Thursday, July 9, 2009

ಸಾಧ್ಯವೇ?!

'ಯಾರಾದ್ರು ಎದುರು ಸಿಕ್ಕರೆ ಚನ್ನಾಗಿ ಹೊಡೆದು ಬಿಡುವಷ್ಟು ಕೋಪ ಬಂದಿದೆ ನೀನು ಸಿಕ್ಕೇ ನನ್ ಹತ್ರ ಬೈಸಿಕೋ' ಅಂತ ಮಾತು ಶುರು ಮಾಡಿದಳು ಗೆಳತಿ.ತುಮಕೂರಿನ ಹೆಣ್ಣುಮಗಳು. ನಾನು ಕೆಲಸ ಮಾಡುವ ಕಡೆಯಲ್ಲಿ ಅಕೌ೦ಟೆಂಟ್.ಸ್ವಲ್ಪ ಓದುವ ಅಭ್ಯಾಸ ಆಕೆಗೆ.ಆಕೆ ತುಂಬ ಇಷ್ಟ ಪಟ್ಟು ಓದುತ್ತಿದ್ದ  ಲೇಖಕರೊಬ್ಬರ ಕೃತಿಗಳು ನನಗು ಇಷ್ಟವಾಗಿತ್ತು.ಇದೆ ನೆಪವಾಗಿ ಉತ್ತಮ ಸ್ನೇಹಕ್ಕೆ ದಾರಿ ಕೊಟ್ಟಿತ್ತು.ಸುಖ-ದುಃಖ ,ಸಂತೋಷ ಸಂಭ್ರಮ ಎಲ್ಲವು ಹಂಚಿಕೆ ಆಗ್ತಾ ಇರುತ್ತದೆ. ಆದರೆ ಆ ಗೆಳತಿಯ ಬದುಕು ಸಿಕ್ಕು ಸಿಕ್ಕು! ಒಂದನ್ನು ಬಿಡಿಸಿಕೊಂಡರೆ ಮತ್ತೊಂದು ಕಾಯ್ತಾ ಇರ್ತಾ ಇತ್ತು. ಅವಳ ಬೇಸರಕ್ಕೆ ಮುಖ್ಯ ಕಾರಣ ಒಂದರ್ಥದಲ್ಲಿ ನನ್ನ ಮೆಸೇಜ್ ಆಗಿತ್ತು.ಅಂದು ವಿಶ್ವ ಕ್ಷಮಾಯಾಚನಾ ದಿನ.ನನಗೆ ಆ ವಿಷ್ಯ ತಿಳಿದಿರಲಿಲ್ಲ,ನನ್ನ ಪುಟ್ಟ ಗೆಳತಿ ಒಬ್ಬಳು ಇದಕ್ಕೆ ಸಂಬಂಧಿಸಿದಂತೆ ಒಂದು ಮೆಸೇಜ್ ಮಾಡಿದ್ದಳು .ನಾನು ಅದನ್ನು ನನ್ನಿಂದ ಕಿರಿಕಿರಿಗೆ ಒಳಗಾದ ನನ್ನ ಆಪ್ತರಿಗೆ ಕಳುಹಿಸಿದೆ.ಯಾರಿಂದಲೂ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.ಆದರೆ ನನ್ನ ಗೆಳತಿ ಫೋನ್ ಮಾಡಿ ನನ್ನನ್ನು ಬೈದಳು.ಗಂಡ ಹಾಗೂ ಅಪ್ಪನಿಗೆ ಕಾಯಿಲೆ.ಮನೆಯಲ್ಲಿ ನಿಮಿಷ ಬಿಡುವಿಲ್ಲದಷ್ಟು ಕೆಲಸ,ಆಫೀಸಿನಲ್ಲಿ ಅಲುಗಾಡದಷ್ಟು ಜವಾಬ್ದಾರಿ,ಅದರ ಮಧ್ಯೆ ಆಗಾಗ ಆಫೀಸಿನಲ್ಲಿ ಕೆಟ್ಟು ಹಾಳಾಗುವ ಕಂಪ್ಯೂಟರ್ ,ಇವೆಲ್ಲದರ ಜೊತೆಗೆ ಕೆಲವು ಸಹೋದ್ಯೋಗಿಗಳ ಮಾಡುವ ಮಾನಸಿಕ ಹಿಂಸೆ,ಎಲ್ಲವನ್ನು ಹೇಳುತ್ತಾ ಅತ್ತೆ ಬಿಟ್ಟಳು.ನನಗೆ ಮಾತೆ ಹೊರಡಲಿಲ್ಲ.ಅಲ್ಲ ಕಣೆ ನನ್ನ ತಪ್ಪನ್ನು ಕ್ಷಮಿಸಿ ಬಿಡು ಅಂತ ಹೇಳಿದ್ದಿಯಲ್ಲ,ತಪ್ಪು ಮಾಡಿರುವ ವ್ಯಕ್ತಿಯನ್ನು ಸಾರಿ ಕೇಳಿದಷ್ಟು ಸುಲಭವಾಗಿ ಕ್ಷಮಿಸಲು ಸಾಧ್ಯವೇ? ಯೋಚಿಸು ಅಂತ ಹೇಳಿ ಮಾತು ಮುಗಿಸಿದಳು.ಅವಳು ಫೋನ್ ಇಟ್ಟಮೇಲೆ ಹಾಗೆ ಕುಳಿತೆ ಇದ್ದೆ,ಮಾತು ಆಡುವುದೇ ಬೇಡ ಅಂತ ಅನ್ನಿಸಿತ್ತು.ನನಗೆ ಅವಳು ಹೇಳಿದ ಕೊನೆ ಮಾತು ಗಾಢವಾಗಿ ಪರಿಣಾಮ ಬೀರಿತ್ತು.ನಿಜ ಅಲ್ವ ನಾವು ಬೇಕಾದಷ್ಟು ತಪ್ಪು ಮಾಡಿರ್ತೀವಿ,ಸಾಕಷ್ಟು ಸರ್ತಿ ಪಾಪದವರನ್ನು ನೋಯಿಸಿರುತ್ತಿವಿ,ಮಾತಲ್ಲೇ ಹೃದಯಕ್ಕೆ ಬರೆ ಹಾಕಿರ್ತೀವಿ, ನಮಗೆ ಅವರಿಗೆ ನೋವಾಗುತ್ತಿದೆ ಅಂತ ತಿಳಿದಿದ್ದರೂ ಪದೇಪದೆ ಅವರು ಇರಿಟೇಟ್ ಆಗುವ ವಿಷಯವನ್ನೇ ಆಡುತ್ತ ಮತ್ತಷ್ಟು  ಹರ್ಟ್ ಮಾಡಿರುತ್ತೇವೆ,ಸಾಕಷ್ಟು ತಪ್ಪುಗಳನ್ನು ಮಾಡಿರುತ್ತೇವೆ. ಇದು ತಪ್ಪು ಅಂತ ನಮಗೆ ಜ್ಞಾನೋದಯ ಆದ ಮೇಲೆ ಸಾರಿ ಕೇಳೋಕೆ ಹೊರತು ಬಿಡ್ತೀವಿ ವಿಶಾಲ ಮನಸ್ಸಿನವರಂತೆ!ನನ್ನ ಗೆಳತಿ ಹೇಳಿದಂತೆ ಸಾರಿ ಅಂತ ಕೇಳಿಬಿಟ್ಟರೆ ಮಾಡಿದ ತಪ್ಪನ್ನುಕ್ಷಮಿಸುವುದಕ್ಕೆ ಸಾಧ್ಯವೇ? ಏನೋ ನನಗೇನೂ ಗೊತ್ತಾಗ್ತಾ ಇಲ್ಲ!

1 comment:

  1. ಅಬ್ಬಬ್ಬಾ ಎಷ್ಟೊಂದು ಬರೆದುಬಿಟ್ಟಿದ್ದೀರಿ. ಇದನ್ನೆಲ್ಲಾ ಒಟ್ಟಿಗೆ ಓದಿ ಮುಗಿಸಲು ಸಾಧ್ಯವೇ ಇಲ್ಲ. ಹಂತಹಂತವಾಗಿ ಸಂಹಾರ ಮಾಡುತ್ತೇನೆ. ನಿಮ್ಮ ಮೂರೂ ಬ್ಲಾಗಿಗೆ ಇವತ್ತು ಭೇಟಿ ಕೊಡುತ್ತೇನೆ.

    ReplyDelete