Wednesday, September 23, 2009

ಸತ್ಯ ಒಪ್ಪಿಕೊಳ್ತೇನೆ!

ನೀವು ಎಂತಹ ಸಂದರ್ಭದಲ್ಲೂ ಕೋಪ ಮಾಡಿಕೊಳ್ಳುವುದಿಲ್ಲ ,ಕೆಲಸದಲ್ಲಿ ಒತ್ತಡ ಹೊಂದಿರುವುದಿಲ್ಲ,ಸಿಕ್ಕಾಪಟ್ಟೆ ಬೇಸರ ಆಗಿದ್ರು ಅದನ್ನು ಬೇರೆಯವರ ಮೇಲೆ ತೋರಿಸೊಲ್ಲ ನಿಮ್ಮ ಈ ಗುಣ ನನಗೆ ತುಂಬಾ ಇಷ್ಟ ಆಗುತ್ತದೆ ಅಂತ ಗೆಳತಿ ಒಬ್ಬಳು ಹೇಳಿದಳು.ನಾನು ಮಾತನಾಡಲಿಲ್ಲ.ನಾನ್ ನೋಡಿ ಯಾವುದೋ ಕೋಪ ಯಾರ ಮೇಲೋ ಹಾಕಿ ನನ್ನ ಮನಸ್ಸನ್ನು ಸರಿ ಮಾಡಿಕೊಂಡು ಬಿಡ್ತೀನಿ,ಆದರೆ ನಿಮ್ ರೀತಿಯ ಗುಣ ಬೆಳೆಸಿಕೊಳ್ಳುವುದು ಅಂದ್ರೆ ಕಷ್ಟದ ಕೆಲಸ ಹೀಗೆ ಯಾಕೋ ಗೆಳತಿ ಮನಸ್ಸನ್ನು ಬಿಚ್ಚಿ ಮುಂದಿಟ್ಟಳು.ಏನು ಹೇಳಲು ತೋಚದೆ ಥ್ಯಾಂಕ್ಸ್ ಅಂತ ಹೇಳಿ ನಕ್ಕೆ.ನಾನು ಸಹನೆ ಹೊಂದಿದ್ದೇನೆ ಅಂತ ನೀವು ಹೇಳ್ತೀರಿ ಆದರೆ ತುಂಬಾ ಜನರು ನನಗೆ ಸಹನೆ ಕಡಿಮೆ ಅಂತ ಹೇಳ್ತಾರೆ,ಹೋಗ್ಲಿ ಬಿಡಿ ಎರಡು ಅಭಿಪ್ರಾಯವನ್ನು ಸ್ವೀಕರಿಸಿ ಬಿಡ್ತೀನಿ ಅಂತ ಹೇಳಿದೆ. ಅದಕ್ಕವಳು ಇಲ್ಲ ಜಯ್ ನಿಮ್ಮನ್ನು ಕಳೆದ ನಾಲ್ಕು ವರ್ಷಗಳಿಂದ ಕಂಡಿದ್ದೇನೆ,ಆದರೆ ಎಂದಿಗೂ ಕೆಲಸದ ವಿಷಯದಲ್ಲಿ ಲೋಪ ಮಾಡಿಲ್ಲ,ನೀವು ಎಂತಹ ಸಂದರ್ಭದಲ್ಲೂ ಮುಖದಲ್ಲಿರುವ ನಗೆಯನ್ನು ಕಡಿಮೆ ಮಾಡಿಕೊಂಡಿಲ್ಲ ಅದರ ರಹಸ್ಯ ಏನು ಅಂತ ಒಂದೇ ಸಮನೆ ವರಾತ ಹಿಡಿದು ಬಿಟ್ರು .ನಿಜ ಹೇಳಲಾ ಗೆಳತಿ,ನಾನು ಸತ್ಯವನ್ನು ಒಪ್ಪಿಕೊಳ್ಳುವ ಗುಣ ಬೆಳೆಸಿಕೊಂಡಿದ್ದೇನೆ.ಅಂದರೆ ನನಗೆ ಸಂಬಂಧಪಟ್ಟ ಸತ್ಯ ಯಾವುದೇ ಆಗಿರಲಿ ಸ್ವೀಕರಿಸುತ್ತೇನೆ ಅದೆಷ್ಟೇ ಕಹಿ ಆಗಿದ್ರು.ಪ್ರಾಯಶ: ಆ ಅಂಶ ನನ್ನನ್ನು ಸದಾ ಸಮಚಿತ್ತ ಕಾಪಾಡಿಕೊಳ್ಳುವುದಕ್ಕೆ ಕಾರಣ ಆಗಿರಬಹುದು.ನನ್ನ ಗೆಲುವಿಗೆ ನಾನೆಷ್ಟು ಕಾರಣ ಆಗಿರ್ತೇನೋ,ಅದೇ ರೀತಿ ನನ್ನ ಸೋಲಿಗೂ ನಾನೇ ಕಾರಣ ಆಗಿರ್ತೀನಿ.ಕೆಲವು ಅಂಶಗಳಿಗೆ ಪರಿಹಾರ ಇಲ್ಲದಾಗ ಯೋಚಿಸಿ ಪ್ರಯೋಜನ ಇರುವುದಿಲ್ಲ.ನನ್ನ ಮನಸ್ಸು ಸದಾ ಹಸಿರಾಗಿ ಇರುವಂತೆ ನನಗೆ ನಾನು ಉತ್ತಮ ರೀತಿಯಲ್ಲಿ ಕೌನ್ಸಿಲಿಂಗ್ ಮಾಡಿಕೊಳ್ತೀನಿ.ನಮ್ಮ ಅಮ್ಮ ಒಂದು ವಿಷ್ಯ ಸದಾ ಹೇಳ್ತಾ ಇರ್ತಾರೆ,ನಿನಗೆ ಕೆಲಸದ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಇರಬಾರದು,ಯಾಕೆ ಗೊತ್ತ, ನಿನಗೆ ಎಷ್ಟೇ ಆಪ್ತರಾಗಿದ್ದರು ಅವರ ಮನೆಯಲ್ಲಿ ಅರ್ಧಗಂಟೆ ಹೆಚ್ಚು ಇರೋಕೆ ಸಾಧ್ಯಾನ? ಅವರಿಗೆ ನೀನೂ ಸಹಾಯ ಮಾಡಿರ ಬಹುದು ಆದರೆ ಅದನ್ನು ಅವರು ಬಹಳಷ್ಟು ಸಂದರ್ಭಗಳಲ್ಲಿ ಗುರುತಿಸಿ ಇರೋದಿಲ್ಲ .ನಿನಗೆ ಸಂದ ಬೇಕಾದ ಆದರವನ್ನು  ಮತ್ತೊಬ್ಬರು ಎಂಜಾಯ್ ಮಾಡ್ತಾ ಇರ್ತಾರೆ .ಅದು ಲೋಕ ನಿಯಮ,ಆದರೆ ನಿನ್ನ ದುಡಿಮೆ ಸ್ಥಳದಲ್ಲಿ ಹಾಗಲ್ಲ ಕೆಲಸ ಸಿಕ್ಕ ಕಡೆ ಅದರ ಮಾಲೀಕ-ಮುಖ್ಯಸ್ಥ ನೀನೂ ಪ್ರತಿದಿನ ಹೋದರು ಬೇಸರ ಮಾಡಿಕೊಳ್ಳುವುದಿಲ್ಲ,ನೀನೂ ಹೆಚ್ಚು ಸಮಯ ಕೆಲಸ ಮಾಡುತ್ತಾ ಅಲ್ಲೇ ಇದ್ದರೆ ಬೇಸರ ಹೊಂದದೆ ಮತ್ತೂ ಖುಷಿ ಪಡ್ತಾನೆ,ಅದೇ ರೀತಿ ನಿನಗೆ ತಪ್ಪದೆ ಪ್ರತಿ ತಿಂಗಳು ನಿನ್ನ ದುಡಿಮೆಗೆ ಪ್ರತಿಫಲ ಕೊಡ್ತಾನೆ ,ಇಲ್ಲಿ ಜಾಸ್ತಿ ಕಡಿಮೆ ಅನ್ನುವ ಅಂಶಕ್ಕೆ ಮಹತ್ವ ನೀಡಬಾರದು.ನೀನೂ ಕುಳಿತುಕೊಳ್ಳಲು ಸ್ಥಳ,ನಿನಗೊಂದು ಸ್ಥಾನ...ಹೀಗೆ...! ಎಲ್ಲವು ಸಿಕ್ಕಿರುತ್ತಲ್ಲ ಮಗಳೇ...ಆದ್ದರಿಂದ ಕೆಲಸವನ್ನು ಪ್ರೀತಿಸು,ನೀನಿರುವ ಸ್ಥಳದ ಬಗ್ಗೆ ಗೌರವ ಹೊಂದಿರು ಅಂತ ಹೇಳ್ತಾರೆ,ಇದು ನನ್ನ ಸೋಲಿನ ಸಂದರ್ಭದಲ್ಲಿ ನೆನಪಿಸಿಕೊಳ್ತೀನಿ.  ನನ್ನ ಹೃದಯಕ್ಕೆ ಅತಿ ಹೆಚ್ಚು ನೋವು ಆಗಲ್ಲ ಅಂತೇನೂ ಇಲ್ಲ ಡಿಯರ್,ಆಗ ನನ್ನ ಎಡಗೈ ಎತ್ತದೆ ಇರುವಷ್ಟು ನೋವಾಗುತ್ತದೆ.ಬಲಗೈ ಮೂಲಕ ಅದರ ನೋವು ಪರಿಹಾರ ಮಾಡಿಕೊಳ್ತೀನಿ.ನಿಮಗೆ ಗೊತ್ತಲ್ಲ ನಾನು ಲೆಫ್ಟಿ !!
ಆದರು ಕಳೆದ ವಾರ ದಿಂದ ಸಣ್ಣ ಡಿಪ್ರೆಶನ್ ನಲ್ಲಿ ಇದ್ದೇನೆ.ಹಿಂದಿನವಾರ ನನ್ನ ತಂದೆ ಅವರ ತಿಥಿ .ಹಲವು ವರ್ಷಗಳ ಹಿಂದೆ ನನ್ನಪ್ಪ ಅಪಘಾತದಲ್ಲಿ ಮರಣಿಸಿದರು.ಆ ಸಮಯದಲ್ಲಿ ಅವರ ಜೊತೆ ಅವರ ಗೆಳೆಯರೊಬ್ಬರು ಹೋಗಬೇಕಾಗಿತ್ತು,ಆದರೆ ಕಾರಣಾಂತರಗಳಿಂದ ಅವರು ನನ್ನ ಅಪ್ಪನ ಜೊತೆ ಹೋಗಲಿಲ್ಲವಂತೆ.ಅವರು ಬದುಕುಳಿದರು,ಆದರೆ ಕಳೆದವಾರ ಅದೂ ಇಷ್ಟು ವರ್ಷಗಳಾದ ಬಳಿಕ ನಮ್ಮ ತಂದೆ ಶ್ರಾದ್ಧದ ದಿನ ಅವರ ಸಾವು ಆಕ್ಸಿಡೆಂಟ್ನಲ್ಲಿ ಆಯಿತು,ಆದರೆ ಸತ್ತಿದ್ದು ಕರೆಂಟ್ ಶಾಕ್ನಿಂದ! ಮಳೆ ಬಿದ್ದಿತ್ತಲ್ಲ,ಮೊಮ್ಮಗನನ್ನು ಕರೆದುಕೊಂಡು ತೋಟಕ್ಕೆ ಹೋದರಂತೆ,ಅಲ್ಲಿ ಎಲೆಕ್ಟ್ರಿಕ್ ವೈರ್ ದಾರಿಗೆ ಅಡ್ಡವಾಗಿ ಬಿದ್ದಿತಂತೆ,ಅದನ್ನು ಅವರು ಕಾಲಲ್ಲಿ ಸರಿಸಿದ್ದಾರೆ,ಅಷ್ಟೆ ಅಜ್ಜ-ಮೊಮ್ಮಗ ಸ್ಪಾಟ್ ! ಅಲ್ಲಿಗೆ ಬಂದವರು ಅಪ್ಪನನ್ನು ಬಹಳ ಜ್ಞಾಪಿಸಿ ಕೊಂಡರಂತೆ. ಇಡಿ ದಿನ ತುಂಬಾ ದುಃಖ ಆಗಿತ್ತು,ಯಾರಿಗೂ ಹೇಳದೆ ದುಃಖಿಸಿದೆ,ನನ್ನ ಬೇಸರ ಅಲ್ವ ಎಂದು ಹೇಳಿದೆ ನಗುತ್ತಾ .ಗೆಳತಿ ಮೌನವಾಗಿ ಕೈ ಹಿಡಿದಳು.