Saturday, December 28, 2013

ಇಬ್ಬರ ನಗೆಯಲ್ಲಿ ವಿಷಾದವಿತ್ತು!


ಯೂನಿವರ್ಸಿಟಿಯಲ್ಲಿ ಓದುವಾಗ ನನ್ನ ಕ್ಲಾಸ್ ಮೇಟ್ ಒಬ್ಬ.. ತುಂಬಾ ವಿಚಿತ್ರವಾದ ಮನಸ್ಥಿತಿ ಆತನದ್ದು. ಯಾಕೆ ವಿಚಿತ್ರ ಅಂದ್ರೆ ಆತನ ಪ್ರಕಾರ ಹೆಣ್ಣುಮಕ್ಕಳು ಮನೆಯಲ್ಲಿ ಇರಬೇಕು, ಅಕಸ್ಮಾತ್ ಹೊರಗೆ ಬಂದರೂ ಸಹ ಆಕೆ ಹಾಗಿರ ಬೇಕು,ಹೀಗಿರ ಬೇಕು ಎಂದು ಹೇಳುವ ಟೈಪ್. ನೋಡ್ತಾ ಇರಿ ನನ್ನ ಮದುವೆ ಆದ ಮೇಲೆ ನಾನು ನನ್ನ ಹೆಂಡತಿಯನ್ನು ಯಾವರೀತಿ ನೋಡಿಕೊಳ್ತೀನಿ ಅಂತ ಮೀಸೆ ತೀಡುವ ಪೈಕಿ. ಸದಾ ಮುರ್ನಾಲ್ಕು ಹೆಣ್ಣು ಮಕ್ಕಳ ಜೊತೆ ಓಡಾಡುತ್ತ ಇಂತಹ ಮಾತುಗಳನ್ನು ಆಡುವ ಶೂರ. ನಾನು ಅವನ ಬಗ್ಗೆ ಹೆಚ್ಚು ಏನು ಅಂದುಕೊಂಡಿರಲಿಲ್ಲ, ಆದರೆ ಇಂತಹ ಮನಸ್ಥಿತಿಯ ಹುಡುಗರ ಬಗ್ಗೆ ತಿಳಿದಿದ್ದರಿಂದ ನನಗೆ ಹೆಚ್ಚೇನು ಅನ್ನಿಸದೇ ಇದ್ದರೂ ಲೇಯ್ ನಿನ್ನ ಮದುವೆಗೆ ನಾವೆಲ್ಲಾ ಒಂದು ಕುಡ್ಲು ಕೊಡ್ತೀವಿ ಅದನ್ನ ತೆಗೆದುಕೊಂಡು ನಿನ್ನ ಹೆಂಡತಿ ಹಿಂದೆ ಓಡಾಡು.. ರಕ್ಷಿಸು ಎಂದೆಲ್ಲಾ ಹೇಳಿ ಕಿಚಾಯಿಸುತ್ತಿದ್ದೆವು.. ಅದಾದ ಬಳಿಕ ಓದು ಮುಗಿಯಿತು... ಒಬ್ಬೊಬ್ಬರ ದಾರಿ ಒಂದೊಂದು ಕಡೆ.. ಆದರೆ ಕೆಲವರು ಆಗಾಗ ತಮ್ಮ ಇರುವಿಕೆ ತೋರುತ್ತಿದ್ದರು.. ಕ್ರಮೇಣ ಎಲ್ಲವು ಮಸುಕು ಮಸುಕು.. ಭೂಮಿ ಗುಂಡಗಿದೆ ಅಂತಾರಲ್ಲ ಹಾಗೆ ಒಮ್ಮೆ ನನಗೆ ಫೇಸ್ ಬುಕ್ ಮುಖಾಂತರ ಹಳೆ ಗೆಳೆಯ ಸಿಕ್ಕ, ಅವನ ಮೂಲಕ ಮತ್ತೊಂದಷ್ಟು.ಮೇಲೆ ಹೇಳಿದ್ದೆನಲ್ಲ ಅವನ ಫೋನ್ ನಂಬರ್ ಸಹ ದೊರಕಿತು. ಹೀಗೆ ಒಮ್ಮೆ  ಆತ ಮಾತನಾಡುತ್ತಾ ಏನಮ್ಮ ಚನ್ನಾಗಿದ್ದೀಯಾ ನನ್ನದು ಆನಂದ ಸಂಸಾರ, ಹೆಂಡತಿ ಮಕ್ಕಳೊಂದಿಗೆ ಆರಾಮವಾಗಿ ಇದ್ದೀನಿ ಎಂದು ತನ್ನ ಸಂತೃಪ್ತ ಕುಟುಂಬದ ಬಗ್ಗೆ ಹೇಳಿದ.. ನಾನು ಏನು ಬೆಂಗಳೂರಿನ ಕಡೆಗೆ ಬಂದಿದ್ದೀಯ? ಎಂದಾಗ ಮತ್ತೊಬ್ಬಳು ಫ್ರೆಂಡ್ ಹೆಸರನ್ನು ಹೇಳಿ ಅವಳ ಭೇಟಿ ಮಾಡಲು ಬಂದಿದ್ದೀನಿ ಎಂದು ಹೇಳಿದ.. ಅದಾದ ಬಳಿಕ ಮತ್ತೆ ಮಸುಕಾದ ಬಾಂಧವ್ಯಗಳು ಮತ್ತೇ ಗಟ್ಟಿ ಆಯಿತು.. ಆದರೂ ನನ್ನ ಕೆಲಸದ ವೈಖರಿಯಿಂದ ಸ್ನೇಹಿತರ ಭೇಟಿ ಅಸಾಧ್ಯವಾಗಿತ್ತು, ಆದರೂ ಆಗಾಗ ಫೋನ್ ಮೂಲಕ ಮಾತನಾಡುವುದು ನಡೆದೇ ಇತ್ತು. ನನ್ನ ಗೆಳತಿಯರಲ್ಲಿ ಒಬ್ಬಾಕೆ ಬಾಂಧವ್ಯ ಮತ್ತೇ ಚಿಗುರಿತು.. ಹೆಚ್ಚು ಗಟ್ಟಿ ಆಯಿತು. ಆಕೆ ಒಮ್ಮೆ ಮಾತಿನ ನಡುವೆ ಈತನ ಬಗ್ಗೆ ಹೇಳಿದ ಕಥೆಗಳು ಸಣ್ಣ ಎಳೆಯ ದಿಗ್ಭ್ರಾಂತಿ ಮೂಡಿಸಿತ್ತು. ಆತ ನಮ್ಮೆಲ್ಲರ ಮುಂದೆ ತುಂಬಾ ಸಭ್ಯನಂತೆ ಸೋಗಲಾಡಿತನ ತೋರಿದ್ದವನು, ಹೆಣ್ಣಿನೊಂದಿಗೆ  ಅನೈತಿಕ ಬಾಂಧವ್ಯ ಬೆಳೆಸಿದ್ದ. ಆತನ ಮಾತಿನ ಶೈಲಿಗೆ ಅವನ ಬಗ್ಗೆ ಇಟ್ಟಿದ್ದ ಗೌರವ ....! ಮುಖ್ಯವಾಗಿ ರೆಡ್ ಹ್ಯಾಂಡ್ ಆಗಿ ಆತ ಊರವರ ಕೈಲಿ ಸಿಕ್ಕಿ ಹಾಕಿಕೊಂಡಿದ್ದ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಲಕ್ಷಗಳು ಆತನ ಕೈ ಬಿಟ್ಟಿತ್ತು. ಆ ಸಮಯದಲ್ಲಿ ಅಲ್ಲಿ ಜಡ್ಜ್ ಆಗಿದ್ದ ನನ್ನ ಗೆಳತಿಯ ಗೆಳತಿಯಿಂದ ಸಮಸ್ಯೆ ಬಗೆ ಹರಿದಿತ್ತು. ಅದ್ಯಾಕೆ ಅವನು ಅಷ್ಟು ಸರ್ತಿ ಬೆಂಗಳೂರಿಗೆ ಬರುತ್ತಿದ್ದ ಎಂಬುದರ ಅರಿವು ಆಗ ಆಗಿತ್ತು..! ಜೊತೆಗೆ ಅದ್ಯಾಕೆ ಅವನು ತನ್ನ ಮನೆಯನ್ನು ಆನಂದಸಾಗರ ಎಂದು ಪದೇ ಪದೇ ಹೇಳಿದ್ದು ಅನ್ನುವುದರ ಅರ್ಥ ವಾಗಿತ್ತು. ಅದನ್ನು ಹೇಳಿ ಅವಳ ಮುಂದೆ ನಕ್ಕೆ.. ಇಬ್ಬರೂ ನಕ್ಕೆವು.. ಅದರಲ್ಲಿ ವಿಷಾದದ ಛಾಯೆ ಹೆಚ್ಚಿತ್ತು! 

Friday, December 27, 2013

ಆಧುನಿಕತೆಯ ಮತ್ತೊಂದು ಸ್ವರೂಪ



 ಬದುಕಲ್ಲಿ ಯಾರು ಕಿವಿ ಮುಚ್ಚಿದರು ನಮಗೆ ಚಿಂತೆ ಇರ ಬಾರದು ಆ ಮಟ್ಟಿಗೆ ನಮ್ಮನ್ನು ನಾವು ಬೆಳೆಸಿಕೊಳ್ಳ ಬೇಕು. ಬಿಡಿ ಆ ವಿಷಯ ಬೇಡ. ನಾನು ನನ್ನ ಪೇಪರ್ ಗೆ ಸಂಬಂಧಿಸಿದಂತೆ ಅನೇಕ ವೆಬ್ ಸೈಟ್ ಗಳನ್ನು ಸರ್ಫ್ ಮಾಡುತ್ತಲೇ ಇರುತ್ತೇನೆ. ಬಹಳಷ್ಟು ಸಂಗತಿಗಳು ಹೊಸಹೊಸ ರೀತಿಯಲ್ಲಿ ವ್ಯಕ್ತವಾಗಿರುತ್ತದೆ, ಒಂದಷ್ಟು ಅಪರೂಪ ಅನ್ನಿಸುವಂತಹ ರೀತಿಯಲ್ಲಿ ತಿಳಿಸಲಾಗಿರುತ್ತದೆ. ಹೀಗೆ ಒಮ್ಮೆ ನಾನು ಒಂದು ಸೈಟ್ ನಲ್ಲಿ ಆಸ್ಮಿಕವಾಗಿ ಹೋದೆ , ಅಂದ್ರೆ ಜಾಯಿನ್ ಆದೆ.. ಅದರಲ್ಲಿ ಜಾಯಿನ್  ಆದ ಸ್ವಲ್ಪ ಹೊತ್ತಿನಲ್ಲೇ ಅಪಾರ ಸಂಖ್ಯೆಯ ರಿಕ್ವೆಸ್ಟ್ ಗಳು. ಇಲ್ಲಿ ಗಂಡು ರಿಕ್ವೆಸ್ಟ್ಗಳು ಹೆಚ್ಚು ಹಾಗೆನ್ನುವುದಕ್ಕಿಂತ ಅವರೆ ಕಳುಹಿಸದ್ದು ಅಂತ ಹೇಳೋ ಪ್ರಯತ್ನ ಮಾಡುತ್ತಿದ್ದೇನೆ  . ತುಸು ಆಶ್ಚರ್ಯ ನನಗೆ. ಕಾರಣವಿಷ್ಟೆ ಅಲ್ಲಿ ಹೋದಾಗ ಅಂದ್ರೆ ಆ ಸೈಟ್ ನಲ್ಲಿ ನಾನು ಇದ್ದ ಹಲವು ದಿನಗಳಲ್ಲೇ ಆಧುನಿಕ, ಅದರಲ್ಲೂ ಮೇಲ್ಮಧ್ಯಮ, ಶ್ರೀಮಂತ ವರ್ಗದ ಗಂಡು ಮಕ್ಕಳ , ಹಪಹಪಿ, ಭಾವನೆಗಳು, ತುಂಬಾ ಆಶ್ಚರ್ಯ ತಂದಿತು. ಎರಡು ತುತ್ತಿಗಾಗಿ, ನೆಲೆ ಕಂಡುಕೊಳ್ಳಲು ಪರದಾಡುತ್ತಿರುವ ನನ್ನ ಅಪಾರ ಸಂಖ್ಯೆ ಗೆಳೆಯರ ವಿಷಯ ಇವರ ಈ  ಅಂಶಗಳ ಮುಂದೆ ಅದರಲ್ಲೂಇವರ ಒದ್ದಾಟ,ಒಂಟಿತನ ಮನದ ದುಗುಡ ಅತ್ಯಂತ ವಿಸ್ಮಯ ಅನ್ನಿಸಿತ್ತು. ಎಲ್ಲರೂ ಐವತ್ತರ ಗಡಿ ದಾಟಿದವರು ಅತವಾ ಸಮೀಪದವರು. ಹೆಚ್ಚಾಗಿ ಅವರ ಆಸೆ ಆಸಕ್ತಿ, ಗೆಲುವು , ಯಶಸ್ಸು ಎಲ್ಲವೂ ಒಂದೆ ತೆರನಾತ್ತು. ಹಣ, ಪ್ರತಿಷ್ಟೆ ಎಲ್ಲವೂ ಮಧ್ಯಮ ಮತ್ತು ಸಾಧಾರಣ ಇನ್ ಕಂ ನವರು ಬೆರಳು ಕಚ್ಚುವಂತೆ ಇದ್ದರೂ ಅವರ ಆ ಫೀಲಿಂಗ್ಸ್ . ಹೆಚ್ಚಾಗಿ ಅವರು ತಮ್ಮ ಬಾಳಸಂಗಾತಿಯ ಬಗ್ಗೆ ಬೇಸರ ಹೊಂದಿದ್ದರು. ಇದು ನಾಟಕ ಎಂದು ತಿಳಿಯುವ ಅಗತ್ಯ ಇಲ್ಲ. ಅವರ ಬದುಕು ಇರುವುದೆಲ್ಲವ ಬಿಟ್ಟು ಅನ್ನುವ ಮನಸ್ಥಿತಿ ತಲುಪಿತ್ತು. ಅವರಿಗೆ ಹೆಂಡತಿಯ ಪರ್ಸನಲ್ ಅಟೆಂಡೆನ್ಸ್ ಬೇಕಾಗಿತ್ತು ಈಗ, ಆದರೇ ಆಕೆಯೂ ಈಗಾಗಲೇ ಮಧ್ಯ ವಯಸ್ಕಳಾಗಿದ್ರಿಂದ ಗಂಡನ ಬಗ್ಗೆ ಗಮನ ಕೊಡುವುದಕ್ಕಿಂತ ತನ್ನ ಕೆರಿಯರ್ , ಫ್ರೆಂಡ್ಸ್ ಹೀಗೆ ತನ್ನದೇ ಆದ ಲೋಕದಲ್ಲಿ ಕೋಟೆ ಕಟ್ಟು ಕೊಂಡಿದ್ದಳು ಜೊತೆ ಗಂಡನ ಬಗ್ಗೆ ಅನುಮಾನದ ಹುತ್ತವನ್ನು ಸಹ ಬೆಳೆಸಿಕೊಂಡಿದ್ದಳು (ಇದು ಒಬ್ಬರ ಸಂಗತಿಯಲ್ಲ ಬಹುತೇಕ ಎಲ್ಲರದ್ದು ). ಎಲ್ಲವೂ ಇದ್ದರೂ ಏನೋ ಕೊರತೆಯನ್ನು ಅನುಭವಿಸುತ್ತಿದ್ದ ಇವರೆಲ್ಲಾ ಹೊಸ ವರ್ಗದ ಪ್ರತಿನಿಧಿಗಳಾಗಿ ಕಂಡು ಬಂದರು ನನಗೆ.. ಗೊತ್ತಿಲ್ಲ ನಮ್ಮ ಮತ್ತು ನಿಮ್ಮ ನಡುವೆ ಅಂತಹವರು ಇರ ಬಹುದು. ನಾವು ಕೇವಲ ಮೇಲೆ ಅಂಟಿದ ಸಕ್ಕರೆಯಂತೆ ಅವರ ಬದುಕನ್ನು ಕಾಣುತ್ತಿದ್ದೇವೆ, ವಿನಃ ಒಳಗೆ ಹುಳುಕಾದ ಬದುಕನ್ನಲ್ಲಾ. ಆಧುನಿಕತೆಯ ಮತ್ತೊಂದು ಸ್ವರೂಪ ಹೀಗೂ ಇದ್ಯಾ?  

Tuesday, December 24, 2013

ಬದುಕೆಂದರೆ ಇಷ್ಟೇ ಇಂತಿಷ್ಟೇ

ತುಂಬಾ ವಿಷಯಗಳಲ್ಲಿ ಅನ್ನಿಸುವ ಅನೇಕ ಸಂಗತಿಗಳು ,ಅನೇಕ ಬಾರಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಗೊತ್ತಿಲ್ಲದೇ ತಪ್ಪಾಗಿರುತ್ತೆ. ಅದರ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ನಾಳೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೆ ಹೋಗ ಬೆಕು. ಮೂರು ಹುಡ್ಗರ ಪುಸ್ತಕ ಹೊರಬರ್ತಾ ಇದೆ. ಪ್ರವರ, ರಾಜೇಂದ್ರ  ಮತ್ತು ಶರತ್ .ತು೦ಬಾ  ಸರ್ತಿ ಕರೆದರು.ಯಾಕೆ ನಾನು ಹೀಗಾದೆ ಅಂತ ಅನ್ನಿಸುತ್ತೆ ಒಮ್ಮೊಮ್ಮೆ.. ಪುಸ್ತಕ ಬಿಡುಗಡೆಯ ಮಾಹಿತಿ ಸಿಕ್ಕರೆ ಸಾಕು ಪರಿಚಯಸ್ಥರು ಕರೆಯದೆ ಇದ್ರೂ ಹೋಗಿ ಪುಸ್ತಕ ಕೊಂಡು ಓದುವ ಖುಷಿ ನನಗೆ . ಯಾಕೋ ಕೆಲವು ವರ್ಷಗಳಿಂದ ಕರೆದರೆ ಅದರಲ್ಲೂ ಹೆಚ್ಚು ಬಾರಿ ಕರೆದರೆ  ಮಾತ್ರ ಹೋಗುತ್ತೇನೆ . ಹೋದಾಗಲು ಅವ್ಯಕ್ತವಾದ ಭಯ ಬಾಧಿಸುತ್ತಲೇ ಇರುತ್ತೆ ಅಕಸ್ಮಾತ್ ಅಪಮಾನ ಆದ್ರೆ, ಹಾಗಾದರೆ, ಹೀಗಾದರೆ ಅಂತ . ಅವುಗಳ ಬಗ್ಗೆ ಈಗ ಹೆಚ್ಚು ಹೇಳಲಾರೆ, ಮನಸ್ಸಿಗೆ ಸಾಧ್ಯ ಆದ ದಿನ ಬಿಚ್ಚಿಡುತ್ತೇನೆ .

ಯಾಕೋ ಕೆಲವು ಬಾರಿ ಸಾವಿನ ಗಾಳಿ ಪಕ್ಕದಲ್ಲೇ ,ಜೊತೆಯಾಗಿ, ಬೆಂಗಾವಲಾಗಿ ರುತ್ತೇನೋ ನನಗೆ ಅಂತಾ ಅನ್ನಿಸಿದೆ .  ಅದು ಸಹಜ ಕೆಲವು ಘಟನೆಗಳು, ಆಕಸ್ಮಿಕಗಳು  ಮನದ ಗಟ್ಟಿತನ ಮೆತ್ತಗೆ ಮಾಡಿ ಬಿಡುತ್ತದೆ .
ಇತ್ತೀಚೆಗೆ ಕಂಡ ಸಾವಿನಲ್ಲಿ ಅತಿ ಹೆಚ್ಚು ನೋವು ಕೊಟ್ಟಿದ್ದು ನನ್ನ ರಕ್ತ ಸಂಬಂಧಿ ಮಗನ ಸಾವು . ಬಡತನ , ಬಡತನ . ಮಗನ ವಿದ್ಯೆಯು ಅಪ್ಪ ಅಮ್ಮಂದಿರನ್ನು ಅಕರಾಸ್ಥೆಯಿಂದ ಸಾಕುವಷ್ಟಿತ್ತು . ಜೋತೆಗೊಬ್ಬಳು ತಂಗಿ . ಎಲ್ಲ ಸರಿಯಾಗಿ ಇದ್ದಿದ್ದರೆ ಆ ಹುಡುಗನ  ಬದುಕು ಮತ್ತು ಮನೆಯವರ ಸ್ಥಿತಿ ಚೆನ್ನಾಗಿರುತ್ತಿತ್ತು . ಆದರೆ ಹಾಗೆ ಆಗದೆ ನದಿಯಲ್ಲಿ ಕಾಲು ಜಾರಿ  ಬಿದ್ದು ಸತ್ತು ಹೋದ . ಇಂತಹದ್ದೇ ಒಂದು ಸಾವು ಆ ಹುಡುಗ ತುಂಬಾ ಚಿಕ್ಕವ.. ನಾವು ಆತನಿಗಿಂತ ಚಿಕ್ಕವರು . ಬಡ ತಾಯಿತಂದೆಗೆ ಮೂರು ಜನ ಮಕ್ಕಳಲ್ಲಿ ಇವ ದೊಡ್ಡವ . ಗೆಳೆಯರ ಜೊತೆ ಆಡಲು ಹೋದಾಗ ನೀರು ಪಾಲು..
ಮಕ್ಕಳನ್ನೇ ಆಸ್ತಿ ಎಂದು ನಂಬಿರುವ  ಆ ತಾಯಿತಂದೆಗೆ ಎಂತಹ ಆಘಾತ !
ಬದುಕೆಂದರೆ ಇಷ್ಟೇ ಇಂತಿಷ್ಟೇ ಎಂದು ಹೇಳೋಕೆ ಆಗಲ್ಲ . 

Monday, December 23, 2013

ಕಾಣದ ಕಡಲಿಗೆ ಹಂಬಲಿಸಿದೆ ಮನ


ಕಾಣದ ಕಡಲಿಗೆ ಹಂಬಲಿಸಿದೆ ಮನ ಕಾಣಬಲ್ಲೆನೆ ಒಂದು ದಿನ ಕಡಲನು ಸೇರ ಬಲ್ಲೆನೆ ಒಂದು ದಿನ!! ನೀನು ಮುಗಿಲು ನಾನು ನೆಲ!! ಯಾವುದೀ ಪ್ರವಾಹವೂ !! ಇಂತಹ ಇನ್ನೂ ಅನೇಕ ಭಾವಗೀತೆಗಳನ್ನು ರಚಿಸಿಕೊಟ್ಟ ರಾಷ್ಟ್ರಕವಿಯ ಹೆಸರು ಅಮರವಾಗಲಿ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ!!
ಭಾವಗೀತೆಯ ಪ್ರಿಯರಿಗೆ ಈ ಹಾಡು ತುಂಬಾ ಆಪ್ತ.  ವರ್ಷವೊಂದರ ಡಿಸೆಂಬರ್ ತಿಂಗಳಲ್ಲಿ ಹಿರಿಯ ಹಿನ್ನೆಲೆ ಗಾಯಕ ಸಿ.ಅಶ್ವಥ್ ಅವರು ಕಣ್ಣು ಮುಚ್ಚಿದಾಗ ಜಿಎಸ್ಎಸ್ ಅವರ ಈ ಹಾಡನ್ನು ಅಶ್ವಥ್ ಅವರನ್ನು ಇಷ್ಟ ಪಡುವ ಸುಗುಮ ಸಂಗೀತ ಪ್ರಿಯರು ಗುಣಗುಣಿಸಿ ಅಶ್ರುತರ್ಪಣ ಬೀರಿದ್ದರು. ಇಂತಹ ಭವ್ಯವಾದ ಕವನ ರಚನೆಯ ಜಿಎಸ್ಎಸ್ ಕಾಣದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.  ಕಾಣದ ಕಡಲಿಗೆ ಹಂಬಲಿಸಿ ಅಂತಿಮವಾಗಿ ಅಲ್ಲಿಗೆ ಹೊರಟ ಜೀವಕ್ಕೆ ನಮೋನ್ನಮಃ
ನನಗೆ ಇವರ ಅತಿಯಾದ ಆಪ್ತವಾದ ಹಾಡು ಎದೆ ತುಂಬಿ ಹಾಡಿದೆನು... ಹಾಡಿನ ಬಗ್ಗೆ ಅದರಲ್ಲೂ, ಭಾವಗೀತೆಗಳ ಬಗ್ಗೆ ವಿಶೇಷವಾದ ಒಲವನ್ನು ಹೊಂದಿರುವ ಸಾಹಿತ್ಯ ಪ್ರಿಯರಲ್ಲಿ ನಾನು ಒಬ್ಬಳು. ತುಂಬಾ ಭಾವುಕತೆಯಿಂದ ಕವಿಗಳ ರಚನೆ ಹಾಡುವುದು ದಿನದ ಒಂದು ಭಾಗ. ಅತಿ ಆಪ್ತ ಅನ್ನಿಸುವ ಕೆಲಸ ಅದಾಗಿತ್ತು. ಆಗ ನಾನು ಹೆಚ್ಚು ಗುನುಗುತ್ತಿದ್ದ ಹಾಡು ಎದೆತುಂಬಿ.. ಮತ್ತೊಂದು ಇಷ್ಟ ಆಗುತ್ತಿದ್ದ ರಚನೆ ಉಡುಗಣ ವೇಷ್ಟಿತ.. ಅದರ ಭಾವಲಹರಿ ತುಂಬಾ ಇಷ್ಟವಾಗಿತ್ತು. ಈಗಲೂ ತುಂಬಾ ಇಷ್ಟ.ರಾಷ್ಟ್ರ ಕವಿ, ಸಾಮಾನ್ಯರ ಆಪ್ತ ಕವಿ ಜಿ ಎಸ್ ಎಸ್ ಅವರಿಗೆ ಭಾವಪೂರ್ಣ ವಿದಾಯ..


ಒಂದಂತೂ ಸತ್ಯ ಪ್ರತಿಯೊಂದು ಜೀವವು ಕಾಣದ ಕಡಲಿನತ್ತ ಆಕರ್ಷಣೆ ಹೊಂದಿರುತ್ತದೆ.. ಆದರೆ ಅದನ್ನು ಸೇರಬೇಕಾದರೆ ಕಾಯಲೇ ಬೇಕು...ದಿನ ಸವಿಯಲೇ ಬೇಕು!! 


Saturday, December 21, 2013

ಅಮಾಸಮ್ಮ



ಕಾಡು ಹೂಗಳ ಬಗ್ಗೆ ಯಾರೂ ಹೆಚ್ಚು ಗಮನ ಕೊಡಲ್ಲ ಕಾಡಿಗೆ ಹೋದಾಗ ಇಲ್ಲವೇ ದಾರಿಯಲ್ಲಿ ಆಕಸ್ಮಿಕವಾಗಿ ಕಂಡಾಗ ಅದರ ಸೊಬಗನ್ನು ಆಹ್ಲಾದಿಸುತ್ತೇ ವೆ ಹಾಗೆ ಕೆಲವರು ಸದಾ ಕಾಲ ನೆನಪು ಆಗುವುದಿಲ್ಲ, ಆಕಸ್ಮಿಕವಾಗಿ ಅವರ ಧುತ್ತೆಂದು ಎದುರು ಬರ್ತಾರೆ ಮನದಲ್ಲಿ.
ನಾನು ಕಂಡ ಇಂತಹ ವ್ಯಕ್ತಿತ್ವಗಳಲ್ಲಿ ಅಮಾಸಮ್ಮ  ಸಹ ಒಬ್ಬರು. ಆಕೆ ಹೆಸರಿನ ಬಗ್ಗೆ ಸಿಕ್ಕಾಪಟ್ಟೆ ಅಚ್ಚರಿ ಆಗಿತ್ತು ನನಗೆ .ಇದೇ ನು ಒಳ್ಳೇ ವಿಚಿತ್ರವಾಗಿದೆಯಲ್ಲ ಈಕೆ ಹೆಸರು.ಅಂತ .  ನೋಡೋಕೆ ತುಂಬಾ ಚೆನ್ನಾಗಿದ್ದಳು ಆಕೆ. ಒಳ್ಳೆ ಗಜನಿಂಬೆ ಬಣ್ಣ ಮಟ್ಟಸವಾದ ರೂಪ ,ಆದರೆ ಗಲೀಜು ಹೆಣ್ಣು . ಪ್ರಾಯಶಃ ಕೂಲಿ ಮಾಡುವ ಹೆಣ್ಣು ಮಗಳಾಗಿ ದ್ದುದರಿಂದ  ನನಗೆ ಆಗ ಹಾಗೆ ಅನ್ನಿಸಿತ್ತು ಅಂತ ಕಾಣುತ್ತೆ . ಆದರೂ ನನಗೆ ಆಕೆ ಹೆಸರಿನ ಬಗ್ಗೆಯೇ ಜಿಜ್ಞಾಸೆ . ಅಮ್ಮನ ಬಳಿ  ಕೇಳಿದೆ ಇದೇನು ಹೀಗೆಲ್ಲ ಹೆಸರು ಇಡ್ತಾರೆ ಹೆಣ್ಣುಮಕ್ಕಳಿಗೆ ಈ ಜಾತಿಗಳಲ್ಲಿ ಅಂದೇ ಒಮ್ಮೆ. ಆಗ ಅವರು ಅಂತಹದ್ದೇನು ಆಗಿಲ್ಲ ಎಲ್ಲರು ಇಟ್ಟಂಗೆ ಅವರ ಮನೇಲಿ  ಆಕೆಗೊಂದು ಹೆಸರು ಇಟ್ಟಿದ್ದಾರೆ ಮನುಷ್ಯನ ದುರ್ಬುದ್ದಿಯಿಂದ ಹೆಣ್ಣುಮಕ್ಕಳ ಹೆಸರು ವಿಕಾರ ಮಾಡ್ತಾರೆ ಅಂದ್ರು . ತೀರ ಅಚ್ಚರಿನನಗೆ, ಹೌದಾ ಏನು ಆಕೆ ಹೆಸರು ಅಂದೇ ನಾನು. ಆ ಸುಂದರಿ ಹೆಸರು ರಾಜಮ್ಮ. ಆಕೆಯ ಗಂಡನ ಹೆಸರು ಅಮಾಸಪ್ಪ. ಕೂಲಿ ಮಾಡಿಕೊಂಡು ಬದುಕುತ್ತಿದ್ದ ಮ೦ದಿ . ನಮ್ಮ ಮನೆಯಲ್ಲಿ ಕೆಲಸಕ್ಕೆ ಬರ್ತಾ ಇದ್ದಳು ಆಕೆ.ಅಮ್ಮನನ್ನು ಕಂಡ್ರೆ ತುಂಬಾ ಪ್ರೀತಿ, ಗೌರವ ಆಕೆಗೆ.  ಮನೆ ಕೆಲಸ ತುಂಬಾ ಸ್ವಚ್ಛ ವಾಗಿ ಮಾಡುವ ಗುಣ ಇತ್ತು. ೪ ಜನ ಮಕ್ಕಳು ಆಕೆಗೆ. ಗಂಡ ಕುಡುಕ . ದುಡಿದ ಹಣವೆಲ್ಲಾ ಹೀಗೆ ಪೋಲು. ಆದರೆ ಯಾವುದಕ್ಕೂ ಹೆದರದ ಹೆಣ್ಣುಮಗಳು ಕಷ್ಟಪಟ್ಟು ದುಡಿದು ಸಂಸಾರ ನಡೆಸುತ್ತಿದ್ದಳು . ಗಂಡನ ಕುಡಿತ,ತನ್ನ ಕಷ್ಟ ಯಾವುದನ್ನು ಜಗತ್ತಿನ ಮುಂದೆ ಹೇಳಲು ಇಚ್ಚಿಸುತ್ತಿರಲಿಲ್ಲ. ಆದರೆ ಮನೆಯ ಈ ವಾತಾವರಣ ಆಕೆಗೆ ಜಿಗುಪ್ಸೆ ತ೦ದಿತ್ತು . ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ಬರೆಯುವವರು, ಅವರ ಬಗ್ಗೆ ಕಾಳಜಿ ವಹಿಸುವವರು ಆಕೆಯ ಮನವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಹೋ ಗುವುದಿಲ್ಲ. ಅಂತಹ ಸ್ಥಿತಿ ರಾಜಮ್ಮನಿಗು ಎದುರಾಗಿತ್ತು. ಗಂಡನ ಕುಡಿತದ ರೋಗಕ್ಕೆ ಮದ್ದಿಲ್ಲ ಅಂತ ತಿಳಿದ ಆಕೆ, ಆತನನ್ನು ಬಿಟ್ಟು ತನ್ನ ಮಕ್ಕಳನ್ನು ಕರೆದುಕೊಂಡು ದೂರ ಹೊರತು ಹೊದಲು. ಈಗ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿ ಉಳಿದವರಿಗೆ ಒಳ್ಳೆ ವಿದ್ಯಾಭ್ಯಾಸ ನೀಡಿ ಅವರಿಗೆ ದಾರಿ ಮಾಡಿದ್ದಾಳೆ ಅನ್ನುವ ಸುದ್ದಿ ಇತ್ತೀಚೆಗೆ ಕೇಳಿ ಬ೦ತು . ಜೊತೆಗೆ ಕುಡುಕ ಗಂಡನು ಆಕೆಯ ಆಶ್ರಯಕ್ಕೆ ಬಂದನಂತೆ !

Friday, December 20, 2013

ವ್ಯಕ್ತಿತ್ವ


ತುಂಬಾ ಮುಚ್ಚಿಟ್ಟು ಕೊಳ್ತೀಯ ಮಹರಾಯ್ತಿ . ಮನಸ್ಸು  ಬಿಚ್ಚಿ  ಮಾತಾಡಿದ್ರೆ ತಾನೇ ಏನಾದ್ರೂ ಗೊತ್ತಾಗೋದು ಅನ್ನುವ ಆಕ್ಷೇಪ ನನ್ನ ಬಗ್ಗೆ ಸಾಮಾನ್ಯವಾಗಿ ಕೇಳಿ ಬರುತ್ತೆ. ನಿಜ ನಾನು ಹೆಚ್ಚು ಹೆಪ್ಪುಗಟ್ಟಿಸಿಕೊಂಡಿದ್ದೇನೆ . ಯಾಕೆ ಅನ್ನುವ ಅನೇಕ ಪ್ರಶ್ನೆಗಳಿಗೆ ನನ್ನ ಕಡೆಯಿಂದ ಗೊತ್ತಿಲ್ಲ ಅನ್ನುವ ಉತ್ತರವೇ ಹೆಚ್ಚು. ಪ್ರಾಯಶಃ  ಬದುಕಿನಲ್ಲಿ ಕಂಡ ಅನೇಕಾನೇಕ ಘಟನೆಗಳು, ಅನುಭವಗಳು ನನಗೆ ಮನಸ್ಸಿಗೆ ಬೀಗ ಹಾಕಿ ಕೊಳ್ಳುವುದು ಹೆಚ್ಚು ಸೂಕ್ತ ಅನ್ನಿಸಿರ ಬಹುದು. ಆಗಿನ್ನೂ  ಡಿಗ್ರಿ ಓದುವ ರಮ್ಯ ಕಾಲ. ಎಲ್ಲ ವಿಷಯದಲ್ಲೂ ಮುಂದು . ಎಲ್ಲರು ಇಷ್ಟ ಪಡುವಂತಹ ಕಂಠ  ನನ್ನದು. ಬರವಣಿಗೆ ಅಂದ್ರೆ ಮನವನ್ನು ಬರಹಗಳ ಮೂಲಕ ಬಿಚ್ಚಿಡುವ ಲಾಲಿತ್ಯವು ಸಹ ಲೀಲಾಜಾಲ. ನಾಟಕವು ಆಡುವ ಕಲೆಯು ಕರಗತ. ಹೀಗೆ ಎಲ್ಲ ರಂಗದಲ್ಲೂ ಓಕೆ ಅನ್ನಿಸುವ ಹೆಣ್ಣುಮಗಳು ನಾನಾಗಿದ್ದೆ. ಹಾಗಿರುವಾಗ ಒಮ್ಮೆ ನನ್ನ ಬದುಕಲ್ಲಿ ಒಂದು ಸಂಘಸಂಸ್ಥೆ ಎಂಟ್ರಿ ಆಯಿತು. ಆ ಬಳಿಕ ಅವರ ಒಡನಾಟದಿಂದ ಕಾಲೇಜಿನವರ ಕಣ್ಣು ಕೆಂಪಾಯಿತು . ಅಲ್ಲಿವರೆಗೂ ಇಷ್ಟವಾಗಿದ್ದ ನಾನು ಬೇಡದ ವ್ಯಕ್ತಿಯಾಗಿ ಬದಲಾದೆ.  ಆಶ್ಚರ್ಯ ಅನ್ನಿಸುವಂತೆ ಬದಲಾಯಿತು ಬದುಕು. ಅದ್ಯಾಕೋ ಎಲ್ಲ ಲೆಕ್ಚರರ್ ನನ್ನ ಬಗ್ಗೆ ಅಸಹನೆ ಬೆಳಸಿಕೊಂಡರು . ನಾನು ಯಾವುದೇ ರೀತಿಯ ಕಾನೂನುಬಾಹಿರ ಕೆಲಸದಲ್ಲಿ ತೊಡ ಗಿರಲಿಲ್ಲ.ಆ ಸಂಸ್ಥೆ ಹೆಸರು ಎಬಿವಿಪಿ.  ಆ ನಂತರ  ಯಾವುದೇ ಕಾಂಪಿಟೇಷನ್ ನಲ್ಲಿ ಗೆದ್ದರೂ  ಗೆಲುವನ್ನು ಒಪ್ಪಿಕೊಳ್ಳದ ಒಂದು ಗ್ರೂಪ್ ಸಿದ್ಧ ಆಯಿತು.ಒಂದೊಂದು ಗೆಲುವಿಗೂ ಮಾಡಿದ ಸಾಧನೆ, ಪಟ್ಟ ಕಷ್ಟಗಳು ಯಾವುದಕ್ಕೂ ಬೆಲೆ ಸಿಗಲೇ ಇಲ್ಲ. ನನಗೆ ಅಳು  ಬರ್ತಾ ಇರೊದು. ಮನೆಗೆ  ಬಂದು ಅಮ್ಮ -ಅಣ್ಣಂದಿರ ಮುಂದೆ ಹೇಳುವಾಗ ಕಣ್ಣೀರಧಾರೆ .ಪ್ರಾಯಶ : ಅವರ ಈ ಗುಣದಿಂದ ನನ್ನ ಒಳಗಿನ ನಾನು ಹೆಚ್ಚು ಗಟ್ಟಿಯಾದೆ . ಇಲ್ಲ್ಲಿ ಮತ್ತೊಂದು ವ್ಯಕ್ತಿತ್ವದ ಬಗ್ಗೆ ಹೇಳಲೇ ಬೇಕು . ನಾನು ಡಿಗ್ರೀ ಓದುತ್ತಿದ್ದಾಗ ನನ್ನ ಕನ್ನಡ ಲೆಕ್ಚರರ್ ಶಶಿಕಲ ಮೊರಬದ ಅಂತ . ಅವರು ಮೂಲತಃ ಬಾಗಲಕೋಟೆ ಯವರು. ಅವರಿಗೆ ನಾನು,ನನ್ನ ಮುಗ್ಧತೆ ಮತ್ತು ತಾಕತ್ತು ಅರ್ಥ ಆಗಿತ್ತು. ಅವರ ಪ್ರೀತಿ ಬೇರೆಯ ಮೇಡಮ್ಮು-ಮೇಡಪ್ಪ ಗಳಿಗೆ ಇಷ್ಟ ಆಗಿರಲಿಲ್ಲ. ನಾನು ಸೋತಷ್ಟು ಅವರು ಗೆಲ್ಲುವ ದಾರಿ ತೋರಿಸುತ್ತಾ ಹುರಿದುಂಬಿಸುತ್ತಿದ್ದರು . 
ಬಳಿಕ ನನ್ನದೇ ಒಂದು ತಾಕತ್ತು ಬೆಳೆದು ನಾನು ಬೆಳೆಯಲು ಪ್ರಯತ್ನಿಸಿದೆ್‌ಈಗೆ ಹಲವು ಸಂಗತಿಗಳು ಹುದುಗಿವೆ.. ಅದನ್ನು  ಬರೀತಿನಿ. ನನ್ನ ಅನೇಕ ಮೌನಗಳನ್ನು  ಸಾಧ್ಯವಾದರೆ ಅಕ್ಷರಗಳ ಮೂಲಕ ತಿಳಿಸುತ್ತೇನೆ .. ಆದರೆ ಒಂದಂತೂ ಸತ್ಯ ಅಂದು ಅವರ ಅಸಹನೆ ಇಂದು ನನಗೊಂದು ವ್ಯಕ್ತಿತ್ವ ಬೆಳೆಯಲು ಸಾಧ್ಯವಾಯಿತು...