ಇತ್ತೀಚೆಗೆ ಕೋಲಾರದ ಹಳ್ಳಿಗೆ ಹೋಗಿದ್ದೆ. ನನ್ನ ತಾಯಿಯ ತವರೂರು ಆ ಹಳ್ಳಿ. ಅವರು ಓದಿದ ಶಾಲೆಗೇ ಐವತ್ತರ ಸಂಭ್ರಮ. ಅಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ರಮೇಶ್ ಕುಮಾರ್, ಡಿ ಕೆ ಶಿವಕುಮಾರ್,ಸುದರ್ಶನ್ ಹೀಗೆ ರಾಜಕೀಯ ಗಣ್ಯರು ಸೇರಿದ್ದರು. ಅವೆಲ್ಲಕ್ಕಿಂತ ಎಲ್ಲರಿಗು ತಮ್ಮ ಬಾಲ್ಯದ ಗೆಳೆಯ ಗೆಳತಿಯರ ಜೊತೆ ಮಾತನಾಡುವ ಸಂಭ್ರಮ. ನಾವೆಲ್ಲಾ ಅವರುಗಳ ಖುಷಿಯನ್ನು ನೋಡುತ್ತಾ ನಾವು ನಮ್ಮ ಮಟ್ಟಿಗೆ ಎಂಜಾಯ್ ಮಾಡಿಕೊಳ್ತಾ ಇದ್ವಿ. ನನ್ನ ದೊಡ್ಡ ಸೋದರ ಮಾವ ಆ ಊರಲ್ಲಿ ನೆಲೆಸಿದ್ದರು. ಅವರಿಲ್ಲ ಈಗ ಆದರೆ ಅತ್ತೆ ಅಲ್ಲೇ ಇದ್ದಾರೆ. ನಾನು ಕಂಡಂಗೆ ನಮ್ಮ ಮನೆಗಳಲ್ಲಿ ಹೇಳಿಕೊಟ್ಟಿರುವ ಮೊದಲ ಪಾಠ ಸರಳ ಜೀವನ.. ಉತ್ತಮ ಆಲೋಚನೆ. ಎಷ್ಟೇ ಇದ್ದರು ಆಡಂಬರದ ಬದುಕು ನಮ್ಮ ಬದುಕಲ್ಲಿ ಪ್ರಭಾವ ಬೀರಿಲ್ಲ.
ಸರಿ ನಾಳೆ ಕಾರ್ಯಕ್ರಮ ಇದೆ ಅಂದಾಗ ಹಿಂದಿನ ದಿನವೇ ಊರಿಗೆ ಹೋದೆವು. ಅಲ್ಲಿ ರಾತ್ರಿ ಮಿಮಿಕ್ರಿ ಷೋ,ಒಂದು ನಾಟಕ ಎಲ್ಲವು ಇತ್ತು.. ನಾಟಕದಲ್ಲಿ ಒಬ್ಬಳೇ ಹೆಣ್ಣುಮಗಳು ಸತ್ಯ ಭಾಮೆ , ದ್ರೌಪತಿ, ಹೀಗೆ ಅನೇಕ ಪಾತ್ರಗಳನ್ನೂ ಮಾಡಿದ್ದಳು.. ಅಯ್ಯೋ ಅನ್ನೋ ಹಾಗೆ ಆಯ್ತು ಆಕೆ ಕುಣಿತ ನೋಡಿ...! ಆದರು ಇರುವಷ್ಟು ಕಾಲ ಸಕತ್ ಎಂಜಾಯ್ ಮಾಡಿ ನಕ್ಕೆವು.. ಮುಂಜಾನೆ ಊರು ಸುತ್ತಲು ಹೊರಟಾಗ ನನ್ನ ಕಸಿನ್ ಒಂದು ಮನೆಯನ್ನು ತೋರಿಸಿ ನೋಡು ಇದು ... ಮನೆ ಅಂದ್ಲು..ಅದರಲ್ಲೇನು ವಿಶೇಷ ಅಂದಾಗ ಆ ಹೆಣ್ಣುಮಗಳ ಕಥೆ ಕೇಳಿ ಒಂದು ರೀತಿಯಲ್ಲಿ ಕಸಿವಿಸಿ .
ಗಂಡನ ಜೊತೆಯಲಿ ಬಾಳ್ವೆ ಮಾಡದೆ ಊರಿಗೆ ಬಂದ ಹೆಣ್ಣುಮಗಳು ಕೊನೆಗೆ ತಂಗಿಯ ಗಂಡನ ಜೊತೆ ಕೂಡಿಕೆ ಮಾಡಿಕೊಂಡು ಬಿಟ್ಟಿದ್ದಳು. ಪರಿಣಾಮ ತಂಗಿ ಜೀವ ಬಿಟ್ಟಿದ್ದಳು. ತಂಗಿ ಬದುಕನ್ನು ಅಕ್ಕನೇ ನಾಶ ಮಾಡಿದ್ದನ್ನು ಕಂಡ ಹೆತ್ತ ಕರುಳು ಅದೇ ಚಿಂತೆಯಲ್ಲಿ ಜೀವ ಬಿಟ್ಟಿದ್ದರು. ಇಷ್ಟಾದರೂ ಆ ಹೆಣ್ಣುಮಗಳು ತನ್ನ ತಪ್ಪಿನ ಬಗ್ಗೆ ಸ್ವಲ್ಪವೂ ಬೇಸರಿಸದೆ ಬಡ್ಡಿ ವ್ಯವಹಾರ ಮಾಡಿ ಮೋಸ ಮಾಡಿ ಸಿಕ್ಕಿ ಹಾಕಿಕೊಂಡು... ಮುಂದಿನದ್ದು ಹೇಳುವ ಅಗತ್ಯ ಇಲ್ಲ ಅಂತ ಅಂದುಕೊಳ್ತೀನಿ.
ಹೆಣ್ಣುಮಕ್ಕಳ ಸ್ಥಿತಿಯನ್ನು ಹೆಚ್ಚು ಸೌಹಾರ್ದವಾಗಿ ಕಾಣುವ ಮನಸ್ತತ್ವ ನನಗಿದೆ . ಅದು ನನ್ನ ಅಮ್ಮನಿಂದ ಬಂದ ಬಳುವಳಿ . ಇದು ದೊಡ್ಡಸ್ತಿಕೆಯ ಅಥವಾ ಸೆಲ್ಫ್ ಪ್ರೈಸಿಂಗ್ ಅಲ್ಲ.
ನನಗೆ ಜ್ಞಾಪಕಕ್ಕೆ ಬರುವ ಮತ್ತೊಬ್ಬ ಹೆಣ್ಣು ಮಗಳು ಸಹ ಅದೇ ಊರಿಗೆ ಸೇರಿದವರು. ಒಳ್ಳೆಯ ಹುದ್ದೆ ಸಿಕ್ಕಿತು ಸರ್ಕಾರಿ ಕಚೇರಿಯಲ್ಲಿ . ಆದರೆ ಅದ್ಯಾಕೋ ಆಕೆ ಬದುಕನ್ನು ಅಲೆಮಾರಿಯಾಗೆ ಉಳಿಸಿಕೊಂಡು ಬಿಟ್ರು. ಒಂದು ಕಾಲದಲ್ಲಿ ಆಕೆಯಷ್ಟು ಆದರ್ಶದ ಅಕ್ಕ ಆ ಹಳ್ಳಿಯಲ್ಲಿ ಯಾರು ಇರಲಿಲ್ಲ ಅಂತಾನೆ ಹೇಳ ಬಹುದು. ಆಕೆಗಿದ್ದ ಗತ್ತು ಗೈರತ್ತು, ಪಾಪ್ಯುಲಾರಿಟಿ...ಎಲ್ಲವನ್ನು ಬಿಸಾಡಿ ಹೊರಟವರು ಹೊರಟೆ ಹೋದರು.. ಬದುಕನ್ನು ತಮ್ಮ ಕೈಯಾರೆ ಚೂರು ಚೂರು ಮಾಡಿಕೊಂಡು.. ಈಗ ಎಲ್ಲಿದ್ದರೋ ಗೊತ್ತಿಲ್ಲ.. ಯಾಕೆ ಇಂತಹ ಸ್ವಭಾವ ಎಂದು ಕೇಳುವ ಅಧಿಕಾರವು ನಮಗಿಲ್ಲ.. ಮಾನವ ಮನಸ್ಸು ಯಾರಿಗೂ ಅರ್ಥ ಆಗಲ್ಲ, ಹೆಣ್ಣಿನ ಹೆಜ್ಜೆಗಳು ಸಹ!
No comments:
Post a Comment