Friday, December 4, 2009

ನಿತ್ಯ ಪ್ರಳಯ !


ಕಳೆದ ಕೆಲವು ದಿನಗಳಿಂದ ಒಂದೇ ಸಮನೆ ಅದು ಒಂದೇ ರೀತಿಯ ಮೇಲ್ ಹಾಗೂ ಮೆಸೇಜ್ಗಳು.ತಲೆಕೆಡುವಷ್ಟು,ಹಾಗಂತ ಯಾರ ಮೇಲು ಕೋಪ ಮಾಡಿಕೊಳ್ಳುವ ಹಾಗಿಲ್ಲ,ಕಾರಣ ಇಷ್ಟೆ ಅವರೆಲ್ಲರು ನನ್ನ ಆಪ್ತ ವಲಯ.ಹೋಗ್ಲಿ ಮನಕ್ಕೆ ಖುಷಿ ಕೊಡುವಂತಹ ಮೆಸೇಜ್ ಗಳ ಅದು ಅಲ್ಲ,ಇತ್ತೀಚೆಗೆ ಎಲ್ಲರ  ಮನದಲ್ಲಿ ಹೊಕ್ಕಿರುವುದು  ಪ್ರಳಯದ ಭೂತದ ಮೆಸೇಜ್ಗಳು.ಅಕಸ್ಮಾತ್ 1012  ಪ್ರಳಯದ ನಂತರ  ನಾವು ಸತ್ತು ಪುನರ್ಜನ್ಮ ಎತ್ತಿದರೆ ನೀನು ನನಗೆ ಏನಾಗ ಬಯಸುತ್ತಿಯ? ಆಪ್ಷನ್ಗಳು...ಸರಿ ಉತ್ತರ ಕೊಟ್ಟಾಗ ಕೆಲವರಿಗೆ ಇಷ್ಟ ಆಗ್ತಾ ಇತ್ತು,ಒಂದಷ್ಟು ಜನರು ಛೇ ಹೌದ ಅನ್ನುವ ಬೇಸರ ವ್ಯಕ್ತಪಡಿಸಿದ್ದರು.ವಿಜಯ ಕರ್ನಾಟಕದ ಹಾಸನದ ಸ್ಥಾನಿಕ  ಸಂಪಾದಕ ನನ್ನ  ಆತ್ಮೀಯ ಮಿತ್ರ ರಾಕೇಶ್ ಪೂಂಜಾ ಓದಿದ್ದು ಬರೆದದ್ದು ಸಾಕು ಇನ್ನೇನು ಪ್ರಳಯ ಆಗುತ್ತೆ,ಆಮೇಲೆ ಎಲ್ ಕೆಜಿಯಿಂದ ಓದೋದು ಇದ್ದೆ ಇದೆಯಲ್ಲ ಎನ್ನುವ ತುಂಟ ಮೆಸೇಜ್ ಕಳುಹಿಸಿದ್ದರು,ನಾನು ತಕ್ಷಣ ಆಯ್ತು ಮಹರಾಯರೇ ಒಂದೇ ಶಾಲೆ ಹಾಗೂ ಸೆಕ್ಷನ್ಗೆ ಸೇರೋಣ  ಮುಂದಿನ ಜನ್ಮದಲ್ಲಿ ಅಂತ  ಪ್ರತಿಯುತ್ತರ ಕಳುಹಿಸಿದ್ದೆ,ಮುಂದಿನ ಜನ್ಮದಲ್ಲೂ  ಪುನಃ ನಿಮ್ಮ ಕಾಟವೇ  ಅನ್ನುವಂತೆ ನಗುವಿನ ಚಿತ್ರ ಹಿಂಬಾಲಿಸಿತ್ತು.ವಿಜಯ ಕರ್ನಾಟಕ ಪತ್ರಿಕೆಯ ಲವಲವಿಕೆಯ ಪುಟ ವಿನ್ಯಾಸಕ ನನ್ನ ಮತ್ತೊಬ್ಬ ಆತ್ಮೀಯ ಗೆಳೆಯ ಸತೀಶ್ ಕುಮಾರ್  ಅಯ್ಯೋ ಭಗವಂತ ಎನ್ನುವ ಕೂಗಿನ ಉತ್ತರ ಕಳುಹಿಸಿದ್ದರು! ಛೇ  !! :)
ಪ್ರಳಯ ಅನ್ನುವ ಪದವೇ ನಮ್ಮಲ್ಲಿ ಆತಂಕ ತರುತ್ತೆ, ಯಾಕೆ ಯಾಕೆ ? ಕಾರಣ ನಿಜ ಹೇಳ ಬೇಕು ಅಂದ್ರೆ ಆ ಭಯ ಎಲ್ಲ ಕಳೆದು ಕೊಂಡು ಬಿಡ್ತೀವಿ ಅನ್ನುವ ಮೂಲ ಅಂಶದ ಅಡಿಯಲ್ಲಿ ನಿಂತಿರುತ್ತದೆ.ಆದ್ರೆ ಕಳೆದುಕೊಳ್ಳುವ ಹಾಗೆನ್ನುವುದಕ್ಕಿಂತಲೂ ಈ ಪ್ರಳಯ  ಅನ್ನುವುದು ನಮ್ಮ ಬದುಕಲ್ಲಿ ಅದೆಷ್ಟು ಸರ್ತಿ ಬಂದು ಇಡೀ ಬದುಕನ್ನು ಮೂರಾ ಬಟ್ಟೆ ಮಾಡಿಲ್ಲ.ವರ್ಷಾನುಗಟ್ಟಲೆ ಪ್ರೀತಿಸಿದ ಹುಡುಗ ಕೈಕೊಟ್ಟಾಗ ಎಲ್ಲಿಯೂ  ನಿಲ್ಲದ ಸ್ಥಿತಿ  ಹೊಂದುವ ಹುಡುಗಿ, ಇಲ್ಲ ನಾನು ನಿನ್ನ ಫ್ರೆಂಡ್ ಗೆ ಮನ ಸೋತಿದ್ದು,ನಿನಗೆ ಹೇಗೆ ಹೇಳೋದು ಅಂತ ಸುಮ್ಮನೆ ಲವ್ ಮಾಡಿದೆ ಅಂದಾಗ ಮಂದೆಯಲ್ಲಿ ತನ್ನ ಅಮ್ಮನನ್ನು ಕಳೆದುಕೊಂಡ  ಎಳೆಗರುವಿನ ಸ್ಥಿತಿಯಂತಹ ಮನಸ್ತತ್ವ  ಹೊಂದುವ ಹುಡುಗ,ಅಷ್ಟು ವರ್ಷ ಸಾಕಿದ ಮಗಳು -ಮಗನಿಂದ ಸಿಗುವ ಅಪಮಾನ ,ಅವರು ನಿರೀಕ್ಷೆ ಮಾಡದಂತಹ ಬದಲಾವಣೆ,ಕಾರಣಗಳು ಹೆಚ್ಚಾಗ್ತಾನೆ ಹೋಗುತ್ತೆ.ಇದು ಬದುಕಿನಲ್ಲಿ ನಿರಂತವಾಗಿ  ನಡೆಯುತ್ತಿರುವ ಪ್ರಳಯಗಳು.ಆದರೆ ಇದನ್ನು ನಾವ್ಯಾರು ಹೇಳಿ  ಪರಿಹಾರ ಪಡೆಯೋಕೆ ಹೋಗಲ್ಲ,,ಯಾಕೆಂದ್ರೆ ಒಂದು ಪ್ರಳಯದ  ಸಂಭ್ರಮ ಮುಗಿದರೆ ಮತ್ತೊಂದು ಸಿದ್ಧವಾಗಿರುತ್ತದೆ. ಇವೆಲ್ಲ  ಒಂದು ರೀತಿ,ಮತ್ತೊಂದಿದೆ,ಅದು ನಾವೆ ಖುದ್ದು ನಮ್ಮ ತಲೆ ಮೇಲೆ ಎಳೆದುಕೊಳ್ಳುವ  ಪ್ರಳಯಗಳು.ಅದೇನೋ ಹೇಳ್ತಾರಲ್ಲ ಇರಲಾರದೆ ಇರುವೆ....! ಬೀದಿಯಲ್ಲಿ ಹೋಗುವ ಮಾರಿ.....! ಆಗ ಅನುಭವಿಸುವ ಆಘಾತ ಬೇಡಾ ನಮ್ಮ ಕಥೆ...! ನನ್ನ ಕಂಡ್ರೆ ಅವರಿಗೆ ಇಷ್ಟ ಎಂದು ತಿಳಿಯುವುದು,ಅವರು ಎಂದಿಗೂ ನನ್ನ ಕೈ ಬಿಡಲ್ಲ ಅಂತ ತಿಳಿಯುವುದು, ನಾವು ಅವರ ಬದುಕಿನ ಅವಿಭಾಜ್ಯ  ಅಂತ ತಿಳಿಯುವುದು.... ಇವೆಲ್ಲ  ನಮ್ಮ ತಪ್ಪು ಕಲ್ಪನೆ,ಭ್ರಮೆ ಅಂತ ತಿಳಿದಾಗ ಸಹ ನಮ್ಮ ಪರಿಸ್ಥಿತಿ ಹೇಗಿರುತ್ತೆ ಅಂತ ಹೇಳುವಷ್ಟೇ ಇಲ್ಲ! ಪ್ರಕೃತಿಯಲ್ಲಿ ನಡೆಯುವ ಪ್ರಳಯದಿಂದ ಜೀವ ಒಂದೇ ಏಟಿಗೆ ಹೊರತು ಹೋಗಿ ಬಿಡುತ್ತೆ,ಆದರೆ ಬದುಕಿನಲ್ಲಿ ನಡೆಯುವ ಇಂತಹ ಪ್ರಳಯಗಳು  ಪ್ರತಿ ಕ್ಷಣ ನಮ್ಮನ್ನು ಸಾಯಿಸುತ್ತಲೇ  ಇರುತ್ತದೆ,ಇದಕ್ಕೆ ಪರಿಹಾರ ಇದೆಯಾ ????????????