Friday, January 23, 2009
ಸೀತೆ ಅಂತ ಕರೀತಾರೆ!
ನಿನ್ನೆ ನಾನು ಒಬ್ಬ ಹೆಣ್ಣು ಮಗಳನ್ನು ಭೇಟಿ ಮಾಡಿದೆ.ಆಕೆ ನೋಡೋದಕ್ಕೆ ಆಕರ್ಷಕ ಆಗಿದ್ದಳು.ಚಟಪಟ ಅಂತ ಮಾತಾಡಿ ಮಾತಾಡಿ ದಣಿತಾಯಿದ್ದಳು.ನಾನು ಭಾಗವಹಿಸಿದ ಕಾರ್ಯಕ್ರಮದಲ್ಲಿ ಯಾರು ನನಗೆ ಪರಿಚಯ ಇರಲಿಲ್ಲ,ತಾನೆ ಖುದ್ ಪರಿಚಯ ಮಾಡಿಕೊಂಡ ಈ ಹೆಣ್ಣುಮಗಳ ಮಾತು ಕೇಳೋದಷ್ಟೇ ನಂಗೆ ಉಳಿದದ್ದು! ತನ್ನ ಮಗನ ಗುಣಗಾನ ಹೆಚ್ಚಾಗಿ ಅದರಲ್ಲಿತ್ತು.ಸಾಮಾನ್ಯವಾಗಿ ತುಂಬಾ ಜನ ಹೆಣ್ಣು ಮಕ್ಕಳು ಮಾಡುವ ಅತಿ ಮುಖ್ಯ ಕೆಲಸಗಳಲ್ಲಿ ಇದು ಒಂದು.ನಾನೇನು ಕಡಿಮೆ ಇಲ್ಲ!!ಆಕೆ ಮಾತಿನ ಮಧ್ಯದಲ್ಲಿ ತನ್ನ ಅತ್ತೆ ಮನೆಯವರು ತನಗೆ ಯಾವ ರೀತಿ ಕಷ್ಟ ಕೊಟ್ಟರು,ತಾನು ಹೇಗೆ ಕಷ್ಟಪಟ್ಟೆ ಎಂದು ಬಿಡಿಸಿ,ಬಿಡಿಸಿ..ಹೇಳಿದರು.ಆಕೆ ಗರ್ಭಿಣಿ ಆಗಿದ್ದಾಗ ಅತಿಯಾದ ವಾಂತಿ ಆಗುತ್ತಿತ್ತಂತೆ.ಆ ಸಂದರ್ಭದಲ್ಲಿ ಆಕೆ ಮುದ್ದೆ ತಿನ್ನಲು ಇಷ್ಟ ಪಟ್ಟಾಗ ಮಗು ಕಪ್ಪು ಬಣ್ಣದಲ್ಲಿ ಹುಟ್ಟುತ್ತದೆ ಅಂತ ಹೇಳಿ ತೊಂದರೆ ಕೊಡುತ್ತಿದ್ದರಂತೆ .ಹೀಗೆ ಹೇಳ್ತಾ ಆಕೆ ಪಾಪ ತಾನು ಹೇಗೆಲ್ಲಾ ಅತ್ತೆ ಮನೆಯವರಿಂದ ದೈಹಿಕವಾಗಿ ತೊಂದರೆಗೆ ಒಳಗಾದೆ ಎಂದು ತಿಳಿಸಿದರು.(ಆಕೆ ಮೈಮೇಲೆ ಆದ ಗಾಯದ ಹಳೆ ಗುರುತುಗಳು ಅಸ್ಪಷ್ಟವಾಗಿ ಇದೆ.)ಹಾವು ಕೈಲಿ ಕಚ್ಚಿಸಿದ್ರು??!!(ಯಾವ ಹಾವೋ ಗೊತ್ತಿಲ್ಲ) ಎಂದು ಆಕೆ ಹೇಳಿದರು.ನನ್ನ ಮಗನನ್ನು ಕಂಡರೆ ಎಲ್ಲರಿಗು ಇಷ್ಟ ಆಗುತ್ತೆ ಆದರೆ ನನ್ನ ಅತ್ತೆ ಮನೆಯವರಿಗೆ ಉಹುಂ ಸ್ವಲ್ಪವೂ ಇಷ್ಟ ಇಲ್ಲ ಎನ್ನುತ್ತಾ ಆಕೆ ಬೇಸರ ಪಟ್ಟುಕೊಂಡರು.ದೇಹದ ಮೇಲೆ ಆದ ಗಾಯ ಮರೆಯಾದರು ಆಕೆಯ ಮನದ ಮೇಲೆ ಆದ ಗಾಯ ಮಾಯದೆ ಹಾಗೆ ಉಳಿದು ಬಿಟ್ಟಿದೆ.ಈಕೆ ಕಷ್ಟಗಳ ಬಗ್ಗೆ ಪತ್ರಿಕೆ ಒಂದು ಸವಿಸ್ತಾರವಾಗಿ ಬರೆದಿತ್ತು ಅಂತ ಆಕೆ ಹೇಳಿಕೊಂಡರು.ಮಾತು ಆಡುತ್ತ ಆಕೆ ನಿಮಗೆ ಸಿನಿಮ ನಟಿ ಅಭಿನಯ ಗೊತ್ತ? ಆಕೆ ಅತ್ತಿಗೆ ನಾನು..ಅಂದ್ರು.ಕಥೆ ಪೂರ್ಣಚಿತ್ರಣ ಸಿಕ್ಕಿತ್ತು.ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವುದಕ್ಕೆ ಸೀತೆ ಅಂತ ಕರೀತಾರೆ.ಈ ಪಟ್ಟಿಯಲ್ಲಿ ಎಷ್ಟು ಜನ ಸೇರ್ಪಡೆ ಆಗಿದ್ದಾರೋ ಅದು ಲೆಕ್ಕಕ್ಕೆ ಸಿಕ್ಕೊಲ್ಲ..ರಾಮನು ಹುಟ್ಟಿದ ನಾಡಲ್ಲಿ ಮಾತ್ರ ಅಲ್ಲ ಇಡಿ ಮಾನವ ಸಮಾಜದಲ್ಲಿ ಸೀತೆಗಳಿಗೇನು ಕೊರತೆ ಇಲ್ಲ .ಆದರೆ ಈ ಪಟ್ಟಿ ಹೆಣ್ಣಿಗೆ ಮಾತ್ರ ಸೀಮಿತ ಆಗಿದೆ ಅಂತ ಅಂದು ಕೊಂಡರೆ ಅದು ನಮ್ಮ ತಪ್ಪು ಕಲ್ಪನೆ ಅಷ್ಟೆ!
Subscribe to:
Post Comments (Atom)
No comments:
Post a Comment