Friday, October 22, 2010

ಪುಟ್ಟ ಸಂತೋಷ :-)

ನಿಮಗೆ ಖಿನ್ನತೆ ಕಾಡೋ ದಿಲ್ವೆ  ? ಪ್ರಶ್ನೆ ಎಸೆದಿದ್ರು ಆತ್ಮೀಯ ಗೆಳೆಯರೊಬ್ಬರು. ಸಂತಸ ಸಂಕಟ ಬದುಕಿನ ಎರಡು ಮುಖ,ಅದು ಯಾವ ರೀತಿಯಲ್ಲಿ ಬೇಕಾದರೂ ಪ್ರಕಟ ಆಗ ಬಹುದು.ಖಿನ್ನತೆಯ ಮಟ್ಟದಲ್ಲಿ ಅಲ್ಪ ಲೋಪ ಇರ ಬಹುದೇನೋ ಗೊತ್ತಿಲ್ಲ ಆದರೆ ಖಿನ್ನತೆಯ ಪ್ರಭಾವ ಬದುಕಿರುವ ಎಲ್ಲಾ ಜೀವ ಕೋಟಿ  ಮೇಲೂ  ಇದ್ದೆ ಇರುತ್ತದೆ. ಖಿನ್ನತೆಯನ್ನು ದೂರ ಮಾಡಿಕೊಳ್ಳಲು ಮುಖ್ಯವಾಗಿ ನಾವು ಸತ್ಯವನ್ನು ಒಪ್ಪಿ ಕೊಳ್ಳ ಬೇಕು. ನಮ್ಮ ಬದುಕಿಗೆ ಅಂಟಿಕೊಂಡಿರುವ, ನಮ್ಮದಾಗಿರುವ ಕೆಲವು ರಹಸ್ಯಗಳನ್ನು ನಮ್ಮ  ಆತ್ಮ ಸಾಕ್ಷಿಯ ಮುಂದೆ ಇಟ್ಟು , ಹೌದಲ್ವ , ಇಲ್ಲ ಹೀಗಲ್ವ ಎನ್ನುವ ಪ್ರಶ್ನೆಗಳನ್ನು ಹಾಕಿಕೊಂಡು ಮಾತನಾಡಿದಾಗ ಮಾತ್ರ ಖಿನ್ನತೆಯ ದುಷ್ಟ ಸುಳಿಯಿಂದ ಹೊರ ಬರಬಹುದು. ಅದು ಎಂದಿಗೂ ಸಾಧ್ಯ ಇಲ್ಲದ ಮಾತು. 
ವರ್ಷಾನುಗಟ್ಟಲೆ ಪ್ರೀತಿಸಿ ಮೋಸ ಮಾಡಿ ನಾನು ಮಾಡಿದ್ದೆ ಸರಿ ಎನ್ನುವವರು, ಎಷ್ಟೇ ಪ್ರೀತಿ ಪ್ರೇಮ, ಜೀವನದ ಸತ್ಯ ದರ್ಶನದ ಬಗ್ಗೆ  ಬರೆದರೂ  ಪ್ರತಿದಿನ ರಾತ್ರಿ ಮುದರಿ ಮಲಗುತ್ತಾರೆ. ಆರಂಭಿಕ ಹಂತದಲ್ಲಿ  ಅವರಿಗೆ ಅಂತಹ ಯಾವುದೇ ಸಂಗತಿ ಕಾಡದೆ ಇರಬಹುದು ಆದ್ರೆ ಕಾಡುವ ನೆನಪುಗಳು ಸದಾ ಎಲ್ಲೋ ಕುಳಿತೆ ಇರುತ್ತದೆ.
ಮಾತೆತ್ತಿದರೆ ಕೆಲವರು ಧರ್ಮ ಆಚಾರ,ಒಳ್ಳೆಯತನ ಎಂದು ಹೇಳ್ತಾನೆ ಇರ್ತಾರೆ. ನನಗೆ ಬೇಜಾರಾಗೋದು ಅವರು ಹಾಗೆ ಹೇಳುವುದರಿಂದ ಅಲ್ಲ ಅವರ ಬಗ್ಗೆ ಸಮಾಜದ ಬಹುಪಾಲು ಜನರು ಬೇರೆಯದೇ ವಿಷಯ ಹೇಳಿದಾಗ. ಆ ಮೂಲಕ ಎಲ್ಲೋ ಮನುಷ್ಯ ,ಮನಸ್ಸು, ಬಾಂಧವ್ಯ ಅಂದ್ರೆ ಇಷ್ಟೇನಾ ಎನ್ನುವ ಪ್ರಶ್ನೆ ಕಾಡುತ್ತೆ. 
ಕೆಲವರಂತೂ ತಿಳಿದಷ್ಟು ಸರಳವಲ್ಲ  ಅನ್ನುವ ಸಂಗತಿ ನನಗೆ   ಭಯಂಕರ ಆಶ್ಚರ್ಯ  ಹುಟ್ಟಿಸುತ್ತೆ.ಅಂತಹ  ಸತ್ಯ ಗೊತ್ತಾದಾಗ  ನನ್ನಲ್ಲಿ ಖಿನ್ನತೆ ಉಂಟಾಗುತ್ತದೆ.ಸಿಕ್ಕಾಪಟ್ಟೆ ಭಯ ಆಗುತ್ತೆ ! ಜೀವದ್ದಲ್ಲ, ಜೀವಗಳ ಸೋಗಲಾಡಿ ವೈಖರಿಗೆ ಅಷ್ಟೆ ! 
ಅಷ್ಟು ದಿನಗಳಿಂದ ಫ್ಯಾನ್ ಆಗಿದ್ದವಳಿಗೆ ಆ  ವ್ಯಕ್ತಿಯು ಮರ್ಯಾದೆಗೆ ಲಾಯಕ್ಕೆ ಇಲ್ಲ ಎಂದು ಗೊತ್ತಾದಾಗ ದುಃಖ ಉಕ್ಕುತ್ತೆ. ನನಗೆ ಯಾರೂ ಸ್ನೇಹಿತರಿಲ್ಲ, ನನಗೆ ಯಾರ ನೆನಪು ಇರಲ್ಲ ಎಂದು ಸುಳ್ಳು ಮಾತುಗಳನ್ನು ಹೇಳುವವರ ಬಗ್ಗೆ  ಯಾವ ರೀತಿ ಪ್ರತಿಕ್ರಿಯಿಸ ಬೇಕು ತಿಳಿಯದ ಸ್ಥಿತಿ ! ಇವೆಲ್ಲವೂ ನೆನಪಿಗೆ ಬಂದ್ರೆ ಖಿನ್ನತೆ ಉಂಟಾಗುತ್ತದೆ. ಆದರೆ ಅದು ಹೆಚ್ಚು ಪ್ರಭಾವ ಬೀರಲು ನಾನು ಅವಕಾಶ ಕೊಡೋದೇ ಇಲ್ಲ , ಅದರ ಬಾಲ ಕತ್ತರಿಸಿ ಬಿಸಾಡ್ತೀನಿ. ದುಃಖ ಇರುವ ಕಡೆಯಲ್ಲೂ ಎಲ್ಲೋ ಒಂದು ಪುಟ್ಟ ಸಂತೋಷ ಅಡಗಿ ಕೂತಿರುತ್ತೆ, ಅದನ್ನು ಎಳೆದು ಅದರ ಸ್ನೇಹ ಮಾಡಿ ಕೊಳ್ತೀನಿ ,ಆಗ ನನ್ನ ಗಮನ ಅದರತ್ತ ತಿರುಗುತ್ತದೆ. ಆಗ ಅದರ ವಿಸ್ತಾರ ಹೆಚ್ಚು ಮಾಡಿ ಕೊಳ್ತೀನಿ, ಆಗ ಖಿನ್ನತೆ ನಿಶ್ಶಕ್ತ ವಾಗುತ್ತಾ ಬರುತ್ತದೆ. ಆ ಸಣ್ಣ  ಪ್ರಾಂಜಲ ಸಂತೋಷ  prabala ಆಗ್ತಾ ಹೋಗುತ್ತೆ... ಹೀಗೆ ಬದುಕನ್ನು ನನಗಿಷ್ಟ ಬಂದಂತೆ ಬದಲಾಯಿಸಿ ಕೊಳ್ಳಲು ಸದಾ ಪ್ರಯತ್ನಿಸುತ್ತೇನೆ. ಸದಾ ಆ ಕೆಲಸದಲ್ಲಿ ನಿರತ ಆಗಿರುವುದರಿಂದ ಖಿನ್ನತೆ ಉಹುಂ :-)

Sunday, February 14, 2010

ಸೊ ವಾಟ್ ??

ಮೊಟ್ಟಮೊದಲ  ಬಾರಿ  ನನಗೆ  ಅಂತಹದೊಂದು  ದಿನ  ಇದೇ  ಅಂತ  ಗೊತ್ತಾಗಿದ್ದೆ  ಆ  ಹುಡುಗಿಯಿಂದ.ಆಗ ನಾನು ಡಿಗ್ರಿ ಮೊದಲ ವರ್ಷದಲ್ಲಿದ್ದೆ.ಆ ಹುಡುಗಿ ಫಸ್ಟ್  ಪಿಯು.ಟುಮಾರೋ ವ್ಯಾಲೆಂಟೈನ್ಸ್ ಡೆ ಅಂದ್ಲು...ಅವಳು ಹೇಳಿದುದರಲ್ಲಿ ಅಂತಹ ವಿಶೇಷವೇನು ಕಾಣಲಿಲ್ಲ ನನಗೆ, ಸೊ ವಾಟ್ ?? ಅನ್ನುವ ಆಶ್ಚರ್ಯಭರಿತ ಧ್ವನಿಯಲ್ಲಿ ಹೇಳಿದೆ.ನನ್ನ ಮಂಕುತನ ಆ ಹುಡುಗಿಗೆ ನಗೆ ತಂದಿತ್ತು.ಕಾರಣ ಇಷ್ಟೆ ಪ್ರೇಮಿಗಳ ದಿನಕ್ಕೆ ನಾವು ಇಷ್ಟೆಲ್ಲಾ ಸಿದ್ಧ ಆಗ್ತಾ ಇದ್ದೀವಿ ನೀನು ನೋಡಿದ್ರೆ ಇಷ್ಟು ನೀರಸವಾಗಿ ಇದ್ದೀಯ ಅನ್ನುವ ಆಕ್ಷೇಪ ಕಣ್ಣಲ್ಲಿತ್ತು...ತಕ್ಷಣ ನಾನು ಸಾರಿ ಡಿಯರ್ ನನಗೆ ಇದರ ಬಗ್ಗೆ ಗೊತ್ತಿಲ್ಲ ಎಂದು ಅಂತ ನನ್ನ ಮಂಕುತನವನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡೆ. ಆಗ ವ್ಯಾಲೆಂಟೈನ್ಸ್ ಮಹನೀಯನ ಕಥೆಯನ್ನು ಸಿಕ್ಕಾಪಟ್ಟೆ ಹೇಳಿ ತಾನು ತನ್ನ ಹುಡುಗನ ಜೊತೆ ಆ ಹಬ್ಬವನ್ನು ಎಲ್ಲಿ,ಹೇಗೆ? :-) ಆಚರ್ಸ್ತೀನಿ ಅಂತ ಹೇಳಿ ಸಂಭ್ರಮ ಪಟ್ಟಿದ್ದಳು.ಆಮೇಲೆ ಮರ್ತೆ ಹೋಯ್ತು ನನಗೆ.ಎರಡು ದಿನ ಆದ ಬಳಿಕ ಆ ಹುಡುಗಿ ನನಗೆ ಸಿಕ್ಕಿದ್ದಳು ಆಗ ಆ ವ್ಯಾಲೆಂಟೈನ್ಸ್ ವಿಷಯ ಜ್ಞಾಪಕಕ್ಕೆ ಬಂದು ಏನಾಯ್ತು ಅಂತ ಕೇಳಿದೆ.ಆ ಹುಡುಗಿ ಮಾತು ಮರೆಸಲು ನೋಡಿದಳು,ಆದ್ರೆ ನಾನು ಬಿಡಲಿಲ್ಲ.. ಅಷ್ಟು ತಲೆ ತಿನ್ನಿಸಿಕೊಂಡಿದ್ದಕ್ಕೆ ಕೋಪ ತೀರಿಸಿ ಕೊಳ್ಳಬೇಕಾಗಿತ್ತು.. ಪದೇಪದೆ ಕೇಳಿದೆ..ಅಂದು ಅವಳು ಹಾಗೂ ಅವಳ ಬಾಯ್ ಫ್ರೆಂಡ್ ಚಪ್ ಚಪ್ಲಿಯಲ್ಲಿ ಹೊಡೆದು ಕೊಂಡಿದ್ದರಂತೆ ..ಆ ಹುಡುಗಿಯ ಕಥೆ ಕೇಳಿದ ಬಳಿಕ ಪಾಪವೇ ಎಂದು ಅನ್ನಿಸಿತ್ತು.. ಇದೆ ದಿನದ ಬಗ್ಗೆ ಹೇಳುವುದಾದರೆ ನನಗೊಂದು ವಿಷ್ಯ ಮರೆಯೋಕೆ ಆಗಿಲ್ಲ..ನನ್ ಫ್ರೆಂಡ್ ಮುಸ್ಲಿಂ ಹೆಣ್ಣುಮಗಳು.ಅವಳ ಬಾಯ್ ಫ್ರೆಂಡ್ ಸಹ  ಅದೇ ಧರ್ಮ..ಸದಾ ಅವನ ಬಗ್ಗೆ ಹೇಳ್ತಾನೆ ಇರೋಳು..ಬೇಗ  ನಿಖಾ ಮಾಡಿಕೊಳ್ತೀವಿ ಕಣೆ..ಅನ್ನುವ ಮಾತು ಸದಾ..( ತುಂಬಾ ದೊಡ್ಡ ಕಥೆ ಹೇಳಲಾಗದೆ  ಇರುವಷ್ಟು ) ಆದ್ರೆ ಒಂದು ದಿನ ಕ್ಯಾಂಪಸ್ ಬಸ್ ನಲ್ಲಿ ಸಿಕ್ಕಾಪಟ್ಟೆ ಅಳ್ತಾ ಇದ್ಲು ..ಆತ ಫ್ರೆಂಡ್ಸ್ ಬಳಿ ಜಾಲೆಂಜ್ ಮಾಡಿ ಸಿನಿಮೀಯ ರೀತಿಯಲ್ಲಿ ಪ್ರೀತಿಸಿದ್ದ ಅಷ್ಟೆ ಅವನಿಗೆ  ಚಾಲೆಂಜ್ ಗೆಲ್ಲುವುದು ಬೇಕಾಗಿತ್ತು,ಗೆದ್ದ ಬಳಿಕ ಆತ ತನ್ನ ಹಳೆಯ ಗರ್ಲ್ ಫ್ರೆಂಡ್ ಜೊತೆ....! ಕನಸುಗಳು ಕಟ್ಟಿಕೊಂಡಿತ್ತು ಹುಡುಗಿ...! ಮುರಿದ ಕನಸುಗಳನ್ನು ಮುಂದೆ ಇಟ್ಟು ಬದುಕುವುದಿದೆಯಲ್ಲ ಅದರಷ್ಟು ದುಸ್ಸಾಹಸ ಮತ್ತೊಂದಿಲ್ಲ..! ಆ ಗೆಳತಿ ಬದುಕಲ್ಲಿ ಮನೆಯವರಿಂದ ,ನೆಂಟರಿಷ್ಟರಿಂದ ನಿರ್ಲಕ್ಷಕ್ಕೆ ಒಳಗಾಗಿದ್ದಳು..ಈತ ಬದುಕಿನ ತಂಗಾಳಿಯಾಗ್ತಾನೆ ಅಂಥ ತಿಳಿದಿದ್ದಳು...! ಇನ್ನು ನನ್ನ ಗೆಳೆಯರು ಹೃದಯವನ್ನು ಮುರಿಸಿಕೊಂಡು ಬಿಕ್ಕಳಿಸೋದು ಕಂಡು ಪೆಚ್ಚಾಗಿ ಕೂತು ಬಿಟ್ಟಿರ್ತಾ ಇದ್ದೆ...ಈ ಪ್ರೇಮದ ಹಬ್ಬಕ್ಕೆ ಜನಗಳು ಗಲಾಟೆ ಮಾಡುವುದು ಕಂಡಾಗ ಪ್ರತಿಬಾರಿಯೂ ನನಗೆ ನನ್ನ ಗೆಳಯ-ಗೆಳತಿಯರ ಪ್ರೇಮ ಕಥೆ ನೆನಪಾಗ್ತಾನೆ ಇರುತ್ತೆ ...ಅದೆಂದಿಗೂ ಮರೆಯದ ಅಧ್ಯಾಯ  ಅಂಥ ಕಾಣುತ್ತೆ... ಈಗ ಅದೇ ವಿಷಯವನ್ನೇ ಮುಂದಿಟ್ಟು ಕೊಂಡು ಗಲಾಟೆ ಗದ್ದಲ ..ಒಟ್ಟಾರೆ ಕೆಲವು ಅನಗತ್ಯ ವಿಷಯಕ್ಕೆ ಹೇಗೆ ಬಿಟ್ಟಿ ಪ್ರಚಾರ ಸಿಗುತ್ತೆ ಅನ್ನುವುದಕ್ಕೆ ಪ್ರಮೋದ್  ಮುತಾಲಿಕ್ ಕಿರುಚಾಟವೇ ಸಾಕ್ಷಿ...!

Monday, January 25, 2010

ನೆನಪು


ಕಳೆದವಾರ  ಮೂರ್ನಾಲ್ಕು ದಿನ ಶಿರಡಿಗೆ ಹೋಗಿದ್ದೆ.ನಾನು ಅತಿಯಾಗಿ ನಂಬುವ ಗುರುಗಳು ಶಿರಡಿ ಸಾಯಿ ಬಾಬಾ . ನಮ್ಮ ಮನೆಯಲ್ಲಿ ಕಳೆದ ಎಂಬತ್ತು ವರ್ಷಗಳಿಂದ ಈ ಗುರುಗಳನ್ನು ನಂಬುತ್ತ  ಬಂದಿದ್ದೇವೆ.ನಮ್ಮ ತಾತ ಬಾಬಾ  ಭಜನೆಯನ್ನು ತಪ್ಪದೆ ಪ್ರತಿಗುರುವಾರ ಸಂಜೆ ಮಾಡುವ ಪರಿಪಾಟ ಇಟ್ಟುಕೊಂಡಿದ್ದರು ನಮ್ಮ ಊರಲ್ಲಿ ,ನಮ್ಮನೆಯಲ್ಲಿ ನಾವೆಲ್ಲರೂ ಬಾಬಾ  ಅವರನ್ನು ಪ್ರೀತಿಯಿಂದ ನಂಬಿದ್ದೇವೆ.ಎಲ್ಲ ಯಾತ್ರಾ ಸ್ಥಳಗಳಂತೆ ಇದು ಒಂದು,ಆದ್ರೆ ಇಲ್ಲಿ ಭಿಕ್ಷುಕರ ಹಾವಳಿ ಮತ್ತು ನಾಯಿಗಳ ಒಡನಾಟ.ಎಷ್ಟೊಂದು ಗುಲಾಬಿ  ಹೂವುಗಳು  ಎಲ್ಲಿ  ಬೆಳೀತಾರೊ ?,ಅಂತೂ ಎಲ್ಲ ಕಡೆ ಈ ಹೂವಿನ ಗುಚ್ಛ ಮಾರುವ ಯುವಕರು,ಮಕ್ಕಳು....! ಆದರೆ ನನಗೆ ಇಲ್ಲಿ ಒಂದು ಅಂಶ ಹೆಚ್ಚು ಗಮನ ಸೆಳೆಯಿತು.ಶಿರಡಿಗೆ ಬಂದ ಭಕ್ತರಲ್ಲಿ ಶೇ.ಒಂದರಷ್ಟು ಮೆ೦ಟಲಿ  ಚಾಲೆಂಜ್ದ್ . ಅದರಲ್ಲೂ ಹೆಚ್ಚಿನ ಪಾಲು ಮಕ್ಕಳು. ತಾಯಿ ತಂದೆಯರು ಬಾಬಾ ದರ್ಶನಕ್ಕೆ  ಈ ಕಂದಮ್ಮಗಳು! ನಾನು ನನ್ನ ಅಮ್ಮ ಹೀಗೆ ಒಂದು ಕಡೆ ನಿಂತಿದ್ದಾಗ ಹದಿನಾಲ್ಕು ವರ್ಷದ ಒಂದು  ಮಗು ಕೈ ನನ್ನ ತಾಯಿ ಕೈಗೆ ತಗುಲಿತು.ಆ ಹುಡುಗ ಬೃಹದ್ದೇಹಿ! ನಾನು ಅಮ್ಮನ ಬಳಿ ಏನಾಯಿತು ಅಂದೇ,ಆ ಮಗು ಪೆಚ್ಚಾಗಿ ತನ್ನ ಕೈ ತಗುಲಿತು ಅಂತ ಹೇಳಿತು. ತಕ್ಷಣ ಆ ಮಗುವಿನ ತಾಯಿತಂದೆ ಸಾರಿ ಕೇಳಿದರು.ನನ್ನ  ಅಮ್ಮ ಜಾನೆದೋ ಬೇಟ ಪರವಾ ನಹಿ ! ಅಂತ ಆ ಮಗುವಿನ ತಲೆ ಸವರಿದರು.
 ಮೆ೦ಟಲಿ ಚಾಲೆಂಜ್ದ್  ಮಕ್ಕಳ ಬಗ್ಗೆಯೂ ನನ್ನ ಅಮ್ಮನಿಗೆ ಅಪಾರವಾದ ಪ್ರೀತಿ.ನನ್ನ ಸೋದರ ಮಾವನ ಮಗಳು ಕುಸುಮ. ಅವಳು ಸಹ ಹೀಗೆ ಹುಟ್ಟಿದ್ದು.ಅವಳಿಗೆ ಅಮ್ಮನ ಮೇಲೆ ಅಪಾರವಾದ ಪ್ರೀತಿ . ಅಟ್ಟತ್ತೆ ,ಎಂಕವ್ವ ,ಜೇಶಿ..ಸದಾ ಹೇಳ್ತಾ ಇದ್ದ ಹೆಸರುಗಳು.ರಜೆಯಲ್ಲಿ ಊರಿಗೆ ಹೋದಾಗ ಕುಸುಮಳನ್ನು ಕರೆದುಕೊಂಡು ಇಡೀ ಊರು ಓಡಾಡಿಸ್ತಾ ಇದ್ದೆ. ಬೆಂಗಳೂರಿಗೆ ಅವಳು ಬಂದಾಗಲು ತುಂಬಾ ಪ್ರೀತಿಯಿಂದ ಕರೆದುಕೊಂಡು ಓಡಾಡಿಸ್ತಾ ಇದ್ದೆ. ನಾನು ಅವಳಿಗಿಂತ ತುಂಬಾ ಚಿಕ್ಕವಳು , ಆದರೆ ನನ್ನ ಗೆಳತಿ ಅವಳು.ನಮ್ಮ ಅತ್ತೆ-ಮಾವ ,ಅಮ್ಮ , ನನ್ನವ್ವ  (ಅಜ್ಜಿಯನ್ನು ನಾವು ಅಜ್ಜಿ ಅಂತ  ಕರೆಯಲ್ಲ ಅವ್ವ ಅನ್ನೋದು), ನಾನು ಎಲ್ಲರು ಅವಳ ಬಗ್ಗೆ ಕಾಳಜಿ  ಇಟ್ಟಿದ್ದೆವು.ಯಾಕೋ ನಮ ಮಾವ ಅವಳನ್ನು ಶಾಲೆಗೇ ಕಳಿಸಲಿಲ್ಲ. ಊರಲ್ಲಿ  ಯಾರಾದರು ಅವಳನ್ನು ಬೈದರೆ  ಮನೆಗೆ ಬಂದು ಗೋಡೆಯ ಮುಂದೆ ನಿಂತು ಬೈತಾ ಇರೋಳು.ಅವಳ ಈ ಚರ್ಯೆಗಳನ್ನು ನಾನು ತುಂಬಾ ಹತ್ತಿರದಿಂದ ಕಂಡಿದ್ದೆ.ಕಾಲ ಯಾವುದನ್ನು ತಡಿಯಲ್ಲ.ಆದರೆ ಪ್ರಕೃತಿ ತನ್ನ ಕೆಲಸ ಮಾಡುತ್ತಲೇ ಇರುತ್ತದೆ.ಕುಸುಮ ಸಹ ಹೆಣ್ಣಾಗುವ  ಕಾಲ ಹತ್ತಿರ ಬಂದಿತ್ತು.ಆದರೆ.... ಒಂದು  ದಿನ ಕುಸುಮ ಸತ್ತು ಹೋದಳು...! ಬೆಳೆದರೆ ಮಗಳ ಗತಿಯೇನು ಅವಳನ್ನು ರಕ್ಷಿಸುವುದು ಹೇಗೆ ಎನ್ನುವ ಚಿಂತೆಯನ್ನು ದೂರಮಾಡಿ ನಮ್ಮ ಕುಸುಮ ಹೊರಟೆ ಹೋದಳು...! ಶಿರಡಿಯಲ್ಲಿ ಅದ್ಯಾಕೋ ತುಂಬಾ ವರ್ಷಗಳ ನಂತರ ಕುಸುಮ ತುಂಬಾ ನೆನಪಾದಳು.

Tuesday, January 5, 2010

ಔಟ್ ಡೆಟೆಡ್!

ಆಕೆಯ ಧ್ವನಿಯಲ್ಲಿ  ಮುಜುಗರ ಎದ್ದು ಕಾಣ್ತಾ ಇತ್ತು. ನಾನು ನನ್ನ ಶಾಲಾ ದಿನಗಳಲ್ಲಿ ನನ್ನ ಕಸಿನ್ ಒಬ್ಬಳ ಧ್ವನಿಯಲ್ಲೂ ಇಂತಹುದೇ ಮುಜುಗರ ಕಂಡಿದ್ದೆ.ಅಮ್ಮನ ಅಣ್ಣನ ಮಗಳು,ಸಾಮಾನ್ಯವಾಗಿ ನನ್ನಮ್ಮನನ್ನು ಎಲ್ಲರೂ  ಲಲ್ತಕ್ಕ ಅಂತಲೇ ಕರೆಯೋದು.ಅದೊಂದು ಪದ್ಧತಿ ಮೊದಲಿನಿಂದಲೂ ಜಾರಿಯಲ್ಲಿದೆ.ಏನೆ ಹೇಳ ಬೇಕಾದರೂ ಅಮನ ಬಳಿ ಹೇಳಿ ಹಗುರಾಗ್ತಾರೆ ಹೆಣ್ಣುಮಕ್ಕಳು.ಊರಿನಲ್ಲಿ ಒಬ್ಬ ಅವಿವಾಹಿತ ಹೆಣ್ಣುಮಗಳು ತನಗಿಂತ ಹನ್ನೆರಡು ಹದಿನೈದು ವರ್ಷದಷ್ಟು ಕಿರಿಯ ಹೆಣ್ಣುಮಗಳ ಬಳಿ  ನಾನು ಒಂದು ಮಗುವನ್ನು ಹೆತ್ತುಬಿಡೋಣ  ಅಂತ ಇದ್ದೀನಿ ಕಣೆ  ನಿನ್ನ ಅಭಿಪ್ರಾಯ ಏನು ಅನ್ನುವ ಪ್ರಶ್ನೆ ಹಾಕಿದ್ದಳು.ಆ ಮಾತಿನಿಂದ ನನ್ನ ಕಸಿನ್ ತುಂಬಾ ಮುಜುಗರಕ್ಕೆ ಒಳಗಾಗಿದ್ದಳು,ಮದುವೆಗೆ ಮುನ್ನ ಮಗು ಹೆರುವ  ಕಾನ್ಸೆಪ್ಟ್ ನಾವು ಪುರಾಣಗಳಲ್ಲಿ ಮಾತ್ರ ಓದುವ ಮನಸ್ಸು ಹೊಂದಿದ್ದೆವು,ಆದರೆ ಅದನ್ನು ದೇವರಾಣೆ ಎದುರು ಕಂಡ್ರೆ ಈ ಕ್ಷಣವೂ ಬೆಚ್ಚಿ ಬೀಳ್ತೀವಿ.ಸಾಕಷ್ಟು ವಿಷಯಗಳಲ್ಲಿ ವಿಶಾಲವಾಗಿ ಯೋಚಿಸುವ  ಗುಣ ನನ್ನದು,ಆದರು ನಾನು  ಬೆಲೆ ಕೊಡುವುದು  ಮದುವೆ,ಗಂಡ,ಸುರಕ್ಷಿತ ಸಂಸಾರ ...! ಪ್ರಾಯಶ: ನಾನು ತುಂಬು ಕುಟುಂಬದಲ್ಲಿ ಬೆಳೆದಿರುವುದು ಇದಕ್ಕೆ  ಕಾರಣ ಇರ ಬಹುದು.ನನ್ನದು ಸಂಪೂರ್ಣ ಸಾಮಾನ್ಯ ಮಿಡಲ್ ಕ್ಲಾಸ್ ಮೆಂಟಾಲಿಟಿ. ಆ ಗುಣ ಬಿಟ್ಟು ಹೊರಗೆ ಬರೋಕೆ ನನಗೆ ಖಂಡಿತ ಇಷ್ಟ ಇಲ್ಲ.

ಇತ್ತೀಚೆಗೆ  ಹಿರಿಯ ಪತ್ರಕರ್ತೆಯೊಬ್ಬರ ಜೊತೆ ಹರಟುತ್ತಾ  ಇದ್ದೆ.ಆಕೆ ತುಂಬು ಕುಟುಂಬದಿಂದ ಬಂದವರು.ಅಣ್ಣಂದಿರು-ಅಕ್ಕಂದಿರು,ಅಪಾರ ಬಂಧು-ಬಳಗ! ತಮ್ಮ ಮಗನ ಮೇಲೆ ಅಪಾರ ಪ್ರೀತಿ. ಆಗಾಗ ಅವರು ತಮ್ಮ ವೃತ್ತಿ ಬದುಕಿನ ಸಹೋದ್ಯೋಗಿಗಳ ಬಗ್ಗೆ ಹೇಳ್ತಾ ಇರ್ತಾರೆ.ಮಾತಿನ ನಡುವೆ ಪತ್ರಕರ್ತೆಯ ಬಗ್ಗೆ ಬಂತು,ಒಂದು ಅಕ್ಷರ ಬರೆಯೋಕೆ ಬರಲ್ಲ,ಆದರೆ ಹೆಸರು ಮಾತ್ರ ಇರುತ್ತೆ,ಇದೆ ಈ ಫೀಲ್ಡ್ನ ದುರಂತ ಅಂತ ಹೇಳ್ತಾ ಇದ್ರು,ಆಗ ಮಾತಿನ ಮಧ್ಯದಲ್ಲಿ ಅವರಹಿಂದಿನ ಸಹೋದ್ಯೋಗಿ ಒಬ್ಬರ ಬಗ್ಗೆ ಹೇಳೋಕೆ ಶುರು ಮಾಡಿದರು,ಅವಳ ಬಗ್ಗೆಹೇಳು ವಾಗ ಈಕೆಯ ಧ್ವನಿಯಲ್ಲಿ ಮುಜುಗರ ಎದ್ದು ಕಾಣ್ತಾ ಇತ್ತು,ನೋಡೆಮಾ ! --------- ಮಗುವನ್ನು ಹೆತ್ತು ಬಿಡ ಬೇಕಿತ್ತು ಅಂತ ಹೇಳ್ತಾ ಇದ್ದಾಳೆ.ತುಂಬಾ ಕಿರಿಕಿರಿ ಆಯ್ತು ಅವಳ ಮಾತು ಕೇಳಿ ಅಂದ್ರು.ನಾನು ಹೌದ ಯಾಕೆ ಹಾಗಂದ್ರು ಎಂದು ಕೇಳಿದೆ..ಆಗ ಇವರು ಅವಳ ಹಳೆಯ ಕಥೆಯನ್ನು ಸ್ವಲ್ಪ ಹೇಳಿ ನೋಡು ಒಂದಕ್ಷರ ಬರಿಯೋಕೆ ಬರಲ್ಲ ಆದರೆ ಆ ಪತ್ರಿಕೆಯ ಸಂಪಾದಕ ತಾನು ಬರೆದು ಇವಳ ಹೆಸರು ಹಾಕೋರು ಅಂದ್ರು. ತುಸು ಆಶ್ಚರ್ಯ ನನಗೆ, ಯಾಕೆ ಮ್ಯಾಮ್ ಅವರು ಹಾಗೆ ಮಾಡ್ತಾ ಇದ್ರು ಅಂದ್ರೆ,ಅವರ ಜೊತೆಯಲ್ಲಿ ಎಲ್ಲ ಹಂಚಿಕೊಂಡು ಇದ್ಲಲ್ಲ ಅದರ ಋಣ ತೀರಿಸೋಕೆ ಕಣೆ ! ತುಂಬಾ ಮುಜುಗರ ಆಯ್ತು ನನಗೆ.ಲಿವಿಂಗ್ ಟುಗೆದರ್ ಅಂತ ಹೇಳ್ತಾರಲ್ಲ,ಯಾಕೋ ನನಗೆ ಅದರ ಬಗ್ಗೆ ಯೋಚಿಸೋಕು ಇಷ್ಟ ಇಲ್ಲ.ಪ್ರಾಯಶ: ನಾನು ಔಟ್ ಡೆಟೆಡ್ ಮನಸ್ತತ್ವ ಹೊಂದಿರುವವಳು .ತಾಳಿ  ಕಟ್ಟಬೇಕಿಲ್ಲ,ಮನಸ್ಸುಗಳು ಬೆರೆತರೆ ಸಾಕು,ಇರುವಷ್ಟು ದಿನ ಇದ್ದು ಬೇಜಾರಾದರೆ ಮತ್ತೊಬ್ಬ ಸಂಗಾತಿಯನ್ನು  ಹುಡುಕಿ ಆಯ್ಕೆ ಮಾಡಿಕೊಳ್ಳುವುದು  ಇವೆಲ್ಲ ನನ್ನ ಬುದ್ಧಿ- ಮನಸ್ಸಿಗೆ ದೂರ.ನನ್ನ ಬದುಕಲ್ಲೂ ಇಂತಹ ಅನೇಕ ಮಂದಿ ಎದುರಾಗಿದ್ದಾರೆ ,ಇರುವಷ್ಟು ದಿನ ಮಜವಾಗಿ ಇರಬೇಕು ಅನ್ನುವ ವೇದಾಂತಿಗಳನ್ನು  ನಾನು ಕಂಡಿದ್ದೇನೆ,ಅವರ ಬುದ್ಧಿ ಮಾತು ಕೇಳಿದ್ದೇನೆ.ಆದರೆ ನನಗೆ ಒಂದು ಸರ್ತಿಯೂ ಇಂತಹ ಲೈಫ್ ಸ್ಟೈಲ್  ಆಸಕ್ತಿ ಹುಟ್ಟಿಸಿಲ್ಲ ,ಒಂದರ್ಥದಲ್ಲಿ ಅದನ್ನು ನೆನಪಿಸಿಕೊಂಡ್ರೆ ಜಿಗುಪ್ಸೆ ಆಗುತ್ತೆ ನನಗೆ!