Saturday, March 21, 2009

ಚಿಲ್ಲರೆ... ಚಿಲ್ಲರೆ..

ಚಿಲ್ಲರೆ ಅನ್ನುವ ಪದ ನಿಜ ಬದುಕಲ್ಲಿ ಹೆಚ್ಚು ಬಳಕೆ ಮಾಡುವುದಿಲ್ಲ.ಯಾಕೆ ಅಂತ ಎಲ್ಲರಿಗು ಗೊತ್ತು.ಯಾವುದಾದರು ವ್ಯಕ್ತಿ ತನ್ನ ಅಲ್ಪ ಬುದ್ಧಿಯಿಂದ ಪ್ರಸಿದ್ಧಿ ಆಗಿದ್ದರೆ ಛಿ !ಚಿಲ್ಲರೆ ಬುದ್ಧಿ ಅಂತ ಹೇಳೋದು ವಾಡಿಕೆ.ಅಂದರೆ ನಿಕೃಷ್ಟ ಎನ್ನುವ ಅರ್ಥ ಬರುತ್ತೆ ಅಂತ ಆಯ್ತಲ್ಲ.ಹೀಗೆ ಆರ್ಥಿಕವಾಗಿ ಹಿಂದುಳಿದಿರುವಾಗ ಕನಿಷ್ಠ ಒಂದು ಚಿಲ್ಲರೆ ಅಂಗಡಿ ಇಲ್ಲ ಅನ್ನುವ ಮಾತು ಆಡುತ್ತೇವೆ ಅಥವಾ ಕೇವಲ ಒಂದು ಚಿಲ್ಲರೆ ಅಂಗಡಿ ಇದೆ,ಚಿಲ್ಲರೆ ವ್ಯಾಪಾರಕ್ಕೆ ಈ ಪಾಟಿ ಗಾಂಚಲಿ! ಅಂತ ಆ ವ್ಯಕ್ತಿಯು ತನ್ನ ಚಿಲ್ಲರೆ ಅಸಹನೆಯನ್ನು ಸ್ವಾಭಿಮಾನವಾಗಿ ಬದುಕುತ್ತಿರುವ ಮತ್ತೊಬ್ಬ ವ್ಯಕ್ತಿಯ ಬಗ್ಗೆ ತೋರೋದು ಸಾಮಾನ್ಯ.ಸೋ ಚಿಲ್ಲರೆ ಅನ್ನುವ ಪದ ನಮ್ಮ ಬದುಕಲ್ಲಿ ಈ ರೀತಿ ಅಸ್ತಿತ್ವವನ್ನು ಪಡೆದಿದೆ.ಮೊನ್ನೆ ಹೀಗೆ ಒಂದು ಬ್ಲಾಗ್ ಓದುವಾಗ ಆ ಬ್ಲಾಗಿ ತನ್ನ ಕನ್ನಡದ ಎಲ್ಲ ಬ್ಲಾಗಿಗಳು ಒಟ್ಟಾಗಿ ಸೇರಿ ಚರ್ಚಿಸ ಬೇಕು,ಹರಟಬೇಕು ಎನ್ನುವ ಅನಿಸಿಕೆ ಇಟ್ಟಿದ್ದರು.ಫೈನ್! ಆದರೆ ನನಗೆ ಆ ಬ್ಲಾಗಿನಲ್ಲಿ ಬರೆದಿದ್ದ ಮತ್ತೊಂದು ಪದ ತುಂಬಾ ಆಶ್ಚರ್ಯವನ್ನು ಉಂಟು ಮಾಡಿತು.ಅದೇನೆಂದರೆ-ಚಿಲ್ಲರೆ ಬ್ಲಾಗಿಗಳು!! ನನಗೆ ಗೊತ್ತಿಲ್ಲ ಅವರು ಯಾವ ಅರ್ಥ-ಅನರ್ಥದಲ್ಲಿ ಇಂತಹ ಪದದ ಬಳಕೆ ಮಾಡಿದ್ದಾರೆ ಅಂತ.ಯಾಕೆ ಅಂತ ಅಂದ್ರೆ ನಾನು ಕಂಡಂತೆ ಸಾಕಷ್ಟು ಜನ ಅಕ್ಷರ ಪ್ರಿಯರಿಗೆ ಬರೆಯುವ ಆಸಕ್ತಿ ಹಾಗು ಮನಸ್ಸು ಇರುತ್ತದೆ.ಬ್ಲಾಗ್ ಅಂತಹ ಎಲೆಮರೆಯ ಪ್ರತಿಭೆಗಳ ಹೂತೋಟ .ಇಲ್ಲಿ ಜಾಗ ಇದೆ,ಮಣ್ಣು ಇದೆ,ಮುಷ್ಟಿಯ ತುಂಬಾ ಕನಸಿನ ಬೀಜಗಳಿವೆ ,ಮನದಲ್ಲಿ ಆಸೆಯ ಸೂರ್ಯ ಕಿರಣಗಳಿವೆ,ವಿಷಯಗಳ ಮಳೆ ಹನಿ ಇದೆ.ಇವು ಸಾಕಲ್ವ ಆತ/ಆಕೆ ತನ್ನತನ ತೋರೋದಕ್ಕೆ!ತುಂಬಾ ಸಾಹಿತ್ಯಿಕ ಕನ್ನಡದ ಕೊರತೆ ಕಾಣ ಬಹುದು ಆದರೆ ಬರೆಯ ಬೇಕೆನ್ನುವ ಆ ಶ್ರದ್ಧೆ ,ಹಂಬಲ,ತನ್ಮಯತೆ...!ಇಷ್ಟು ಸಾಕಲ್ವ! ಯಾಕೋ ಅಂದು ಆ ಪದ ಓದಿದಾಗ ನನ್ನ ಮನದಲ್ಲಿ ಇವೆಲ್ಲ ಸುಳಿದಾಡಿತು.

No comments:

Post a Comment