹಣ್ಣು ತರಕಾರಿಗಳು.ಅವೆಲ್ಲ ಪಕ್ಕಕ್ಕೆ ಇರಲಿ.ರಾಮ ಉತ್ತರ ಭಾರತದ ನಿವಾಸಿ.ಆತ ದೇವರಾಗಿದ್ದರು ಮನುಷ್ಯನ ರೂಪ ಪಡೆದ ಬಳಿಕ ಮನುಷ್ಯನಂತೆ ಮಾರ್ಪಾಟು ಆದ ಅನ್ನುವ ಸಂಗತಿ ಎಲ್ಲಿಯೋ ಓದಿದ್ದ ನೆನಪು.ಹಾಗೆ ಆಗಿದ್ದರೆ ಆತನಿಗೆ ಈ ಹಸಿ ಕೋಸಂಬರಿ ಇಷ್ಟ ಆಗೋಕೆ ಸಾಧ್ಯಾನೆ ಇಲ್ಲ.ಯಾಕೆ ಅಂತ ಅಂದ್ರೆ ಆತನ ಊಟದ ಶೈಲಿ ಭಿನ್ನ.ಯಾಕೆ ಹೀಗೆ ಹೇಳಿದೆ ಅಂತ ಅಂದ್ರೆ ನಮ್ಮ ನೆರೆಯ ರಾಜ್ಯ ತಮಿಳುನಾಡಿನ ನಿವಾಸಿಗಳಿಗೆ ಈ ಪದಾರ್ಥ ಗೊತ್ತಿಲ್ಲ.ಅಂತಹುದರಲ್ಲಿ ಉತ್ತರ ಪ್ರದೇಶದ ರಾಮನಿಗೆ ಹೇಗೆ ಗೊತ್ತಿರಲು ಸಾಧ್ಯ? ಅನ್ನುವ ಪ್ರಶ್ನೆ ಇಲ್ಲಿ ಮೂಡಿ ಬರುತ್ತದೆ.ಪ್ರಾಯಶ: ಆತ ಸಾಕಷ್ಟು ವರ್ಷ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಸೆಟಲ್ ಆಗಿದ್ದಾಗ ಕಾಡಲ್ಲಿ ಋಷಿಗಳಿಂದ ಇದರ ರುಚಿ ಸವೆದಿರ ಬೇಕು.ಅದು ಪ್ರಿಯ ಆಗಿ ರಾಮನವಮಿಯ ಮೆಚ್ಚಿನ ಡಿಶ್ ಆಗಿತ್ತು ಅಂತ ಕಾಣುತ್ತೆ.ಮುಂದೆ ಇದೆ ರಾಮ ಭಕ್ತರ ಮನ -ನಾಲಿಗೆ ತಣಿಸಿರ ಬೇಕು.ಏನಾದರು ಸರಿ ಪಾನಕ ಹೆಸರುಬೇಳೆ ಇಲ್ಲದ ರಾಮನವಮಿ ಬೆಲ್ಲ ಅಥವಾ ಸಕ್ಕರೆ ಇಲ್ಲದ ಪಾನಕದಂತೆ ಸಪ್ಪೆ ಸಪ್ಪೆ!

Saturday, March 21, 2009

ಚಿಲ್ಲರೆ... ಚಿಲ್ಲರೆ..

ಚಿಲ್ಲರೆ ಅನ್ನುವ ಪದ ನಿಜ ಬದುಕಲ್ಲಿ ಹೆಚ್ಚು ಬಳಕೆ ಮಾಡುವುದಿಲ್ಲ.ಯಾಕೆ ಅಂತ ಎಲ್ಲರಿಗು ಗೊತ್ತು.ಯಾವುದಾದರು ವ್ಯಕ್ತಿ ತನ್ನ ಅಲ್ಪ ಬುದ್ಧಿಯಿಂದ ಪ್ರಸಿದ್ಧಿ ಆಗಿದ್ದರೆ ಛಿ !ಚಿಲ್ಲರೆ ಬುದ್ಧಿ ಅಂತ ಹೇಳೋದು ವಾಡಿಕೆ.ಅಂದರೆ ನಿಕೃಷ್ಟ ಎನ್ನುವ ಅರ್ಥ ಬರುತ್ತೆ ಅಂತ ಆಯ್ತಲ್ಲ.ಹೀಗೆ ಆರ್ಥಿಕವಾಗಿ ಹಿಂದುಳಿದಿರುವಾಗ ಕನಿಷ್ಠ ಒಂದು ಚಿಲ್ಲರೆ ಅಂಗಡಿ ಇಲ್ಲ ಅನ್ನುವ ಮಾತು ಆಡುತ್ತೇವೆ ಅಥವಾ ಕೇವಲ ಒಂದು ಚಿಲ್ಲರೆ ಅಂಗಡಿ ಇದೆ,ಚಿಲ್ಲರೆ ವ್ಯಾಪಾರಕ್ಕೆ ಈ ಪಾಟಿ ಗಾಂಚಲಿ! ಅಂತ ಆ ವ್ಯಕ್ತಿಯು ತನ್ನ ಚಿಲ್ಲರೆ ಅಸಹನೆಯನ್ನು ಸ್ವಾಭಿಮಾನವಾಗಿ ಬದುಕುತ್ತಿರುವ ಮತ್ತೊಬ್ಬ ವ್ಯಕ್ತಿಯ ಬಗ್ಗೆ ತೋರೋದು ಸಾಮಾನ್ಯ.ಸೋ ಚಿಲ್ಲರೆ ಅನ್ನುವ ಪದ ನಮ್ಮ ಬದುಕಲ್ಲಿ ಈ ರೀತಿ ಅಸ್ತಿತ್ವವನ್ನು ಪಡೆದಿದೆ.ಮೊನ್ನೆ ಹೀಗೆ ಒಂದು ಬ್ಲಾಗ್ ಓದುವಾಗ ಆ ಬ್ಲಾಗಿ ತನ್ನ ಕನ್ನಡದ ಎಲ್ಲ ಬ್ಲಾಗಿಗಳು ಒಟ್ಟಾಗಿ ಸೇರಿ ಚರ್ಚಿಸ ಬೇಕು,ಹರಟಬೇಕು ಎನ್ನುವ ಅನಿಸಿಕೆ ಇಟ್ಟಿದ್ದರು.ಫೈನ್! ಆದರೆ ನನಗೆ ಆ ಬ್ಲಾಗಿನಲ್ಲಿ ಬರೆದಿದ್ದ ಮತ್ತೊಂದು ಪದ ತುಂಬಾ ಆಶ್ಚರ್ಯವನ್ನು ಉಂಟು ಮಾಡಿತು.ಅದೇನೆಂದರೆ-ಚಿಲ್ಲರೆ ಬ್ಲಾಗಿಗಳು!! ನನಗೆ ಗೊತ್ತಿಲ್ಲ ಅವರು ಯಾವ ಅರ್ಥ-ಅನರ್ಥದಲ್ಲಿ ಇಂತಹ ಪದದ ಬಳಕೆ ಮಾಡಿದ್ದಾರೆ ಅಂತ.ಯಾಕೆ ಅಂತ ಅಂದ್ರೆ ನಾನು ಕಂಡಂತೆ ಸಾಕಷ್ಟು ಜನ ಅಕ್ಷರ ಪ್ರಿಯರಿಗೆ ಬರೆಯುವ ಆಸಕ್ತಿ ಹಾಗು ಮನಸ್ಸು ಇರುತ್ತದೆ.ಬ್ಲಾಗ್ ಅಂತಹ ಎಲೆಮರೆಯ ಪ್ರತಿಭೆಗಳ ಹೂತೋಟ .ಇಲ್ಲಿ ಜಾಗ ಇದೆ,ಮಣ್ಣು ಇದೆ,ಮುಷ್ಟಿಯ ತುಂಬಾ ಕನಸಿನ ಬೀಜಗಳಿವೆ ,ಮನದಲ್ಲಿ ಆಸೆಯ ಸೂರ್ಯ ಕಿರಣಗಳಿವೆ,ವಿಷಯಗಳ ಮಳೆ ಹನಿ ಇದೆ.ಇವು ಸಾಕಲ್ವ ಆತ/ಆಕೆ ತನ್ನತನ ತೋರೋದಕ್ಕೆ!ತುಂಬಾ ಸಾಹಿತ್ಯಿಕ ಕನ್ನಡದ ಕೊರತೆ ಕಾಣ ಬಹುದು ಆದರೆ ಬರೆಯ ಬೇಕೆನ್ನುವ ಆ ಶ್ರದ್ಧೆ ,ಹಂಬಲ,ತನ್ಮಯತೆ...!ಇಷ್ಟು ಸಾಕಲ್ವ! ಯಾಕೋ ಅಂದು ಆ ಪದ ಓದಿದಾಗ ನನ್ನ ಮನದಲ್ಲಿ ಇವೆಲ್ಲ ಸುಳಿದಾಡಿತು.

Saturday, March 14, 2009

ಬಣ್ಣ ಬಣ್ಣ!

ಹೀಗೊಮ್ಮೆ ಹೋಳಿ ಹಬ್ಬದಲ್ಲಿ ....ಗೆಳೆಯನ ತಲೆ ತುಂಬಾ ಮೊಟ್ಟೆ ರಸದ ಅವಶೇಷ.ಎಷ್ಟು ಮೊಟ್ಟೆ ಸೇವೆ ಆಗಿದೆ ಅಂತ ಕೇಳಿದೆ.ಸುಮಾರು ಇಪ್ಪತ್ತು.. ಅಂತ ಹೇಳಿದ.ಸೊ ತುಂಬಾ ಜನರ ಪ್ರೀತೀ ತಮ್ಮ ಮೇಲೆ ಅಂತ ರೇಗಿಸಿದಾಗ.ಅಯ್ಯೋ ಅಂತಾದ್ದೇನು ಇಲ್ಲ ನಮ್ಮ ಮೇಲೆ ಕೋಪ ಇದ್ದರು ಮೊಟ್ಟೆ ಒಡೆದು ಸೇಡು ತೀರಿಸಿಕೊಳ್ಳುತ್ತಾರೆ ಅಂತ ನಕ್ಕ.ನಿನ್ನ ಪರಿಸ್ಥಿತಿ ಹೇಗಿದೆ ಅಂತ ಕೇಳಿದೆ.ಅರ್ಧರ್ಧ ಅಂತ ಹೇಳಿ ನಕ್ಕ.ಹೋಳಿ ಬಣ್ಣಗಳ ಹಬ್ಬ,ಕಾಮ ಭಸ್ಮ ಆದ ದಿನ ,ಉತ್ತರ ಭಾರತೀಯರು ಬ್ಹುರಾನ ಮಾನೋ ಹೋಳಿ ಹೈ ಅಂತ ತಮಗೆ ಆಗದೆ ಇರೋರರನ್ನು ಹಿಗ್ಗಾಮುಗ್ಗಾ ಬೈಯ್ಯೋ ದಿನ.ಬಣ್ಣಗಳ ಓಕಳಿ ಆಡಿ ತಾವುಬಯಸಿದ ಸಂಗಾತಿಗೆ ಪ್ರೀತಿ ತೋರೋ ದಿನ. ಬಣ್ಣದ ಬಗ್ಗೆ ನನಗೆ ಮೊದಲಿನಿಂದಲೂ ಆಸಕ್ತಿ.ಯಾವ ಬಣ್ಣವನ್ನು ದ್ವೇಷ ಮಾಡುವುದಿಲ್ಲ.ಕಲರ್ ಥೆರಪಿ ತಿಳಿದವರು ಸಾಮಾನ್ಯವಾಗಿ ಬಣ್ಣಗಳ ಬಗ್ಗೆ ಕುತೂಹಲ ಹೊಂದಿರುತ್ತಾರೆ.ಕಲರ್ ಥೆರಪಿ ನಮ್ಮ ಬದುಕಲ್ಲಿ ಅದೆಷ್ಟು ಉಪಯುಕ್ತವೋ ಗೊತ್ತಿಲ್ಲಾ,ಆದರು ಸಾಕಷ್ಟು ಜನರು ಇದರ ಬಗ್ಗೆ ಹೆಚ್ಚಿನ ಗಮನ ನೀಡುತ್ತಾರೆ.ವಾರದ ಏಳು ದಿನ ನಾವು ಬಳಸುವ ಉಡುಪಿನ ಮೂಲಕ ಕಲರ್ ಥೆರಪಿಯನ್ನು ಜಾರಿಯಲ್ಲಿ ಇಡಬಹುದು.ಭಾನು:-ಕಿತ್ತಳೆ,ಸೋಮ:-ಬಿಳಿ,ಮಂಗಳ:-ಕೆಂಪು,ಬುಧ:-ಹಸಿರು,ಗುರು:-ಹಳದಿ,ಶುಕ್ರ:-ಹಳದಿ,ಹಸಿರು ,ಶನಿ:-ನೀಲಿ,ಕಪ್ಪು.

Friday, March 6, 2009

ಒಲವೆ ನಮ್ಮ ಬದುಕು...

ತುಂಬಾ ದಿನಗಳು ಆದ ನಂತರ ನಾನು ಮತ್ತೆ ಆ ಲೋಕಕ್ಕೆ ಹೋಗುವ ಹಾಗೆ ಆಯಿತು.ಹೆಣ್ಣು ಮಕ್ಕಳ ಪ್ರಪಂಚ..! ಅಲ್ಲಿಗೆ ಗಂಡು ಮಕ್ಕಳು ಬಂದರೆ ಅನಾಥರಾಗಿ! ಬಿಡ್ತಾರೆ,ತುಂಬಾ ವಿಶೇಷವಾದ ವಿಶ್ವ.ಬೆಳಿಗ್ಗೆಯಿಂದ ಸಂಜೆ ಏಳರ ತನಕ ಉಹುಂ !ಸಮಯ ಹೋದದ್ದೇ ಗೊತ್ತಾಗಲಿಲ್ಲ.ಅಲ್ಲಿ ಸುಮಾರು ನೂರಿನ್ನುರುಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು ಇದ್ದರು.ಆ ಕೆಲವು ಗಂಟೆಗಳು ಅಲ್ಲಿದ್ದ ಹೆಣ್ಣುಮಕ್ಕಳಿಗೆ ನಾಚಿಕೆ ಪಾಚಿಕೆ ಊರಿಂದ ಆಚಿಗೆ .ಬೆಂಗಳೂರು ಯುನಿವರ್ಸಿಟಿಯಲ್ಲಿ ಓದುವಾಗ ಆಗಾಗ
ಹಾಸ್ಟಲ್ಗೆ ಹೋಗುತ್ತಿದ್ದೆ.ಅದರಲ್ಲಿ ಕ್ರಿಕೆಟ್ ಮ್ಯಾಚ್ ನೋಡಲು ಹೋದಾಗ ಅಲ್ಲಿ ಇದೆ ರೀತಿಯ ಲೋಕ ...! ಮೊನ್ನೆ ಒಂದು ಕಾರ್ಯಕ್ರಮದಲ್ಲಿ ಪುನಃ ಸ್ತ್ರೀಲೋಕ ದ ಒಡನಾಟ ಸಿಕ್ಕು ತುಂಬಾ ಖುಷಿ ಖುಷಿ! ಕ್ಯಾಟ್ ವಾಕ್,ಡಾಗ್ ಡ್ಯಾನ್ಸ್ ,ಬ್ಯಾಡ ..! ಹೆಣ್ಣು ಮಕ್ಕಳು ವಿಷಲ್ ಹಾಕಿ ಸ್ಪರ್ಧಿಗಳನ್ನು ಹುರಿದುಂಬಿಸುತ್ತ ಇದ್ದರು .ನಾನು ಸ್ವಲ್ಪ ಹೊಟ್ಟೆ ಉರ್ಕೊಂಡೆ,ನಂಗೆ ವಿಷಲ್ ಹಾಕೋಕೆ ಬರಲ್ವಲ್ಲ! ಅದರಲ್ಲಿ ಅರವತ್ತು ವರ್ಷಕ್ಕೂ ಮೇಲ್ಪಟ್ಟ ಹೆಣ್ಣುಮಕ್ಕಳ ಗ್ರೂಪ್ ಸಕತ್ತಾಗಿ ಫ್ಯಾಶನ್ ಷೋ ಮಾಡಿದರು.ಆದರೆ ಅವರಲ್ಲಿ ಒಬ್ಬ ಹಿರಿಯ ಹೆಣ್ಣು ಮಗಳು ನನ್ನನ್ನು ತುಂಬಾ ಆಕರ್ಷಿಸಿದರು.ಕಾರಣ ಇಷ್ಟೇ ಆಕೆ ಇತರ ಹಿರಿಯ ಹೆಣ್ಣುಮಕ್ಕಳಿಗಿಂತ ಬಳುಕಿ ಬಳುಕಿ ಓಡಾಡುತ್ತಿದ್ದರು.ಮುಖದಲ್ಲಿ ಕಳೆ!!!ಚೌಲಿ ಜಡೆ-ಕುಚ್ಚು ಅದಕ್ಕೆ ಬಂಗಾರದ ಟೋಪಿ,ತಲೆಯಲ್ಲಿ ಉಷಾ ಉತ್ತುಪ್ ಅವರಂತೆ ಪ್ಲಾಸ್ಟಿಕ್ ಹುವ್ವು! ಹೊಕ್ಕಳು ಕೆಳಗೆ ಸೀರೆ.ಆದರೆ ತಮಿಳು ಲುಕ್ಕು! (ಮಾತು ಕೇಳಿದ ತಮಿಳಮ್ಮ ಅಂತ ಸ್ಪಷ್ಟ ಆಯ್ತು).ನನ್ನ ಪಕ್ಕ ಭಾರತಿ ಗೌಡ ಈಕೆ ಇತ್ತೀಚೆಗೆ ಮದ್ವೆ ಆದರು ಗೊತ್ತ ಅಂತ ಹೇಳಿದರು .ಹೌದ .. ! ಅಂತ ನನ್ನ ಇನ್ನೊಂದು ಪಕ್ಕ ಕುಳಿತಿದ್ದ ಮತ್ತೊಬ್ಬ ಹೆಣ್ಣುಮಗಳು ಅದರಿ ಬಿದ್ದರು .ತಪ್ಪೇನು ? ನನಗೆ ಈಗ ಒಬ್ಬ ಗೆಳೆಯ ಬೇಕಾಗಿತ್ತು ಅದಕ್ಕೆ ಈನಿರ್ಧಾರ ತೆಗೆದುಕೊಂಡೆ ಅಂತ ನನಗೆ ಹೇಳಿದರು ಆಕೆ ಅಂತ ಭಾರತಿ ಹೇಳಿದರು.ತಪ್ಪೇನು ಇಲ್ಲ ಆಲ್ವಾ ಅಂತ ಅಂದೇ ! ತಲೆ ಅಲುಗಾಡಿಸಿದರು ಆಕೆ .ಅಷ್ಟರಲ್ಲಿ ಡ್ಯಾನ್ಸ್ ಕಾರ್ಯಕ್ರಮ ಶುರು ಆಗಿತ್ತು, ಅಲೈ ಪಾಯಿದೆ ಕಣ್ಣಾ....! ಅಂತ ಕೃಷ್ಣ ಗಾಡ್ ಹಾಡಿಗೆ ನರ್ತಿಸಲು ಆರಂಭಿಸಿದರು ಆ ಇಲವರಸಿ!

Friday, February 27, 2009

ಬ್ಯಾನರ್

ನನಗೆ ಮೊದಲಿಂದಲೂ ಈ ಬ್ಯಾನರ್ ಗಳನ್ನು ಓದುವ ಅಭ್ಯಾಸ.ಕೆಲವು ಬಾರಿ ನೋಡುತ್ತಾ ಸಮಯ ಕಲಿಯುವ ಚಟ.ಇತ್ತೀಚೆಗೆ ನಗರದಲ್ಲಿ ಹೆಚ್ಚು ವಿಜೃಂಭಿಸಿದ್ದು ಮಾನ್ಯ ಸಿ.ಎಂ.ಯಡಿಯುರಪ್ಪನವರದು..!ಟ್ವೆಂಟಿ -20 ಮ್ಯಾಚನ್ನು ಕುಮಾರಣ್ಣಆತ ಜ್ವತೆ ಆಡುವಾಗ ಸದಾ ಅವರನ್ನು ಆಹ್ವಾನಿಸುತ್ತಾ ಇದ್ದುದು ಮಾತುಕತೆಗೆ.ಕುಂತ್ಕೊಂಡು ಮಾತಾಡೋಣ ಬನ್ನಿ ಕುಮಾರ್ ಸ್ವಾಮಿ ಅವ್ರೆ ಅಂತ ಕರದದ್ದೇ ಬಂತು,ಅವ್ರು ಕೂರಲಿಲ್ಲ,ಆ ಸರ್ಕಾರ ನಿಲ್ಲಲಿಲ್ಲ.ಆಮೇಲೆ ಯಡಿಯೂರಪ್ಪ ಸಿ.ಎಂ.ಆದಮೇಲೆ ಕೂರೋಕೆ ಹೋಗಲಿಲ್ಲ.ಎಲ್ಲ ಬ್ಯಾನೆರ್ಗಳಲ್ಲು ಅವರು ನಡೆಯುವ ಚಿತ್ರ! ಪ್ರಾಯಶ: ಅವರಿಗೆ ಕುಳಿತು ಕೊಳ್ಳುವ ವಾಸ್ತು ಸರಿಯಾಗಿ ಕೆಲಸ ಮಾಡಲಿಲ್ಲ ಅಂತ ಕಾಣುತ್ತೆ..!ಹಿಂದೆ ಈ ಬ್ಯಾನೆರ್ಗಳು ಹೆಚ್ಚಾಗಿ ರಾಮನ ಬಗ್ಗೆ ಗಮನ ಇತ್ತು ಕೊಂಡಿದ್ದವು.ಅದು ಒಪ್ಪವಾಗಿ ರಾಮ ಭಕ್ತ ಮಂಡಳಿ,ಶ್ರೀ ರಾಮ ಸೇವಾ ಮಂಡಳಿ .. ಹೀಗೆ ಪೋಸ್ಟರ್ ,ಬ್ಯಾನೆರ್ಗಳು ತೃಪ್ತಿ ಯಿಂದ ಇದ್ದವು ..! ಆಮೇಲೆ ನಾನು ಗಮನಿಸಿದಂಗೆ ರಾಮ ಮಿತ್ರ ಮಂಡಳಿ,ಗಣೇಶ ಗೆಳೆಯರ ಬಳಗ,ದ.ರಾ. ಬೇಂದ್ರೆ ಸ್ನೇಹಿತರ ಬಳಗ ...!ಹೀಗೆ ದೇವರು,ಕವಿ,ಲೇಖಕರ ಮಿತ್ರರ ಬಳಗ ಜಗತ್ತಿಗೆ ಕಾಣಿಸಲು ಸುರು ಆಯ್ತು.ಆ ಪದ್ಧತಿ ಈಗಲೂ ಇದೆ..! ಕಳೆದ ಬಾರಿ ನಡೆದ ಚುನಾವಣೆಗೂ ಮುನ್ನ ಅನೇಕ ರಾಜಕೀಯ ಪಕ್ಷಗಳ ನಾಯಕರು ದಿಗ್ಗನೆದ್ದು! ತಮ್ಮ ವದನಾರವಿಂದದ ಪೋಸ್ಟರ್ ಹಾಗು ಬ್ಯಾನ್ಎಲ್ಲ ಕಡೆ ಅಂಟಿಸಿ,ಇವರು ಎನ್ನುವುದನ್ನು ವರ್ಲ್ಡ್ ಫೇಮಸ್ ಮಾಡಿದ ರಮ್ಯಚೈತ್ರ ಕಾಲ. ನನ್ನ ಮನೆಯ ಬಳಿ ಓರ್ವ ರಾಜಕೀಯ ಮರಿ ನಾಯಕ ಚುನಾವಣೆಗೆ ವರ್ಷ ಇದೆ ಅಂತ ಅನ್ನುವಾಗ ತನ್ನ ಮುಚಿತ್ರದ ಪೋಸ್ಟರ್ ಎಲ್ಲಾ ಕಡೆ ಹಾಕೋಕೆ ಆರಂಭಿಸಿದ.ಭೀಮನ ಅಮಾವಾಸ್ಯೆಯಲ್ಲಿ ಶಿವನ ಪೂಜೆ ಮಾಡಿದಂತೆ,ಗಣೇಶನ ಹಬ್ಬದಲ್ಲಿ ಗಣೇಶ ಪೂಜೆ,ರಂಜಾನ್ ಕಾಲದಲ್ಲಿ ಆ ವೇಷ,ಕ್ರಿಸ್ಮಸ್ಗೆ ಸಂತ ಕ್ಲಾಸ್ ,ಇನ್ಯಾವುದೋ ಮಲೆಯಾಳಂ ಹಬ್ಬ ಅದಕ್ಕೆ ಹೊಂದುವ ಉಡುಪು,ಒಟ್ಟಿನಲ್ಲಿ ನಮಗೆ ಗೊತ್ತಿರುವ,ಗೊತ್ತಿಲ್ಲದ ಹಬ್ಬಗಳು ಆ ಮಹಾನುಭಾವನಿಂದ ಗೊತ್ತಾಯಿತು!ಇಷ್ಟೆಲ್ಲಾ ಆದರು ಭಗವಂತ ಕರುಣಾಮಯಿ ಅಂತ ಅನ್ನಿಸಿತು,ಯಾಕೆ ಗೊತ್ತೇ? ಸಧ್ಯ ಆ ಸಮಯದಲ್ಲಿ ಗೊಮ್ಮಟನಿಗೆ ಮಹಾ ಮಸ್ತಕಾಭಿಷೇಕ ಇರಲಿಲ್ಲ..ಇಲ್ಲದೆ ಇದ್ದಿದ್ದರೆ....!!!

Thursday, February 26, 2009

ದೃಷ್ಟಿಕೋನ

ಎಲ್ಲರಿಗು ಪ್ರಿಯವಾದ ದೇವರು ಕೃಷ್ಣ ಅಂತ ಕೆಲವರು ತುಂಬಾ ನಂಬ್ತಾರೆ ,ಅದು ಎಷ್ಟ ಮಟ್ಟಿಗೆ ಅಂತ ಅಂದ್ರೆ ಅಕಸ್ಮಾತ್ ಪ್ರಾಣ ಹೋಗುವಷ್ಟು ತೊಂದ್ರೆ ಆದರು ಅವರು ಶಿವಾಲಯ ಇದ್ರೆ ಬಚ್ಚಿಟ್ಟು ಕೊಳ್ಳೋಲ್ಲ ,ಹಾಗಂತ ನಮ್ಮ ಕಡೆ ಕೆಲವರ ಬಗ್ಗೆ ತಮಾಷೆ ಮಾಡ್ತಾ ಇರ್ತಾರೆ.ಒಬ್ಬ ಹಿರಿಯ ಹೆಣ್ಣು ಮಗಳು ವೃಕ್ಷ ಪ್ರೇಮಿ,ಆದ್ರೆ ಸಿಕ್ಕಾ ಪಟ್ಟೆ ರಾಮ ಭಕ್ತೆ! ಆಕೆಗೆ ರಾಮ ಬಿಟ್ರೆ ಬೇರೆ ಗಾಡ್ ಇಲ್ಲ,ತನ್ನ ಮನೆ ಮುಂದೆ ಹಿಂದೆ ಇರೋ ಗಿಡಗಳನ್ನು ಪ್ರೀತಿಯಿಂದ ಕಾಣುವ ಆಕೆ ಒಂದು ದಿನ ಗಿಡದ ತುಂಬಾ ಹುವ್ವು ಅರಳಿಸಿಕೊಂಡಿದ್ದ ಗಿಡವನ್ನು ಕತ್ತರಿಸಿ ಹಾಕಿಸುತ್ತ ಇದ್ದರು,ನನಗೆ ತುಂಬಾ ಆಶ್ಚರ್ಯ ಆಯ್ತು.ಯಾಕೆ ಹೀಗ್ ಮಾಡಿದಿರಿ ಅಂತ ಕೇಳಿದರೆ, ಅಯ್ಯೋ ಇದು ಶಿವನಿಗೆ ಪೂಜೆ ಮಾಡೋ ಹುವ್ವು,ಈಗ ಗೊತ್ತಾಯಿತು ಅದಕ್ಕೆ ಕದೆಸಿ ಹಾಕ್ತಾ ಇದ್ದೀನಿ ಅಂತ ಹೇಳಿದ್ದರು. ಅಂತಹುದೇ ಒಂದು ಪ್ರಾಡೆಕ್ಟು,ಆಕೆಗೆ ಕೃಷ್ಣ ಅಂತ ಅಂದ್ರೆ ಎಲ್ಲಿಲ್ಲಿಲ್ಲದ ಪ್ರೀತಿ! ನೋಡೇ ಈ ಕೃಷ್ಣ ಎಲ್ಲರನ್ನು ಆಕರ್ಷಣೆ ಮಾಡ್ತಾನೆ ಕಳ್ಳ! ಅಂತ ದೇವರ ಬಗ್ಗೆ ಮುದ್ದಾಗಿ ಹೇಳಿದರು ಆಕೆ.ಆಗ ನಿಮ್ಮ ಅಭಿಪ್ರಾಯ ತಪ್ಪು ಆಂಟಿ ಅಂತ ಅಂದೇ ,ನೀನೂ ಬಿಡು ಮೊಸರಲ್ಲಿ ಕಲ್ಲು ಹುಡುಕೊಳುಅಂತ ಹೇಳಿ ಚುಚ್ಚಿದರು.ಇರ ಬಹುದು ಆಂಟಿ ಆದರೆ ಸಾಕಷ್ಟು ಹೆಣ್ಣು ಮಕ್ಕಳಿಗೆ ಕೃಷ್ಣ ಆರಾಧ್ಯ ದೈವ ಅಲ್ಲ ಅಂತ ಅಂದೇ. ಅದಕ್ಕೆ ಆಕೆ ಹಾಗಂದ್ರೆ? ಅಂತ ಕೇಳಿದರು.. ಈಗ ನೋಡಿ ಕೃಷ್ಣ ಒಂದು ಹಾಡಿನ ಬಗ್ಗೆ ಹೇಳ್ತೀನಿ ... ಮೆಲ್ಲ ಮೆಲ್ಲನೆ ಬಂದನೆ ಗೋಪಮ್ಮ ಕೇಳೆ ...,ತಕ್ಷಣ ಆಕೆ ಆಹಾ ಎಂತ ಹಾಡು ಅಲ್ವ.. ಅಂತ ಕೇಳಿದರು,ಹಾಡು ಮುಂದೆ ಕೇಳಿದ್ದೀರಾ ಅಂದೇ,ಆಕೆ ಸುಮ್ಮನೆ ಇದ್ದರು,ಮೊಸರು ಮಾರಲು ಹೋದರೆ ನಿನ್ನಯ ಕಂಡ ಹೆಸರೇನೆಂದು ಕೇಳಿದ? ಹಸನಾದ......ಹಸುಮುಖಿಯರನು ಬಸಿರು ಮಾಡಿದ ಕೃಷ್ಣ ! ಅಂತ ಹೇಳಿ ಅವರ ಕಡೆ ನೋಡಿ ,ಹೇಳಿ ಆಂಟಿ ದೇವರ ಬಗ್ಗೆ ಭಕ್ತ ಇಷ್ಟು ಜಗಜ್ಜಾಹೀರವಾಗಿ ಬರೆದರೆ ಹೆಣ್ಣು ಮಕ್ಕಳಿಗೆ ಇಷ್ಟಾ ಆಗುತ್ತಾ? ಅಂತ ಕೇಳಿ.ನನ್ನ ಮಾತು ಆಕೆಗೆ ಇಷ್ಟ ಆಗಲಿಲ್ಲ,ಅದರ ಒಳ ಅರ್ಥ ಬೇರೆ ಇದೆ ಅಂತ ಅಂದ್ರು..ಬೇರೆ ಯಾವುದೇ ಅರ್ಥ ಇರಲಿ ಆದರೆ ಇದು ಮುಖ್ಯ ಅರ್ಥದ ಪಟ್ಟಿಗೆ ಸೇರುತ್ತೆ ತಾನೆ? ಕೃಷ್ಣ ಹಾಡುಗಳನ್ನು ತುಂಬಾ ಹೆಣ್ಣುಮಕ್ಕಳು ಹಾಡೋದೇ ಇಲ್ಲ,,ಅದು ಅವರ ದೃಷ್ಟಿಕೋನ ಇರಬಹುದು,ಆದರೆ ಇದನ್ನು ಒಪ್ಪಿಕೊಳ್ಳ ಬೇಕು ತಾನೆ ಅಂದೇ..! ಆವತ್ತಿನಿಂದ ಆ ಭಕ್ತೆ ನನ್ನೊಂದಿಗೆ ಮಾತಾಡಿಲ್ಲ!!!

Friday, February 13, 2009

ಯಾವುದು?

ಕನ್ನಡದಲ್ಲಿ ಒಂದು ಪದ ಇದೆ ಪರಾಕಾಷ್ಠೆ ಅಂತ.ಅದು ಭಕ್ತಿ,ಶ್ರದ್ಧೆ,ಪ್ರೀತಿ ,ಅತಿರೇಕ ಹೀಗ ಹಲವು ಅಂಶಗಳಿಗೆ ಅಪ್ಲೆಯ್ ಆಗುತ್ತೆ.ನಾನು ಕೆಲವು ಸ್ತ್ರೀವಾದಿಗಳನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ,ಅವರಲ್ಲಿ ತುಂಬಾ ಜನ ಅತೃಪ್ತ ಹೆಣ್ಣುಮಕ್ಕಳು, ಯಾವ ರೀತಿ ಅಂತ ಬಿಡಿಸಿ ಹೇಳೋಕೆ ಆಗದು.ಆದರೆ ಅವರು ಸಮಾಜ ತುಂಬಾ ಹಿಂದೆ ಇದೆ.ಪುರುಷರ ಮೇಲುಗೈ ಹೆಣ್ಣಿನ ಬೆಳವಣಿಗೆಗೆ ಅಡ್ಡಿ ಆಗಿದೆ ಅಂತೆಲ್ಲ ಭಾಷಣ ಮಾಡುತ್ತಿದ್ದರು.ನನ್ನ ಪರಿಚಿತ ಹೆಣ್ಣು ಮಗಳು ಡೆಕ್ಕನ್ ಹೆರಾಲ್ಡ್ ನಲ್ಲಿ ಫ್ರೀ ಲ್ಯಾನ್ಸರ್ ಆಗಿದ್ದರು.ಅವರಿಗೆ ಸ್ತ್ರೀವಾದಿ ಒಬ್ಬರು ತುಂಬಾ ಕ್ಲೋಸ್.ಆದರೆ ನನ್ನ ಪರಿಚಿತ ಹೆಣ್ಣುಮಗಳು ಸಂತುಪ್ತ ಗೃಹಿಣಿ.ಆಕೆಯಾ ಬರೆಯುವ ಅಭ್ಯಾಸ ಆ ಸ್ತ್ರೀವಾದಿಗೆ ಇಷ್ಟಾ ಆಗ್ತಾ ಇರಲಿಲ್ಲವಂತೆ,ಸಾಕಷ್ಟು ಬಾರಿ ನನ್ನಬಳಿ ಹೇಳಿ ನಕ್ಕಿದ್ದರು ಅವರು.ಅದು ಸಹಜ.ನಾನು ಕಂಡ ಕೆಲವು ಹೆಣ್ಣು ಮಕ್ಕಳು ತಮಗೇನೂ ಬೇಕು ಅಂತ ತಿಳಿಯದ ದ್ವಂದ್ವ ಸ್ಥಿತಿ ಯಲ್ಲಿ ಇದ್ದರು.ಅವರು ಅವರದೇ ಆದ ವಾದ ಸಮರ್ಥನೆ ಇಟ್ಟುಕೊಂಡಿದ್ದರು.ಆದರೆ ಸಾಕಷ್ಟು ಬಾರಿ ಅವರ ಒಂಟಿತನ ನನ್ನ ಕಣ್ಣಿಗೆ ನಿಚ್ಚಳ ವಾಗಿ ಕಂಡು ಬರುತ್ತಿತ್ತು.ಆ ಗುಂಪು ಯಾವುದೇ ರೀತಿಯಲ್ಲೂ ಗಲಾಟೆ ಮಾಡಿ ಸಮಾಜದ ಸ್ವಾಸ್ಥ್ಯ ಕೆಡಿಸೋಕೆ ಪ್ರಯತ್ನ ಮಾಡಿರಲಿಲ್ಲ.ಆದರೆ ಈಗಿರುವ ಚೆಡ್ಡಿ ಪರಿಸ್ಥಿತಿ ನೋಡಿದರೆ ಯಾವ ರೀತಿ ಇಂತಹ ವಿಶಿಷ್ಟ ಪ್ರಾಡಕ್ಟ್ ಗಳನ್ನೂ,ಅವರ ಹರಕತ್ ಗಳನ್ನೂ ಸ್ವೀಕರಿಸ ಬೇಕೋ ತಿಳಿತಾ ಇಲ್ಲ.ಆತ ನಿಂತ ನಿಲುವಿನಲ್ಲೇ ಮಾಡುವೆ ಮಾಡಿಸ್ತೀನಿ ಅಂತ ಅಂದ್ರೆ ಇವರು ಚೆಡ್ಡಿ ತೋರಿಸಿ ಪ್ರತಿಭಟನೆ ಮಾಡೋದು. ಪ್ರೀತಿಗೆ ಅಡ್ಡಿ ಬರುವ ಯಾರಿಗೆ ಆಗಿರಲಿ ಇದೆ ಶಿಕ್ಷೆ ಅನ್ನುವ ಹೊಸ ವಿಧಾನ,ತುಂಬಾ ಅಸಹ್ಯ ಆಗುತ್ತೆ.ಸಮಾಜದಲ್ಲಿ ಪ್ರತಿಯೋರ್ವ ಹೆಣ್ಣಿ ನಲ್ಲೂ ಸ್ತ್ರೀವಾದಿ ಗುಣ ಇದ್ದೆ ಇರುತ್ತೆ.ಅದು ಪರಿಸರದ ಅನ್ವಯ ತನ್ನ ಪ್ರಭಾವ ತೋರುತ್ತದೆ.ಆದರೆ ಇಂತಹ ಅತಿರೇಕದ ಪರಾಕಾಷ್ಟೆಯು ಎಂದಿಗೂ ಸ್ತ್ರೀವಾದಿ ಅಂಶ ಆಗುವುದೇ ಇಲ್ಲ.ಪ್ರತಿಭಟನೆ ಅಪಹಾಸ್ಯ ,ಅಸಹ್ಯದ ಮಾರ್ಗ ಹಿಡಿ ಬಾರದು.ಎದುರಾಳಿ ಸೋಲ ಬೇಕು,ನಮ್ಮ ಹೋರಾಟ ಇತರರಿಗೆ ಮಾದರಿ ಆಗ ಬೇಕು, ಇವೆರಡು ಸಾಧ್ಯ ಮಾಡುವಂತ ಅನೇಕ ಉತ್ತಮ ಮಾರ್ಗಗಳು ಇವೆ.ಅದು ಬಿಟ್ಟು ನಮ್ಮ ಹಿರಿಯ ನಾಯಕಮಣಿ ಪಬ್ ಭರೋ ಚಳುವಳಿಗೆ ಕರೆ ಕೊಟ್ಟರೆ ಅದಕ್ಕಿಂತಲೂ ತಮಾಷೆ ಸಂಗತಿ ಇನ್ನು ಏನಿದೆ.ಪಬ್ಗೆ ಹೋಗೋದು ಒಂದು ಅಭ್ಯಾಸ,ಅದು ಸಂಸ್ಕೃತಿ ಅಲ್ಲ.ಅಭ್ಯಾಸಕ್ಕೂ ಹಾಗು ಸಂಸ್ಕೃತಿಗೂ ತುಂಬಾ ವ್ಯತ್ಯಾಸ ಇದೆ.ಆ ಎರಡು ಪದಕ್ಕೂ ಬೇರೆ ಬೇರೆ ಅರ್ಥಗಳಿವೆ... ಅದನ್ನು ತಿಳಿದು ಕೊಳ್ಳುವುದು ತುಂಬಾ ಮುಖ್ಯ.

Saturday, February 7, 2009

ಮಾತುಗಾರರು..

ನನಗೆ ಕೆಲವು ಮಾತು ಬಾರದ ಹೆಣ್ಣು ಮಕ್ಕಳು ಆಗಾಗ ಸಿಕ್ತಾರೆ.ನೋಡಲು ಒಬ್ಬರಿಗಿಂತ ಒಬ್ಬರು ಸುಂದರಿಯರು.ಕಣ್ಣಲ್ಲಿ ತುಂಟತನ,ಮಾತಲ್ಲಿ ಉಲ್ಲಾಸ (ಬರಿ ಕೈ ಅಲುಗಾಡಿಸೋದು),ನಗು,ನಗು,ತುಂಬಾ ನಗು.ಒಬ್ಬರನ್ನೊಬ್ಬರು ಚೆಡಿಸಿಕೊಂದು ಪ್ರಪಂಚ ಮರೆಯುತ್ತಾರೆ.ಜೊತೆಗೆ ಆಗಾಗ ಬರುವ ಮೆಸೇಜ್ ಗಳನ್ನೂ ಓದಿ ಉತ್ತರಿಸುತ್ತ ತಮ್ಮ ಲೋಕದಲ್ಲಿ ಮುಳುಗಿ ಬಿಡುತ್ತಾರೆ.ಅಷ್ಟು ಜನ ಹೆಣ್ಣು ಮಕ್ಕಳಿಗೆ ನನ್ನನ್ನು ಚೆಡಿಸೋಕೆ ತುಂಬಾ ಇಷ್ಟ.ಅದರಲ್ಲಿ ಒಬ್ಬಳು ಮಾತ್ರ ಏನಾದರೊಂದು ಕೀಟಲೆ ಮಾಡಿ ನಗ್ತಾಳೆ.ವಯುಕ್ತಿಕವಾಗಿ ನನಗೆ ಅವರ ವರ್ತನೆ ಎಂದಿಗೂ ಕೋಪ ತರಿಸಿಲ್ಲ.ಅವರ ಆತ್ಮವಿಶ್ವಾಸ ನನಗೆ ಅನೇಕ ಸಂದರ್ಭಗಳಲ್ಲಿ ಗುರುವಾಗಿ,ಗೆಳತಿಯಾಗಿ... ನಿಂತಿದೆ. ಈ ಹೆಣ್ಣುಮಕ್ಕಳು ಕಂಪ್ಯೂಟರ್ ಆಪರೇಟರ್ ಗಳು.ತಮ್ಮ ವೃತ್ತಿ ಬಗ್ಗೆ ಅಪಾರ ಹೆಮ್ಮೆ.ನೀನೂ ಏನು ಮಾಡೋದು ಅಂತ ಪ್ರತಿಬಾರಿ ಕೇಳುತ್ತಾರೆ, ಹೇಳಿದರೆ ಪಾಪ ! ಅಂತ ಅಂತಾರೆ.ಅವರ ಜೊತೆ ಮಾತನಾಡುವಾಗಹೆಚ್ಚು ಗಮನ ಇಡಬೇಕು,ಎಲ್ಲದಕ್ಕಿಂತಲೂ ಸಹನೆ ಅತಿ ಮುಖ್ಯ.ಒಂದುಸರ್ತಿ ಅವರ ಬಾಂಧವ್ಯದೊಳಗೆ ಸೇರ್ಪಡೆ ಆದರೆ ಅಲ್ಲಿಂದ ಬರುವುದೇ ಬೇಡ ಅಂತ ಅನ್ನಿಸುತ್ತದೆ.ಬೇಸಿಗೆ ಕಾಲದ ಆಹ್ಲಾದಕರ ಸಂಜೆಯಂತೆ ಹಾಗು ಮಲ್ಲಿಗೆ ಸುವಾಸನೆಯಂತೆ ಮನಸ್ಸು ಖುಷಿ ಆಗುತ್ತದೆ.ನೀವು ಅಂತಹ ಬಾಂಧವ್ಯದ ಸದಸ್ಯರಾಗಿ...:)

Saturday, January 31, 2009

ಗ್ರಹಣ..ನಂಬಿಕೆ..

ನಂಗೆ ಆಕಾಶ ವೀಕ್ಷಣೆ ಮಾಡೋದು ಅಂತ ಅಂದ್ರೆ ತುಂಬಾ ಇಷ್ಟ.ಸಾಮಾನ್ಯವಾಗಿ ತಲೆ ಎತ್ತಿ ವಿಸ್ಮಯವಾಗಿ ನೋಡುತ್ತಾ ನಿಂತು ಬಿಡುತ್ತೆ.ಅದೊಂತರಾ ಹುಚ್ಚು ನಂಗೆ! ಅತಿ ಎತ್ತರಕ್ಕೆ ಹಾರುವ ಹದ್ದು,ಗರುಡ,ಅಲ್ಲಲ್ಲಿ ಗರಬಡಿದಂಗೆ ಪೆದ್ದು ಪೆದ್ದಾಗಿ ಹಾರಾಡುವ ಪಾರಿವಾಳ.. ಹೀಗೆ ಅವುಗಳ ದಿನಚರಿ ವೀಕ್ಷಣೆ ಮಾಡುವುದಕ್ಕೆ ತುಂಬಾ ಖುಷಿ ಆಗುತ್ತೆ.ಇತ್ತೀಚಿನ ತಿಂಗಳುಗಳಲ್ಲಿ ಒಂದು ಬೆರಗಿನ ವಿಷಯ ನಡೆಯಿತು.ಅದು ನಿಮಗೂ ಗೊತ್ತಿರ ಬಹುದು.ಎರಡು ಗ್ರಹಗಳನ್ನು ತನ್ನ ಕಣ್ಣು ಮಾಡಿಕೊಂಡು ನಾವೆಲ್ಲ ನೋಡುವಂತೆ ಮಾಡಿದ್ದ ಚಂದ್ರಮ.ಎಷ್ಟೋ ವರ್ಷಗಳಿಗೆ ಒಮ್ಮೆ ಮಾತ್ರ ಇಂತಹ ಅಪರೂಪದ ದೃಶ್ಯ ಕಾಣ ಸಿಗುತ್ತದೆ,ಅದೃಷ್ಟವಶಾತ್ ನಾವು ನೋಡುವಂತಾಯಿತು.ಒಂದು ಕಣ್ಣಾಗಿ ಗುರು,ಮತ್ತೊಂದು ಕಣ್ಣಾಗಿ ಶುಕ್ರ ಗ್ರಹ ಚಂದ್ರನ ಹೆಮ್ಮೆ ಹೆಚ್ಚು ಮಾಡಿ ಭುವಿಯ ಆನಂದ ಹೆಚ್ಚಿಸಿದ್ದರು.ಗುರು ತನ್ನ ಕಕ್ಷೆಯ ಸುತ್ತ ಒಂದು ಸುತ್ತು ತಿರುಗಲು ಹನ್ನೆರಡು ವರ್ಷಗಳ ಕಾಲ ಬೇಕಾದರೆ,ಶುಕ್ರ ಉಲ್ಟಾ ಗಿರಾಕಿ.ಈ ಎರಡು ಅಭಾಸಗಳ ನಡುವೆ ಅರ್ಧ ಚಂದ್ರ ತನಗೊಂದು ಸ್ಥಾನ ಪಡೆದು ಜಗತ್ ಖ್ಯಾತಿ ಗಳಿಸಿದ !!!ಹಾಗೆ ಒಟ್ಟಾಗಿ ಬಂದರೆ ನಮಗೆ ತೊಂದರೆ ತಪ್ಪಿದ್ದಲ್ಲ ಅಂತ ಅತಿಯಾಗಿ ಗ್ರಹಗಳನ್ನು ನಂಬುವ ಜನ ಒಂದು ಕಡೆ ಹೇಳಿದರೆ,ಇಂತಹ ವಿಶೇಷತೆ ನಮಗೆಲ್ಲರಿಗೂ ಒಳ್ಳೆದನ್ನು ಮಾಡುತ್ತದೆ ಅಂತ ಸಂತೋಷ ಪಟ್ಟಿದ್ದರು.ಏನಾದರಾಗಲಿ ನನ್ನಂತಹ ಆಕಾಶ ಪ್ರಿಯರಿಗೆ ಈ ದೃಶ್ಯ ಮಾತ್ರ ಸಿಕ್ಕಾಪಟ್ಟೆ ಖುಷಿ ಕೊಟ್ಟಿದ್ದಂತೂ ನಿಜ.ನಿಮಗೆ ಗೊತ್ತು ಕವಿ ದ.ರಾ.ಬೇಂದ್ರೆಯವರು ಅರ್ಧ ಚಂದ್ರನನ್ನು ಆಗಸದ ಬಟ್ಟೆ ಉಜ್ಜಿ ಉಜ್ಜಿ ಕರಗಿದ ಸಾಬೂನು ಅಂತ ಹೇಳಿದ್ದಾರೆ.ಈಗ ಕೆಲವು ದಿನಗಳಿಂದ ನಮ್ಮ ಚಂದ್ರ ಹಾಗು ಶುಕ್ರ ಮಿರ ಮಿರನೆ ಆಗಸದಲ್ಲಿ ಮಿಂಚುತ್ತಿದ್ದಾರೆ,ಅದನ್ನು ನೋಡಿ ಇವೆಲ್ಲ ನೆನಪಾಯಿತು.ಸೋಮವಾರ ಗ್ರಹಣ ಇತ್ತಲ್ಲ,ಚಂದ್ರ ಹಾಗು ಸೂರ್ಯ ತಮ್ಮಪಾಡಿಗೆ ಅವರ ಕೆಲಸ ಅವರು ಮಾಡಿಕೊಂಡರು .ಆದರೆ ಈ ಗ್ರಹಣ ಮಕರ ರಾಶಿಯವರಿಗೆ ತೊಂದರೆ ಉಂಟು ಮಾಡುತ್ತದೆ ಅಂತ ಸುದ್ದಿ ಹಬ್ಬಿಸಿ ಈ ಗ್ರಹಣದ ವಿಶೇಷತೆಯನ್ನು ಹೆಚ್ಚು ಮಾಡಿದ್ದರು.ಈ ರಾಶಿಯವರಿಗಾಗಿ ಒಂದು ಶ್ಲೋಕ ತಿಳಿಸಿದ್ದರು,ಅದನ್ನು ಓದಲು ಆಗದೆ ಇರುವವರು ಕನಿಷ್ಠ ತಮ್ಮ ಬಳಿಯಲ್ಲಿ ಇಟ್ಟುಕೊಂಡು ಇರಲೇಬೇಕು ಅಂತ ಕಾನೂನು ಹೊರಡಿಸಿದ್ದರು.ಅಂತು ಇಂತೂ ಗ್ರಹಣ ಮುಗಿತಪ್ಪ ಅಂತ ಸಂಜೆ ದೊಡ್ಡ ಉಸಿರು ಬಿಟ್ಟು ಪಾಪ ಭಕ್ತರು ದೇವಾಲಯಕ್ಕೆ ಹೋಗಿ ಭಗವಂತನಿಗೆ ಕಾಣಿಕೆ ಕೊಟ್ಟು ಬಂದರೆ,ಆ ಗ್ರಹಣ ಮತ್ತೊಂದು ರೂಪ ಪಡೆದಿತ್ತು.ಉತ್ತರ ಭಾರತ ಹೆಣ್ಣು ಮಗಳು ದ್ವಾಪರ ಯುಗದಲ್ಲಿ (ನನ್ನ ಹತ್ತಿರ ಎವಿಡೆನ್ಸ್ ಇಲ್ಲ)ಇಂತಿಂಥ ಸಮಯದ ಸೋಮವಾರದಲ್ಲಿ ,ಮಕರ ರಾಶಿಯವರಿಗೆ ತೊಂದರೆ ಮಾಡುವ ಗ್ರಹಣ ಬರುತ್ತದೆ , ಅದು ಕೇವಲ ಅವರಿಗೆ ಮಾತ್ರ ಅಲ್ಲದೆ ಎಲ್ಲರಿಗೆ ತೊಂದರೆ ಕೊಟ್ಟೆ ಕೊಡುತ್ತದೆ ಯಂತೆ..! ಅದು ಈಗ ಬಂದಿದೆ ನಮಗೆ ತೊಂದರೆ ತಪ್ಪಿದ್ದಲ್ಲ ಎಂದು ಚಿಂತಿಸಿ ನಮ್ಮ ತಲೆ ಕೆಡಿಸಿ ಬಿಟ್ಟರು..ಪ್ರಕೃತಿಯನ್ನು ಪ್ರಿತಿಸದೆ ಭಯ ಬೆಳಸಿ ಕೊಂಡರೆ ಹೀಗೆ ಆಗುವುದು ಅಂತ ಕಾಣುತ್ತದೆ!!

Friday, January 30, 2009

ಖಂಡ ಇದೆ ಕೋ..

ನಮಗೆ ಗೋವಿನ ಹಾಡು ಅಪರಿಚಿತ ಅಲ್ಲ.ನಿನ್ನೆ ನನ್ನ ಅಮ್ಮ ಲಲಿತಾ ಒಂದು ಕಥೆ ಹೇಳಿದರು ಆಗ ಯಾವ ರೀತಿ ಪ್ರತಿಕ್ರಿಯೆ ನೀಡಬೇಕೋ ತಿಳಿಯಲಿಲ್ಲ.ರಾಮನು ಹುಟ್ಟಿದ ನಾಡಲ್ಲಿ ,ಅದು ಹೆಣ್ಣುಮಕ್ಕಳಿಗೆ ಗೌರವ ಕೊಡಲೇ ಬೇಕೆಂದುಅರಿತುಕೊಂಡಿರುವ ಈ ನಾಡಲ್ಲಿ ಹೆಣ್ಣು ಮಕ್ಕಳನ್ನು ಅದು ಇತ್ತೀಚೆಗೆ ಹಿಗ್ಗಾಮುಗ್ಗಾ ಹೊಡೆದ ನಾಡಲ್ಲಿ ನಾವಿದ್ದೇವೆ.ಅಮ್ಮ ಹೇಳಿದ್ದು ನಿನ್ನೆ ಅವ್ರು ಪಾಠ ಮಾಡಿದ ಕಥೆಯನ್ನು.ಹಿಂದಿ ಲೇಖಕಿ ಮಹಾದೇವಿ ವರ್ಮ ಅವರ ಬದುಕಿನ ಪುಟಗಳಲ್ಲಿನ ಒಂದು ಅಧ್ಯಾಯ ಹಿಂದಿ ಮಾಧ್ಯಮದ ಮಕ್ಕಳಿಗೆ ಪಠ್ಯಕ್ರಮದಲ್ಲಿ ನೀಡಲಾಗಿದೆ.ಅಮ್ಮ ಆ ಕಥೆ ಓದಿ ಸ್ವಲ್ಪ ಅಪ್ಸೆಟ್ ಆಗಿದ್ದರು.ಅದು....
ಮಹಾದೇವಿ ಅವರ ತಂಗಿ ಪ್ರಾಣಿ ಪ್ರಿಯೆ.ಆಕೆಯ ಮನೆಯಲ್ಲಿ ಅನೇಕ ಸಾಕು ಪ್ರಾಣಿಗಳು ಇದ್ದವು.ಮಾತಿನಲ್ಲಿ ಚತುರೆ,ಒಮ್ಮೆ ಮಹಾದೇವಿ ಅವರು ತಂಗಿ ಮನೆಗೆ ಹೋದಾಗ ಆಕೆ ನೀನೂ ಕೇವಲ ಬರಹದಲ್ಲಿ ಪ್ರಾಣಿಗಳ ಮೇಲೆ ಪ್ರೀತಿ ತೋರುತ್ತಿಯ..ನಮ್ಮ ಮನೆಯಲ್ಲಿರುವ ಹಸು ತೆಗೆದುಕೊಂಡು ಹೋಗಿ ಸಾಕು.ಅದರಲ್ಲಿ ಸಿಗುವ ಆನಂದ ಅನುಭವಿಸು !ಅಂತ ಪ್ರೀತಿಯಿಂದ ಒತ್ತಾಯ ಮಾಡಿ ಬಹುಮಾನವಾಗಿ ಒಂದು ಹಸು ಕೊಟ್ಟರಂತೆ.ಇವರು ಆರೈಕೆ ಮಾಡುತ್ತಾ ಅದರ ಆನಂದ ಅನುಭವಿಸಲು ಆರಂಭಿಸಿದರು.ಈ ಹಸು ನೋಡಲು ತುಂಬಾ ಸುಂದರ ಆಗಿತ್ತಂತೆ,ಸರಿ ಅದಕ್ಕೆ ಅವರು ಗೌರ ಅನ್ನುವ ಹೆಸರು ನೀಡಿದರು.ಈ ಗೌರ ಸಹ ಹೇರಳವಾಗಿ ಹಾಲು ನೀಡಲು ಆರಂಭಿಸಿತು.ಆ ಹಾಲು ಮನೆ ಮಂದಿಗೆಲ್ಲ ಸಾಕಾಗಿ ಬೆಕ್ಕು,ನಾಯಿಗಳಿಗೂ ಹಾಕುವಷ್ಟು ಹಾಲು ಉತ್ಪತ್ತಿ ಆಗುತ್ತಿತ್ತು.ಇತರ ಪ್ರಾಣಿಗಳು ತನ್ನ ಹಾಲು ಕುಡಿಯುವುದನ್ನು ಕಂಡಾಗ ಆಕೆಗೆ ಧನ್ಯತಾಭಾವ.ಆ ಊರಲ್ಲಿ ಇದ್ದ ಹಾಲು ಮಾರುವವ ಮಹಾದೇವಿಯವರ ಬಳಿ ತನ್ನ ಬಳಿ ಹಾಲು ಕೊಲ್ಲದೆ ಇರುವುದಕ್ಕೆ ಬೇಸರ ವ್ಯಕ್ತ ಪಡಿಸಿದ.ಆಗ ಈಕೆ ಇನ್ನುಮುಂದೆ ಗೌರಳ ಹಾಲು ನೀನೆ ಕರಿ,ನಮಗಾಗಿ ಉಳಿದದ್ದು ನೀನೂ ಕೊಂಡೊಯ್ಯಿ ಎಂದರಂತೆ.ಅವನು ಬಂದ ಸ್ವಲ್ಪ ದಿನಗಳಾದ ಮೇಲೆ ಗೌರ ಸಣ್ಣಗೆ ಆಗಲು ಆರಂಭಾ ಆಯಿತು.ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ರಿಪೋರ್ಟ್ ನಲ್ಲಿ ಹಸುವಿನ ಕರುಳಲ್ಲಿ ಸುಜಿಗಳು ಇರುವುದು ಕಂಡು ಬಂದಿತು.ಅವು ಹೇಗೆ ಸೇರಿರ ಬಹುದು ಎಂದು ತಿಳಿಯದೆ ಗೊಂದಲಕ್ಕೆ ಈಡಾದರು ಮಹಾದೇವಿ.ವೈದ್ಯರ ಉಹೆ ಅನ್ವಯ ಅವುಗಳನ್ನು ಬೆಲ್ಲದ ಉಂಡೆಯಲ್ಲಿ ಸೇರಿಸಿ ಹಸುವಿಗೆ ತಿನ್ನಿಸಲಾಗಿತ್ತು. ಹೀಗೆ ಅದು ಕರುಳಲ್ಲಿ ಸೇರಿತ್ತು.ಸ್ವಲ್ಪ ದಿನಕ್ಕೆ ಹೃದಯಕ್ಕೆ ಸೇರುತ್ತದೆ ಎಂದು ವೈದ್ಯರು ತಿಳಿಸಿ,ಗೌರಳ ಸಾವು ನಿಶ್ಚಿತ ಎಂದು ತಿಳಿಸಿದಂತೆ.ಈ ದುಷ್ಕೃತ್ಯ ಮಾಡಿದವ ಆ ಹಾಲು ಮಾರುವವ ಎನ್ನುವ ಅಂಶ ಈಕೆಗೆ ಮನದಟ್ಟಾಯಿತು.ಸ್ವಲ್ಪ ದಿನಗಳಾದ ಮೇಲೆ ಆ ಹಸು ಸತ್ತು ಹೋಯಿತು..ಕೊನೆಯಲ್ಲಿ ಲೇಖಕಿ ಹೇಳುವುದು ಕೃಷ್ಣ ಹುಟ್ಟಿದ ಯಾದವರ ವಂಶದಲ್ಲಿ ಹುಟ್ಟಿದ ಈತ ಹಸುವಿನ ಸಾವಿಗೆ ಕಾರಣ ಆದನಲ್ಲ..!ಅವರು ವ್ಯಥೆ ಹೊಂದಿದಂತೆ ನಾವು ಈಗ...!!

Thursday, January 29, 2009

ಏನಿದರ ಅರ್ಥ?

ಕಳೆದ ವಾರ ಮಂಗಳೂರಿನ ಪಬ್ ದಾಳಿ ಅತ್ಯಂತ ಖಂಡನೀಯ,ಇದು ಹೇಯಕರ ಕೃತ್ಯ,ಧರ್ಮಾಂಧರ ಅತಿರೇಕದ ಪರಾಕಾಷ್ಠೆ, ಅದು ಇದು ಅಂತೆಲ್ಲ ಪ್ರಜ್ಞಾವಂತ ನಾಗರೀಕ ಸಮಾಜದ ಕುಡಿಗಳು ಕಿರುಚಾಟ ನಡೆಸಿದರು. ಆ ಘಟನೆ ಕಂಡಾಗ ಅತೀವ ದುಃಖಆಯಿತು.ಕಾರಣ ಇಷ್ಟೇ ಮನುಷ್ಯ ಎಷ್ಟು ಮುಂದುವರೆದರೇನು ಗಂಡಸಲ್ಲಿ ಅಡಗಿರುವ ಆ ಕ್ರೌರ್ಯ ಶತಶತಮಾನಗಳು ಕಳೆದರೂ ಬದಲಾವಣೆ ಕಂಡಿಲ್ಲ.ನಿಜ ಮೊದಲು ಇರುವಷ್ಟು ಅದರ ಓಘ ಈಗ ಇರದೇ ಇರಬಹುದು,ಆದರೆ ಮೂಲ ಸ್ವರೂಪ ಆಗಾಗ ಜಾಗೃತ ಆಗುತ್ತಲೇ ಇರುತ್ತದೆ.ರಾಮನ ನಾಡು ಎನ್ನುವ ಖ್ಯಾತಿ ಪಡೆದಿರುವ ಈ ಭಾರತ ಭೂಮಿಯಲ್ಲಿ ಹೆಣ್ಣುಮಕ್ಕಳನ್ನು ಗೌರವಿಸುವುದು ಆ ಪಕ್ಕಕ್ಕೆ ಇಡಿ ,ಅವರನ್ನು ಸಾರ್ವಜನಿಕ ಸ್ಥಳಗಲ್ಲಿ ಹಿಗ್ಗಾಮುಗ್ಗಾ ಹೊಡೆಯುವುದು ಅಂದರೆ ಏನು ಅರ್ಥ? ಅವರು ಅಶ್ಲೀಲವಾಗಿ ಡ್ಯಾನ್ಸ್ ಮಾಡುತ್ತಿದ್ದರು,ಡ್ರಗ್ಸ್ ತಗೊಂಡಿದ್ದರು,ಇಂತಹ ಕೆಲಸ ಮಾಡಿದರೆ ನಮ್ಮ ಸಹೋದರಿಯರಾದರು ಸರಿಯೇ ನಾವು ಸುಮ್ಮನೆ ಬಿಡುವುದಿಲ್ಲ.. ಹಾಗೆ ಹೀಗೆ ಅಂತ ರಾಮನ ಮಕ್ಕಳು ಆ ಪರಿ ಕಿರುಚಾಟ ನಡೆಸಿದರು.ಆದರೆ ಅವರಿಗೆ ಹೊಡೆಯುವ ಹಕ್ಕು ಕೊಟ್ಟವರು ಯಾರು? ಡ್ರಗ್ಸ್ ವಿಷಯಕ್ಕೆ ಬರುವುದಾದರೆ ಅವರು ಡ್ರಗ್ಸ್ ತೆಗೆದು ಕೊಳ್ಳುವುದಕ್ಕೆ ಅವಕಾಶ ಮಾಡಿದವರು ಯಾರು? ಆ ಪಬ್ ಯಜಮಾನ ತಾನೆ? ಅವನನ್ನು ಮೊದಲು ಹೊಡೆಯದೆ ನೇರವಾಗಿ ಗಂಡುಸಿಂಹಗಳು!ಹೆಣ್ಣುಮಕ್ಕಳನ್ನು ಎಳೆದು ಅಸಹ್ಯಕರ ರೀತಿಯಲ್ಲಿ ಅಬ್ಬ! ಆ ದೃಶ್ಯ ನೆನೆದರೆ ಈಗಲೂ ಮೈ ಜುಮ್ !ಅಂತ ಅನ್ನುತ್ತೆ, ಒಬ್ಬ ಹೆಣ್ಣುಮಗಳು ಎರ್ರಾಬಿರ್ರಿ ಓದಿದರೆ,ಮತ್ತೊಬ್ಬಳು ಆ ಗಂಡು ಸಿಂಹದ ಏಟಿಗೆ ಕುಸಿದು ಬಿದ್ದಳು.ಇಲ್ಲಿ ಆಗ ಬೇಕಾಗಿರುವುದು ಪುರುಷ ತನ್ನ ಮೂಲ ಗುಣ ಬಿಟ್ಟು ಹೆಣ್ಣನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಬೇಕು.ಪ್ರಾಯಶ: ಈ ರೀತಿ ಹಿಂಸೆ ನೀಡುವ ಪುರುಷಸಿಂಹಗಳು ಹೆಣ್ಣಿ ಬೆಳವಣಿಗೆ,ಅವಳ ಸ್ವಾತಂತ್ರ ,ಜೀವನ ಶೈಲಿಯಲ್ಲಿನ ಮಾರ್ಪಾಟು ಒಪ್ಪಿಕೊಳ್ಳಲು ಇಷ್ಟ ಪಡುತ್ತಿಲ್ಲ.ಅದರ ಪರಿಣಾಮ ಇಂತಹ ದುಷ್ಕ್ರ್ಯುತ್ಯಗಳ ಹುಟ್ಟಿಗೆ ಕಾರಣ.ಯಾವ ಅಂಶವು ಇದರ ಮುಂದೆ ಇಲ್ಲ.ಎಂದು ಆತ ಹೆಣ್ಣನ್ನು ಅರ್ಥ ಮಾಡಿಕೊಳ್ಳುತ್ತಾನೋ ಆಗ ಕೌಟುಂಬಿಕ ,ಸಾರ್ವಜನಿಕ ಹಿಂಸೆಗಳಿಗೆ ಅಂತ್ಯ ಕಾಣುತ್ತದೆ.ಪುರುಷರು ಬದಲಾಗುತ್ತರಾ?

Saturday, January 24, 2009

ಸಾವು..ಸದಾ ಕಾಡುತ್ತೆ!!

ನಿನ್ನೆ ಸಿರ್ಸಿ ಸರ್ಕಲ್ ಸಮೀಪದ ರೇಲ್ವೆ ಕಂಬಿ ಬಳಿ ಇರುವ ಕಾಪೋಂಡ್ ಬಳಿ ಹೆಣವೊಂದು ಬಿದ್ದಿತ್ತು.ಅಂತಹ ಅನಾಥ ಹೆಣಗಳು ಮಹಾನಗರಗಳಲ್ಲಿ ಸಾಮಾನ್ಯ.ಆದರೆ ಯಾಕೋ ಗೊತ್ತಿಲ್ಲದಂತೆ ಮನಸ್ಸು ವಿಹ್ವಲ ಆಯ್ತು.ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ.. ! ಅಂತ ನಾರ್ಮಲ್ ಆಗಿ ಹೇಳಿ ಸುಮ್ಮನಾಗುವ ಮನಸ್ಥಿಯಲ್ಲಿ ನಾನು ಇರೋಕೆ ಸಾಧ್ಯ ಆಗಲಿಲ್ಲ..ಸಾವಿನ ಬಗ್ಗೆ ನನಗೆ ಹೆದರಿಕೆ ಇಲ್ಲ,ಅತಿ ಕುತೂಹಲ ಘಟ್ಟ ಅಂತ ಭಾವಿಸ್ತೀನಿ.ಗೊತ್ತಿಲ್ಲ ಈ ರೀತಿಯ ಮನಸ್ಥಿತಿಗೆ ಕಾರಣ ಏನು ಅಂತ.ಪ್ರಾಯಶಃ ನನ್ನ ಹತ್ತಿರ ಹಣ,ಆಸ್ತಿ,ಹೆಸರು ಇಲ್ಲದ ಇರುವುದು ಇದಕ್ಕೆ ಕಾರಣ ಆಗಿರ ಬಹುದೇನೋ.ಆದರೆ ಆ ಅನಾಥ ಹೆಣ ಯಾಕೋ ನನ್ನ ಮನಸ್ಸಿನಲ್ಲಿ ಉಳಿದು ಹೋಯಿತು?ನಾವು ಹಲವು -ಕೆಲವುಗಳಿಗಾಗಿ ಸದಾ ಚಿಂತಿಸುತ್ತಿರುತ್ತೇವೆ.ಅದು ಸಿಕ್ಕರೂ,ಸಿಗದೇ ಇದ್ದರು ಸಾವು ತನ್ನ ಸಮಯಕ್ಕೆ ತಾನು ಬಂದು ತಮ್ಮನ್ನು ಕರೆದುಕೊಂಡು ಹೋಗಿಬಿಡುತ್ತದೆ. ಕೆಲವರು ಬದುಕಲ್ಲಿ ಎಲ್ಲ ಪಡೆದಿರುತ್ತಾರೆ ಆದರೆ ಸಾಯುವ ಕೊನೆ ಗಳಿಗೆಯಲ್ಲಿ ಒಂದು ಹನಿ ನೀರು ಹಾಕಲು ಒಬ್ಬರು ಇರುವುದಿಲ್ಲ.ಕೆಲವರು ಬದುಕಲ್ಲಿ ಎಲ್ಲವನ್ನು ಕಳೆದುಕೊಂಡಿರುತ್ತಾರೆ ಸಾವಿನ ಮೂಲಕ ಎಲ್ಲರನ್ನು ಪಡೆದು ಕೊಳ್ಳುತ್ತಾರೆ.ವಿಚಿತ್ರ! ಒಂದು ಸರ್ತಿ ಪರಿಚಿತ ಹೆಣ್ಣು ಮಗಳು ತಾನು ಸೀಮೆ ಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಸತ್ತು ಹೋದಳು.. ಕಾರಣ ಯಾರಿಗೂ ಗೊತ್ತಿರಲಿಲ್ಲ.ಒಂದು ಸರ್ತಿ ಆ ಹೆಣ್ಣುಮಗಳ ತಾಯಿ ಇಂತಹುದೇ ನೋವು ಉಣ್ಣುತ್ತಿದ್ದ ತಾಯಿ ಮತ್ತೊಬ್ಬ ತಾಯಿ ಬಳಿ ಅಕ್ಕ ನಿನ್ನ ಮಗಳ ಸಾವಿಗೆ ಒಂದು ಕಾರಣ ಇದೆ ಆದರೆ ನನ್ನ ಮಗಳು ಕಾರಣ ಹೇಳದೆ ಸತ್ತಳು.. ಇದು ನಾನು ಸಾಯುವ ತನಕ ಕೊರಗುವಂತೆ ಮಾಡುತ್ತದೆ ಅಂತ ಅತ್ತಿದ್ದರು.ಕೆಲವು ಸರ್ತಿ ಕೋಪವು ಅಂತಹ ಸಾವಿಗೆ ಕಾರಣ ಆಗುತ್ತದೆ ಅಂತ ಕಾಣುತ್ತದೆ.ಆದರೆ ಎಲ್ಲದಕ್ಕಿಂತ ಬದುಕಿನ ಬಗ್ಗೆ ಅತಿ ಆಸೆ ಇಟ್ಕೊಂಡು ವಿದೇಶಗಳಿಗೆ ಹೋಗಿ ಸಾಧನೆ ಮಾಡುವ ಆಸೆ ಹೊಂದಿರುತ್ತಾರಲ್ಲ ಅಂತಹವರು ಕೊಲೆ ಆಗಿ,ಅದು ಅಬ್ಬೇಪಾರಿ ಹೆಣವಾಗಿ ಎಂದೋ ತಾಯಿ-ತಂದೆ ಸಂಬಂಧಿಕರಿಗೆ ತಿಳಿಯುತ್ತದಲ್ಲ ಅದರಷ್ಟು ದು:ಖಕರ ಸಂಗತಿ ಮತ್ತೊಂದಿಲ್ಲ.ಅಂತಹ ನ್ಯೂಸ್ ಓದಿದರೆ ನನಗೆ ನೋವು ತಡಿಯೋಕೆ ಆಗೋದಿಲ್ಲ.ಬದುಕಿನೊಂದಿಗೆ ಸಾವು ಇದ್ದೆ ಇರುತ್ತದೆ,ನಾವು ನಮ್ಮ ಟೈಮ್ ಬರುವ ತನಕ ಕಾಯುತ್ತ (ಅರಿವಿಲ್ಲದಂತೆ ) ಆ ಸಂಗತಿಯನ್ನು ಮರೆತು ಮುಂದೆ ಸಾಗ್ತಾನೆ ಇರ್ತಿವಿ.ಇದೆ ಜೀವನ ಅಲ್ವ!

Friday, January 23, 2009

ಸೀತೆ ಅಂತ ಕರೀತಾರೆ!

ನಿನ್ನೆ ನಾನು ಒಬ್ಬ ಹೆಣ್ಣು ಮಗಳನ್ನು ಭೇಟಿ ಮಾಡಿದೆ.ಆಕೆ ನೋಡೋದಕ್ಕೆ ಆಕರ್ಷಕ ಆಗಿದ್ದಳು.ಚಟಪಟ ಅಂತ ಮಾತಾಡಿ ಮಾತಾಡಿ ದಣಿತಾಯಿದ್ದಳು.ನಾನು ಭಾಗವಹಿಸಿದ ಕಾರ್ಯಕ್ರಮದಲ್ಲಿ ಯಾರು ನನಗೆ ಪರಿಚಯ ಇರಲಿಲ್ಲ,ತಾನೆ ಖುದ್ ಪರಿಚಯ ಮಾಡಿಕೊಂಡ ಈ ಹೆಣ್ಣುಮಗಳ ಮಾತು ಕೇಳೋದಷ್ಟೇ ನಂಗೆ ಉಳಿದದ್ದು! ತನ್ನ ಮಗನ ಗುಣಗಾನ ಹೆಚ್ಚಾಗಿ ಅದರಲ್ಲಿತ್ತು.ಸಾಮಾನ್ಯವಾಗಿ ತುಂಬಾ ಜನ ಹೆಣ್ಣು ಮಕ್ಕಳು ಮಾಡುವ ಅತಿ ಮುಖ್ಯ ಕೆಲಸಗಳಲ್ಲಿ ಇದು ಒಂದು.ನಾನೇನು ಕಡಿಮೆ ಇಲ್ಲ!!ಆಕೆ ಮಾತಿನ ಮಧ್ಯದಲ್ಲಿ ತನ್ನ ಅತ್ತೆ ಮನೆಯವರು ತನಗೆ ಯಾವ ರೀತಿ ಕಷ್ಟ ಕೊಟ್ಟರು,ತಾನು ಹೇಗೆ ಕಷ್ಟಪಟ್ಟೆ ಎಂದು ಬಿಡಿಸಿ,ಬಿಡಿಸಿ..ಹೇಳಿದರು.ಆಕೆ ಗರ್ಭಿಣಿ ಆಗಿದ್ದಾಗ ಅತಿಯಾದ ವಾಂತಿ ಆಗುತ್ತಿತ್ತಂತೆ.ಆ ಸಂದರ್ಭದಲ್ಲಿ ಆಕೆ ಮುದ್ದೆ ತಿನ್ನಲು ಇಷ್ಟ ಪಟ್ಟಾಗ ಮಗು ಕಪ್ಪು ಬಣ್ಣದಲ್ಲಿ ಹುಟ್ಟುತ್ತದೆ ಅಂತ ಹೇಳಿ ತೊಂದರೆ ಕೊಡುತ್ತಿದ್ದರಂತೆ .ಹೀಗೆ ಹೇಳ್ತಾ ಆಕೆ ಪಾಪ ತಾನು ಹೇಗೆಲ್ಲಾ ಅತ್ತೆ ಮನೆಯವರಿಂದ ದೈಹಿಕವಾಗಿ ತೊಂದರೆಗೆ ಒಳಗಾದೆ ಎಂದು ತಿಳಿಸಿದರು.(ಆಕೆ ಮೈಮೇಲೆ ಆದ ಗಾಯದ ಹಳೆ ಗುರುತುಗಳು ಅಸ್ಪಷ್ಟವಾಗಿ ಇದೆ.)ಹಾವು ಕೈಲಿ ಕಚ್ಚಿಸಿದ್ರು??!!(ಯಾವ ಹಾವೋ ಗೊತ್ತಿಲ್ಲ) ಎಂದು ಆಕೆ ಹೇಳಿದರು.ನನ್ನ ಮಗನನ್ನು ಕಂಡರೆ ಎಲ್ಲರಿಗು ಇಷ್ಟ ಆಗುತ್ತೆ ಆದರೆ ನನ್ನ ಅತ್ತೆ ಮನೆಯವರಿಗೆ ಉಹುಂ ಸ್ವಲ್ಪವೂ ಇಷ್ಟ ಇಲ್ಲ ಎನ್ನುತ್ತಾ ಆಕೆ ಬೇಸರ ಪಟ್ಟುಕೊಂಡರು.ದೇಹದ ಮೇಲೆ ಆದ ಗಾಯ ಮರೆಯಾದರು ಆಕೆಯ ಮನದ ಮೇಲೆ ಆದ ಗಾಯ ಮಾಯದೆ ಹಾಗೆ ಉಳಿದು ಬಿಟ್ಟಿದೆ.ಈಕೆ ಕಷ್ಟಗಳ ಬಗ್ಗೆ ಪತ್ರಿಕೆ ಒಂದು ಸವಿಸ್ತಾರವಾಗಿ ಬರೆದಿತ್ತು ಅಂತ ಆಕೆ ಹೇಳಿಕೊಂಡರು.ಮಾತು ಆಡುತ್ತ ಆಕೆ ನಿಮಗೆ ಸಿನಿಮ ನಟಿ ಅಭಿನಯ ಗೊತ್ತ? ಆಕೆ ಅತ್ತಿಗೆ ನಾನು..ಅಂದ್ರು.ಕಥೆ ಪೂರ್ಣಚಿತ್ರಣ ಸಿಕ್ಕಿತ್ತು.ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವುದಕ್ಕೆ ಸೀತೆ ಅಂತ ಕರೀತಾರೆ.ಈ ಪಟ್ಟಿಯಲ್ಲಿ ಎಷ್ಟು ಜನ ಸೇರ್ಪಡೆ ಆಗಿದ್ದಾರೋ ಅದು ಲೆಕ್ಕಕ್ಕೆ ಸಿಕ್ಕೊಲ್ಲ..ರಾಮನು ಹುಟ್ಟಿದ ನಾಡಲ್ಲಿ ಮಾತ್ರ ಅಲ್ಲ ಇಡಿ ಮಾನವ ಸಮಾಜದಲ್ಲಿ ಸೀತೆಗಳಿಗೇನು ಕೊರತೆ ಇಲ್ಲ .ಆದರೆ ಈ ಪಟ್ಟಿ ಹೆಣ್ಣಿಗೆ ಮಾತ್ರ ಸೀಮಿತ ಆಗಿದೆ ಅಂತ ಅಂದು ಕೊಂಡರೆ ಅದು ನಮ್ಮ ತಪ್ಪು ಕಲ್ಪನೆ ಅಷ್ಟೆ!

Wednesday, January 21, 2009

ಉಫ್ ಭೂತ..!!

ಆಂಗ್ಲ ಬರಹಗಾರರಿಗೆ ದೆವ್ವ,ಭೂತ ಕಂಡ್ರೆ ಅದೇನು ಭಯಾನೂ ನಾಕಾಣೆ!!ನಾನು ಸಾಕಷ್ಟು ಸರ್ತಿ ಹಾರರ್ ಕಥೆಗಳನ್ನು ಓದಿದ್ದೀನಿ ಅದರಲ್ಲಿ ಪಾತ್ರಗಳು ಹೆದರಿ,ಮುದರಿ ಬ್ಯಾಡ ಬರದವನ ಕಥೆ!! ಕೆಲವು ಹಾರರ್ ಕಥೆಗಳು ಶುರು ಆಗುತ್ತೆ ಆದರೆ ಅದರಲ್ಲಿ ಬರುವ ದೆವ್ವದ ಥರಾನೇ ಇದ್ದಕ್ಕಿದ್ದ ಹಾಗೆ ಆಸಕ್ತಿ ಕಳೆದು ಕೊಂಡು ಬಿಡುತ್ತದೆ.ಒಂದು ಕಥೆ ಆತ ತನ್ನ ಸತ್ತ ಹೆಂಡತಿಯನ್ನು ನೆನಪಿಸಿ ಕೊಳ್ಳೋದು.ಆದರೆ ಮೊದಲಿಂದ ಕೊನೆವರಗು ಅದರಲ್ಲಿ ಮನೇಲಿರೋ ಗಡಿಯಾರಗಳ ವರ್ಣನೆ !ಪ್ರಾಯಶಃ ಆ ಲೇಖಕನಿಗೆ ಗಡಿಯಾರದ ಫೋಬಿಯಾ ಇರಬೇಕು.ಇವೆಲ್ಲಕ್ಕಿಂತ ನಮ್ಮಲ್ಲಿ ರಚನೆ ಆಗಿರೋ ಮಾಟಗಾತಿ ಕಥೆಗಳು,ವಿಕ್ರಮ್ ಔರ್ ಬೇತಾಲ್.. ಅಲ್ಲದೆ ಕೆಲವು ಅತಿ ರೋಚಕ ದೆವ್ವದ ಕಥೆಗಳು ತುಂಬ ಆಸಕ್ತಿ ಹೆಚ್ಚಿಸುತ್ತೆ.ಸಾಮಾನ್ಯವಾಗಿ ದೆವ್ವ ಇದೆ ಅಂತ ನಂಬೋರಿಗೆ ಅದು ಇದ್ದೆ ಇದೆ (ನಾನು ಅರ್ಧಂಬರ್ಧ ನಂಬ್ತೀನಿ!! ದೇವ್ರೇ ಕಾಪಾಡಪ್ಪ!).ದೆವ್ವ ಇದೆ ಅಂತ ತಿಳಿ ಬೇಕಾದರೆ ಫಾರಿನ್ ಜನರ ದೆವ್ವ ಸೈಟ್ಗಳನ್ನು ಓದಬೇಕು.ವಿಷಯ ಅದಲ್ಲ,ನನ್ನ ಪರಿಚಯಸ್ತರಿಗೆ ದೆವ್ವ ಕಾಣಿಸಿತಂತೆ.ಅವರು ಥೇಟ್ ಕನ್ನಡ ಸಿನಿಮಾ ರೀತಿಯಲ್ಲಿ(ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಇದು ಅನ್ವಯ ಆಗುತ್ತೆ) ಬೈಕ್ನಲ್ಲಿ ಕಾಡಿನ ಮಧ್ಯೆ ಹೋಗಬೇಕಾಗಿ ಬಂತಂತೆ.ತಪ್ಪಿಸಿಕೊಳ್ಳೋಕೆ ಚಾನ್ಸ್ ಇಲ್ಲದ ಕಡೆ ಇದ್ದಕ್ಕಿದ್ದ ಹಾಗೆ ಆಕಾಶ-ಭೂಮಿ ಟಚ್ ಮಾಡೋ ಹಾಗೆ ಒಂದು ಆಕೃತಿ ಇವರ ಬೈಕ್ ಮುಂದೆ ನಿಲ್ತಂತೆ.ಸರಿ ಈತ ಆ ದೆವ್ವಕ್ಕೆ ಕೇರ್ ಮಾಡದೆ ನನಗಿಂತ ನೀನೂ ದೊಡ್ಡವನಾ??!! ನನ್ ಮುಂದೆ ನಿಲ್ಲೋಕೆ ನಿನಗೆಷ್ಟು ಧೈರ್ಯ ಅಂತ ಆವಾಜ್ ಹಾಕಿದನಂತೆ.ಅದು ತಕ್ಷಣ ಚಿಕ್ಕ ಆಕಾರ ಆಗಿ ಬದಲಾಗಿ ಪುಟ,ಪುಟನೆ ತೆವಳಿಕೊಂಡು ಹೋಯ್ತಂತೆ.ಸೊ ನನಗೆ ತಿಳಿದು ಬಂದ ಸಂಗತಿ ನಾನು ನಿನಗಿಂತ ಅಧ್ವಾನ !ಅಂತ ಹೇಳಿಕೊಂಡರೆ ಸಾಕು,ದೆವ್ವ ಓಡೋಡಿ ..ಓಡೋಡಿ..! ಹೋಗುತ್ತೆ... ಸ್ವೀಟ್ ಸಲುಶನ್!! ಮನುಷ್ಯ ಎದುರು ಬಂದರೆ ಇದು ಅಸಾಧ್ಯ ಅಲ್ವ?

Tuesday, January 20, 2009

ಮೋಸ ಮಾಡಿದವನ ಹೆಸರ...

ಈಗಂತೂ ಎಲ್ಲ ಕಡೆ ಸತ್ಯಮ್ ರಾಜುದೇ ಕಥೆ.ಪೇಪರ್ ಓದ್ತಾಯಿದ್ದಾಗ ಈ ಸುದ್ದಿ ಗಮನಕ್ಕೆ ಬಂತು.ಒಂದು ಆನ್ ಲೈನ್ ಗೇಮ್ ಶುರು ಆಗಿದೆಯಂತೆ,ಅದರ ಹೆಸರು ನೇಲ್ ಟು ದ ಥೀಫ್ ಅಂತಾನೋ ಏನೋ.ಅದರಲ್ಲಿ ರಾಜು ಮೇಲೆ ಮೊಟ್ಟೆ ಎಸೆಯೋದು.ಈಗಾಗಲೇ ಸಾಕಷ್ಟು ಜನ ಆ ಆತ ಆಡಿದ್ದಾರಂತೆ.ಅದರಲ್ಲಿ ಅತಿ ಹೆಚ್ಚು ಮೊಟ್ಟೆ ಎಸೆತ ಆಗಿರೋದು ಹದಿನೆಂಟು ಅಂತೆ.ಪ್ರಾಯಶಃ ಈ ಆಟ ಆಡ್ತಾಯಿರೋರು ಸತ್ಯಮ್ ನಲ್ಲಿ ಶೇರ್ಕೊಂಡವರು ಆಗಿರ ಬೇಕು ಅಂತ ತಮಾಶೆಯಾಗಿ ಬರೆದವರು ಎಂಡ್ ಮಾಡಿದ್ದಾರೆ,.ಆದರೆ ಈ ವಿಷಯ ತಮಾಷೆ ಅನ್ನಿಸುತ್ತದೆಯೇ? ಈ ಸಂದರ್ಭದಲ್ಲಿ ಒಂದು ಮಾತು ಜ್ಞಾಪಕಕ್ಕೆ ಬರುತ್ತದೆ..ಮೋಸ ಮಾಡಿದವನ ಹೆಸರೆನ್ನ ಮಗನಿಗೆ ಇಡಬೇಕು..ಹಿರಿಯರ ಹಿತನುಡಿಗಳಲ್ಲಿ ಇದು ಒಂದು. ಆದರೆ ಈ ಮಾತು ಎಷ್ಟು ಕ್ರೂರ ಅಲ್ವ.ಮೊದಲೇ ಮೋಸ ಹೋಗಿರ್ತಾರೆ,ಪದೇಪದೆ ಜ್ಞಾಪಕದಲ್ಲಿ ಇಟ್ಟುಕೊಳ್ಳಲು ಸಾಧ್ಯ ಆಗುವಂತೆ ಆ ಹೆಸರು ಮಗನಿಗೆ ಇಡಬೇಕಂತೆ ಆ ಬಡಪಾಯಿ.ಈ ಮಾತನ್ನೇ ನಿಜ ಬದುಕಿಗೆ ಅಳವಡಿಸಿಕೊಂಡರೆ ಸತ್ಯಮ್ ರಾಜು,ವಿನಿವಿಂಕ್ ಶಾಸ್ತ್ರಿ,ಹರ್ಷದ್ ಮೆಹ್ತಾ,ಇನ್ನು ಹಲವಾರು ಅತ್ಯುಪಕಾರಿಗಳ ಹೆಸರು ಪ್ರತಿಯೊಂದು ಮನೆಯ ಮಕ್ಕಳ ಹೆಸರಾಗಿ ನಲಿದಾಡ್ತಾ ಇರ್ತಾ ಇತ್ತು.ಮೋಸ ಮಾಡಿದವನ ನೆನಪೇ ಬೇಡ ಅನ್ನಿಸುವಾಗ ಆ ವ್ಯಕ್ತಿಯ ಹೆಸರು ಮಗನಿಗೆ ರಾಮ ರಾಮ!!!

Saturday, January 17, 2009

ಯಾಕೆ ಹೀಗೆ..?

ಇತ್ತೀಚೆಗೆ ಬ್ಲಾಗ್ ಒಂದರಲ್ಲಿ ಓದಿದೆ.ಅದರಲ್ಲಿ ಆತ ಹಿರಿಯ ಪತ್ರಕರ್ತರ ಇತಿಹಾಸ ಕೆದಕಿ ಜನಗಳಿಗೆ ತೋರುವ ಪ್ರಯತ್ನ ಮಾಡಿದ್ದರು.ಅದೇ ಬ್ಲಾಗ್ನಲ್ಲಿ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಓರ್ವ ಓದುಗರು ಪತ್ರಕರ್ತರು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎನ್ನುವಂತೆ ಆ ಬರೆದಾತನಿಗೆ ಉತ್ತರ ಕೊಟ್ಟಿದ್ದರು.ಆ ಬ್ಲಾಗ್ ಕತೃ ಬರೆಯುವ ರಭಸದಲ್ಲಿ ಬಳ್ಳಾರಿಯ ಜನರಿಗೆ ಕನ್ನಡ ಅರೆಬರೆ ಗೊತ್ತು ಎನ್ನುವ ಮೆಸೇಜ್ ಕೊಟ್ಟಿದ್ದರು.ನನಗೆ ಆಶ್ಚರ್ಯ ಆಗಿದ್ದು ಏನೆಂದರೆ,ಆತ ಒಬ್ಬ ವ್ಯಕ್ತಿ ಮೇಲೆ ದ್ವೇಷ ಸಾರಲು ಹೊರಟಿದ್ದಾರೋ ,ಭಾಷೆ ಅಥವಾ ಆ ಪ್ರಾಂತ್ಯದಲ್ಲಿನ ನಿವಾಸಿಗಳ ಬಗ್ಗೆ ಕೋಪ ತೀರಿಸಲು ಹೊರಟಿದ್ದಾರೋ ... ಅಂತು ಅದರ ಒಟ್ಟು ಪರಿಣಾಮ ಇದೊಂದು ವಯುಕ್ತಿಕ ದ್ವೇಷದ ಪರಮಾವಧಿ ಅಂತ ಅನ್ನ ಬಹುದು,ಹಾಗಾದರೆ ಈತನ ಪ್ರಕಾರ ಕೋಲಾರದವರು ಸಹ ತೆಲಗು ಮುದ್ದು ಬಿಡ್ಡಲುಅಂತ ಆಯ್ತಲ್ಲ.ನಮ್ಮ ರಾಜ್ಯ ಭೌಗೋಳಿಕವಾಗಿ ಯಾವ ರೀತಿಯಲ್ಲಿ ನಿರ್ಮಿತ ಆಗಿದೆ ಅಂತ ನಿಮಗೆ ಗೊತ್ತು,ಇಲ್ಲಿ ಕನ್ನಡ ಭಾಷೆ ಜೊತೆ ಜೊತೆಗೆ ತಮಿಳು,ತೆಲಗು,ಮರಾಠಿ,ಉರ್ದು,ಮಲಯಾಳಂ... ಅಲ್ಲದೆ ಹಿಂದಿ... ಹೀಗೆ ಹಲವಾರು ಭಾಷೆಗಳು ಗಡಿಯ ಕಾರಣದಿಂದ ಅಲ್ಲದೆ,ವ್ಯಾಪಾರದ ಕಾರಣದಿಂದಲೂ ತನ್ನ ಪ್ರಭಾವ ಬೀರಿದೆ .ಅದನ್ನು ಅರಿತು ಇದು ಇಷ್ಟಕ್ಕೆ ಸೀಮಿತ ಅಂತ ನಿರ್ಧಾರ ಮಾಡುವ ಹಕ್ಕು ವಯುಕ್ತಿಕವಾಗಿ ಯಾರಿಗೂ ಇಲ್ಲ.ಗಡಿಯಲ್ಲಿ ಕನ್ನಡ ಇಲ್ಲ ಎನ್ನುವ ವಾದ ಪುಷ್ಟಿಕರಿಸುವ ಪ್ರಯತ್ನ ಮಾಡುತ್ತಿದ್ದರೋ ಅಥವಾ ವಯುಕ್ತಿಕ ಕಾರಣ ಮುಂದಿಟ್ಟುಕೊಂಡು ಈ ರೀತಿ ಬರೆಯುತ್ತಾರೋ ಆ ಭಗವಂತ ಬಲ್ಲ.ಇತ್ತೀಚೆಗೆ ಶಶಿಧರ್ ಭಟ್ಟರು ತಮ್ಮ ಬ್ಲಾಗ್ ಕುಮ್ರಿಯಲ್ಲಿ ಯಾವುದೋ ಒಂದು ಬ್ಲಾಗ್ ತಮ್ಮ ಬಗ್ಗೆ ಕೆಟ್ಟದಾಗಿ (ಈ ಪದ ಬಳಸ ಬಹುದಾ?) ಬರೆದ ಬಗ್ಗೆ ಹೇಳಿದ್ದರು ,ಆ ವ್ಯಕ್ತಿಯ ದೃಷ್ಟಿಕೋನ ಸರಿಯಿಲ್ಲ ಎನ್ನುವುದಕ್ಕೆ ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ಮಾಡಿಕೊಂಡಿದ್ದರು.ಆ ವಿಧಾನ ಒಂದು ಅರ್ಥದಲ್ಲಿ ಸರಿ,ಕೆಲವು ಬಾರಿ ನಮ್ಮ ಬಗ್ಗೆ ನಾವೇ ಹೇಳ ಬೇಕಾಗಿ ಬರುತ್ತದೆ.ಅಂತಹ ಬ್ಲಾಗರ್ ಗೆ ಅದರಿಂದ ಪ್ರಯೋಜನ ಆಗದೆ ಹೋದರು ಕನಿಷ್ಠ ಅವರನ್ನು ಗೌರವಿಸುವ ಮಂದಿಗೆ ಸಮಾಧಾನ ಆಗುತ್ತದೆ.ಪತ್ರಿಕೆ ಒಂದರಲ್ಲಿ ವಿಶ್ವೇಶ್ವರ ಭಟ್ ಅವ್ರಿಗೆ ತರ್ಜುಮೆ ಗಂಧ ಗಾಳಿ ಗೊತ್ತಿಲ್ಲ,ಅವರ ಪತ್ರಿಕೆ ಸಧ್ಯದಲ್ಲೇ ಪೀತ ಪತ್ರಿಕೆ ಆಗುತ್ತೆ ಅನ್ನುವ ಸುದ್ದಿ ಓದಿ ನಾನು ಅಲ್ಲಿ ಕೆಲಸ ಮಾಡುವ ಗೆಳೆಯನನ್ನು ಕೇಳಿದೆ.ಆತ ನಕ್ಕು ನೀವು ಭಟ್ಟರು ಬರೆಯೋದನ್ನು ಕಣ್ಣಾರೆ ಕಂಡು ಈ ರೀತಿ ಪ್ರಶ್ನೆ ಕೇಳ್ತಾ ಇದ್ದೀರಲ್ಲ ಎಂದಿದ್ದಲ್ಲದೆ,ಇದು ನಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಕಿಡಿಗೇಡಿ ಪತ್ರಕರ್ತರ ಬ್ಲಾಗ್ ನಲ್ಲಿ ಪ್ರಕಟ ಆಗಿದ್ದ ವಿಷಯ,ಅದನ್ನು ಅವ್ರು ನಿಜ ಅಂತ ತಿಳಿದು ಪ್ರಕಟ ಮಾಡಿದ್ದಾರೆ ಸಧ್ಯದಲ್ಲೇ ಅವ್ರು ಯಾರು ಅಂತ ಗೊತ್ತಾಗುತ್ತೆ ಬಿಡಿ ಅಂತ ಅಂದರು..ಮುಂದೆ ಯಾವ ಪತ್ರಿಕೆ ಏನು ಆಗುತ್ತದೆಯೋ ಗೊತ್ತಿಲ್ಲ,ಆದರೆ ಬ್ಲಾಗ್ ಗಳಲ್ಲಿ ಈ ರೀತಿಯ ವಾರ್ತೆಗಳಿಗೆ ಕೊರತೆ ಇಲ್ಲ ಬಿಡಿ!!