Sunday, March 30, 2014

ಮೌನವು ಮಾತಾಗಲೇ ಇಲ್ಲ !



ಖಂಡಿತ ನೆನಪಾಗುತ್ತಿರಲಿಲ್ಲ ಆ ಸಂಗತಿ.. ನನಗೆ ಆ ಪುಸ್ತಕ ಸಿಗದೇ ಹೋಗಿದ್ದಿದ್ದರೆ....! ಇಂದು ಬೆಳಿಗ್ಗೆ ಏನೋ ತಡಕಾಡುವಾಗ ಆ ಪುಸ್ತಕ, ಅದರಲ್ಲಿ ನಾನು ಎಂದೋ ಬರೆದು ಇಟ್ಟಿದ್ದ ಒಂದು ವಿಷ್ಯ ಓದಿದೆ... ಅದಕ್ಕಿಂತ ಅದನ್ನು ಬ್ಲಾಗಿಸ ಬೇಕು ಅನ್ನುವ ಆತುರ ಉಂಟಾಗಿದ್ದು ಸಹಜ... 
ಆಕೆ ಮತ್ತು ಆಟ ಇಬ್ಬರು ವೈದ್ಯರು. ಆಕೆ ಸ್ವಲ್ಪ ಜಾಸ್ತಿ ಅನ್ನಿಸುವಷ್ಟು ಗಂಭೀರ ಪ್ರವೃತ್ತಿ ಹೊಂದಿದ್ದರು  .. ಹಾಗಂತ ಆತ ಗಂಭೀರ ಇಲ್ಲ ಎಂದು ಇದರ ಅರ್ಥ ಅಲ್ಲ. ಆದರೆ ಅದ್ಯಾಕೆ ಆಕೆ ತಲೆ ಮೇಲೆ ಆಕಾಶ ಬಿದ್ದಂತೆ  ಇರ್ತಾರೆ  ಎಂದು ಅನ್ನಿಸಿದ್ದು ಉಂಟು... ಹಾಗಂತ ಅರ್ಥ ಆಗುವ ವಯಸ್ಸು ನನ್ನದಾಗಿ ಇರದ ಕಾರಣ ನಾನು ಅದರ ಬಗ್ಗೆ ಚಿಂತೆ ಮಾಡಿರಲಿಲ್ಲ. ಒಂದಷ್ಟು ವರ್ಷ ಕಳೆಯಿತು ... ಪ್ರಪಂಚ ಅರ್ಥ ಆಗುವ ವಯಸ್ಸು ಅದಕ್ಕಿಂತ ಮನಸ್ಸು ಬೆಳೆಯಿತು.. ಆ ಹೆಣ್ಣುಮಗಳ ಮೌನಕ್ಕೆ ಕಾರಣ ತಿಳಿಯಿತು... ಆಕೆಗೆ ಮದುವೆ ಆಗಿ ಬಹಳಷ್ಟು ವರ್ಷಗಳಾದರೂ ಸಹಿತ  ಮಕ್ಕಳು ಆಗಿರಲಿಲ್ಲ. ಮನೆಯಲ್ಲಿ ಇದರ ಬಗ್ಗೆ ಒಂದು ಬಗೆಯ ವಿಲಕ್ಷಣ ವಾತಾವರಣ. ಇದಕ್ಕೆ ಪೂರಕವಾಗಿ ಆಕೆಯ ವಾರಗಿತ್ತಿಗೆ ಒಂದು ಮಗು ಇತ್ತು... ಇದರಿಂದ ಮನೆಯಲ್ಲಿ ಅವಳಿಗೆ ಹೆಚ್ಚಿನ ಪ್ರಾಧಾನ್ಯತೆ. ಅಲ್ಲದೆ ತಾನು ಹಗಲು ರಾತ್ರಿ ದುಡಿದರು ಅವೆಲ್ಲ   ತನ್ನ ಕರುಳ ಬಳ್ಳಿಗೆ ಸೇರದೆ... ಈಕೆಯ ಮಗುವಿಗೆ ಸೇರುತ್ತದೆ ಎನ್ನುವ ಬೇಸರ... ಇವೆಲ್ಲದರ ಮೂರ್ತ ರೂಪ ಆಕೆಯ ಮೌನ ... ಅದಾದ ಸ್ವಲ್ಪ ಸಮಯದ ಬಳಿಕ ಆಕೆಗೆ ಒಬ್ಬಳು ಮಗಳು ಹುಟ್ಟಿದಳು. ಆಕೆಗೆ ಸಂತೋಷ ಪಡುವ ಕಾಲ ಮಾತ್ರ ಸಿಗಲೇ ಇಲ್ಲ.. ಅಷ್ಟರಲ್ಲಿ ಆತನಿಗೆ ಬೇರೊಬ್ಬಳ ಮೇಲೆ ಪ್ರೀತಿ ಉಂಟಾಗಿತ್ತು... ತನ್ನ ಪ್ರೀತಿಗಾಗಿ ವಿಚ್ಛೇದನ ನೀಡಿದ... ಇಷ್ಟಪಟ್ಟವಳೊಂದಿಗೆ   ವಿವಾಹವಾದರು.. ! ಕೋರ್ಟಿನ ಆಣತಿಯಂತೆ ಮಗು ... ಅಮ್ಮನ ಮಡಿಲು ಸೇರದೆ  ಅಪ್ಪನ ಆರೈಕೆಯಲ್ಲಿ ಬೆಳೆಯಿತು... ! ಹೀಗೆ ಆಕೆಯ ಮೌನವು ಮಾತಾಗಲೇ ಇಲ್ಲ ! 

Monday, March 24, 2014

ಹೇಳಿರ ಬಹುದೇನೋ?


ಅವತ್ತು ಆತ ಚಾಟ್ ಮಾಡುವ ಹೇಳಿದ ಸಂಗತಿ ನನಗೆ ಸಿಕ್ಕಾಪಟ್ಟೆ ನಗು ತರಿಸಿತ್ತು. ಕಾರಣ ಇಷ್ಟೇ ಒಮ್ಮೆ  ನನ್ನ ಇನ್ನೊಂದು ಬ್ಲಾಗ್ ವಾಸುದೇವ ದಲ್ಲಿ  ಪ್ರಕಟಿಸಿದ್ದ ಪೋಸ್ಟ್ ಬಗ್ಗೆ  ಗೆಳೆಯ ಅರಕಲ ಗೂಡು ಜಯಕುಮಾರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದರಂತೆ. ಆತ ಕಳೆದ ಆರುವರ್ಷಗಳಿಂದ ನನ್ನ ಬ್ಲಾಗ್ ವಾಸುದೇವ ನ್ನು ಓದುತ್ತ ಬಂದಿದ್ದಾರೆ. ಅದಾಗಿ ಸ್ವಲ್ಪ ಕಾಲದ ಬಳಿಕ ನಾವಿಬ್ಬರು ಫೇಸ್ ಬುಕ್ ಫ್ರೆಂಡ್ಸ್ ಆದೆವು.. ಒಳ್ಳೆ ಬಾಂಧವ್ಯ ಇಬ್ಬರಲ್ಲೂ . ಆತ ಸಹ ಪತ್ರಕರ್ತ.. ಆದರೆ ಎಲ್ಲಿಯೂ ಮತ್ತು ಎಂದಿಗೂ ನಾವಿಬ್ಬರು   ಚಾಟ್ ಮಾಡುವ ನಮ್ಮ ವೃತ್ತಿಯ ಬಗ್ಗೆ ಮಾತಾಡಿಲ್ಲ. ಹಾಸನದಲ್ಲಿನ ಅನೇಕ ಸಂಗತಿಗಳನ್ನು, ಅರಕಲಗೂಡಿನ ಅನೇಕ ಸಂಗತಿಗಳನ್ನು ಚಾಟಿನ ಮುಖಾಂತರ ಆಡುವ ಪದ್ಧತಿ ಇದೆ. ಹೀಗೆ ಆತ ಚಾಟ್ ಮಾಡುವಾಗ  ಒಂದೊಮ್ಮೆ ನನ್ನ ಪೋಸ್ಟನ್ನು ಕಟುವಾಗಿ ಟೀಕಿಸಿದ್ದೆ ಎಂದು ಹೇಳಿ ಸಾರಿ ಕೇಳಿದ್ದ ಪುಣ್ಯಾತ್ಮ ! ತಡೆಯಲಾದಷ್ಟು ನಗೆ ಬಂದಿತ್ತು. ಅತಿ ಹೆಚ್ಚು ಮೌನಿ, ಅತಿಯಾದ ಭಾವುಕ. ಆತನ ಜೊತೆ ನಾ ಮಾತಾಡೆ ಇಲ್ಲ ಆದರು ಮಾಡಿದ ಚಾಟ್ನಿಂದ ಮನಸ್ಥಿತಿ   ಅರ್ಥ ಆಗುತ್ತಲ್ಲ  .. ಒಂದು ಒಂದೆರಡು ವಾಕ್ಯಕ್ಕೊಂದು sorry ಇರಲೇ ಬೇಕು.
ಇತ್ತೀಚಿಗೆ   ಚಾಟ್ ಮಾಡುವಾಗ ಜಿವಿಜೆ (ಆತ ನನ್ನ ಸಂಬೋಧಿಸಿವುದು ಹೀಗೆ )  ನಿಮಗೊಂದು ಆಶ್ಚರ್ಯಕರ ಸಂಗತಿ ಹೇಳ ಬೇಕಿದೆ ಅಂದ್ರು . ರಾತ್ರಿ ಸುಮಾರು 9 :30  ಸಮಯ .. ನಾನು ಮಾರನೆಯ ದಿನಕ್ಕೆ ಬೇಕಾದ ರೋಚಕ ಸಿನಿಮಾ ಸುದ್ದಿಗಳನ್ನು ಒಂದು ಕಡೆ ಸೇರಿಸಿ ಇಡ್ತಾ ಇದ್ದೆ. ಹೇಳಿ ಅಂದೇ.. ಆತ ತನ್ನ  ಬದುಕಿನಲ್ಲಿ   ಕಳಚಿ ಹೋಗಿದ್ದ ಕೊಂಡಿಯೊಂದನ್ನು ಸೇರಿಸಿದ್ದರು. ಹೈದರಾಬಾದಿನ ಒಬ್ಬಾಕೆ ತನ್ನ ಇವರಿಗೆ ಮೆಸೇಜ್ ಬಾಕ್ಸ್ ನಲ್ಲಿ ಒಂದು ಮೆಸೇಜ್ ಹಾಕಿದ್ದರು. ಆಕೆ ಹೈದರಾಬಾದ್ ಹೆಣ್ಣು ಮಗಳಾಗಿದ್ದರು, ಆಕೆ ಕುಟುಂಬ ದಲ್ಲಿ ಕೊಂಡಿಗಳು ಕಳಚಿದ್ದವು. ಆ ಕಳಚಿದ ಕೊಂಡಿ ಹಾಸನದ ಹಳ್ಳಿಯಲ್ಲಿ ಇದೆ ಎನ್ನುವ ಮಾಹಿತಿ ಆಕೆಗಿತ್ತು. ಆ ಗೃಹಿಣಿಗೆ ಅರಕಲಗೂಡು ಅನ್ನುವ ಹೆಸರು ನೋಡಿ ಆ ಹೆಸರಲ್ಲಿ ಇರುವವರಿಗೆ ಮೆಸೇಜ್ ಮಾಡಿದ್ದರು. ಆಗ ಈ ಪತ್ರಕರ್ತ ಮಿತ್ರ ಆಕೆಗಾಗಿ ಸಹಾಯಿಸಲು ಸಿದ್ಧ ಆದಾಗ ಆ ಹೆಣ್ಣುಮಗಳು ಹೇಳಿದಂತಹ ಕುಟುಂಬದ ತುಣುಕು ಸಿಕ್ಕು , ಅವರೀಗ   ಒಂದಾಗಿದ್ದಾರೆ.ಇವೆಲ್ಲದರ ಬಗ್ಗೆ ಹೇಳುತ್ತಾ ಆ ಕುಟುಂಬಗಳನ್ನು ಒಂದು ಮಾಡಲು ಪಟ್ಟ ಪಡಪಾಟಲಿನ   ಬಗ್ಗೆ ತಿಳಿಸುತ್ತಾ ಹೋದರು.. ಅದರ ಜೊತೆಗೆ ಆ ಹೆಣ್ಣುಮಗಳು ಫೇಸ್ ಬುಕ್ ನಿಂದ  ಈಕೆಗೆ ನನ್ನ ಮಿತ್ರ ಸಿಕ್ಕಿದ್ದಲ್ಲದೆ ಎಂದೋ ಕಳೆದು ಹೋಗಿದ್ದ ಮೂಲವು ಸಹ ಆಕೆಗೆ ದೊರಕಿತ್ತು... ಮೂಲಗಳನ್ನು ಹುಡುಕುತ್ತ ಹೊರಟರೆ ನಮಗೆ ಒಳ್ಳೆಯ ಅತ್ಯಂತ ಸಿಕ್ಕರೆ   ಮತ್ತು ಆ ಮೂಲ ಹುಡುಕಲು ಜಯಕುಮಾರ್ ರಂತಹ ಒಳ್ಳೆಯ ಮನದವರು ದೊರೆತರೆ ಎಲ್ಲವು ಶುಭಾಂತ್ಯ.. ! ಇಲ್ಲದೆ ಇದ್ದರೆ  ಕೋಳಿ ತಿಪ್ಪೆ ಕೆದಕಿದಂತೆ ಆಗುತ್ತದೆ... ನದಿ ಮೂಲ-ನಮ್ಮಗಳ ಮೂಲ ಹುಡುಕ ಬಾರದು ಅಂತಾರೆ ತಿಳಿದೋರು.. ಅಂತ್ಯದ  ಬಗ್ಗೆ ಯಾರಿಗೂ ಅರಿವಿಲ್ಲದ ಕಾರಣ ಹೀಗೆ ಹೇಳಿರ ಬಹುದೇನೋ? 

Friday, March 21, 2014

ಅಕಾಲಿಕ ಮರಣ....




ಕೆಲವು ಘಟನೆಗಳು ನಮ್ಮನ್ನು ತೀವ್ರವಾಗಿ ಕಾಡುತ್ತಲೇ ಇರುತ್ತದೆ.. ಒಮ್ಮೆ ನಾನು ಈ  ವಿಷಯದ ಬಗ್ಗೆ ಬರೆದಿದ್ದೆ ಅಂತ ನೆನಪು.. ಪ್ರಾಯಶಃ ನನ್ನ ಇನ್ನೊಂದು ಬ್ಲಾಗ್ 'ವಾಸುದೇವ' ದಲ್ಲಿ ಬರೆದಿದ್ದರು ಬರೆದಿರ ಬಹುದು. ಆದರು ಮತ್ತೊಮ್ಮೆ  ಆ ವಿಷ್ಯ ಬರೆಯಲೇ ಬೇಕು ಅಂತ ಅನ್ನಿಸಿದೆ..
ನಾನು ಪ್ರಿಯಾಂಕ ಪತ್ರಿಕೆಯಲ್ಲಿ ರೆಗ್ಯುಲರ್ ... ಆಗಿದ್ದಾಗ ನನ್ನ ಕಲೀಗ್ ಅವರ ಗಂಡನ ಮನೆಯ ಕಡೆಯ ಕಥೆ ಹೇಳ್ತಾ ಇರೋರು.. ಮಂಡ್ಯದ ಹೆಣ್ಣುಮಗಳ ಆಕೆ.ಮದುವೆ ಆದದ್ದು  ಕುಣಿಗಲ್ ಗಂಡಿನ ಜೊತೆ..ಅವರನ್ನು ಸದಾ ರೇಗಿಸೋ ನನ್ನ ಗುಣವನ್ನು ಆ ಹೆಣ್ಣುಮಗಳು ಪ್ರೀತಿಯಿಂದಾ ಸ್ವೀಕರಿಸಿ ಬಿಟ್ಟಿದ್ದರು..
ಆಕೆಯ ಗಂಡನ ಮನೆಯವರಲ್ಲಿ ಒಬ್ಬರು ಸಾಕಷ್ಟು ಜಮೀನು ಹೊಂದಿರುವ ಭೂ ಮಾಲೀಕರು. ಶುದ್ಧಾನುಶುದ್ಧ ಜುಗ್ಗ  ಸಂಸಾರ . ಆ ದಂಪತಿಗಳಿಗೆ ಗಂಡು ಮಕ್ಕಳು .. ಆ ಮಕ್ಕಳು ವಯಸ್ಸಿಗೆ ಬಂದ ಸ್ವಲ್ಪ ದಿನದಲ್ಲೇ ಒಂದು ಬಗೆಯ ಕಾಯಿಲೆಯಿಂದ ಸತ್ತು ಹೋಗ್ತಾ ಇದ್ರು. ಅಂತಿಮವಾಗಿ ಒಬ್ಬನಿದ್ದ ಅವನಿಗೆ ನನ್ನ ಕಲೀಗ್ ಕಸಿನ್ ನ್ನು ಕೊಟ್ಟು ಮದುವೆ ಮಾಡಿದ್ರು.. ಆತನಿಗೂ  ಸಹ  ಮದುವೆಯಾದ ಸ್ವಲ್ಪ ದಿನಕ್ಕೆ ಆತನ ಅಣ್ಣಂದಿರಿಗೆ ಬಂದಂತಹ ಕಾಯಿಲೆ ಬಂದು ಸತ್ತೆ ಹೋದ ... ನೇರವಾಗಿ ಹೇಳ ಬೇಕು ಅಂದ್ರೆ ಆತನ ಹೆಂಡತಿ ಕನ್ಯೆಯಾಗಿಯೇ ಉಳಿದು ಬಿಟ್ಟಳು ಮದುವೆ ಆದರು!
ಸರಿ ದಫನ್ ಸಮಯಕ್ಕೆ ನನ್ನ ಕಲೀಗ್ ಹೋಗಿ ಬಂದ್ರು , ಅದಾದ ಬಳಿಕ ಬದುಕಲ್ಲಿ ಏನೇನು ಸಿಗದ ಆತನ ಹೆಂಡತಿಗೆ ಜಮೀನು ಕೊಡಿಸುವ ಪ್ರಯತ್ನ ಮಾಡಿದರು ,..ಆದರೆ ಆ ದಂಪತಿಗಳು ಸ್ವಲ್ಪ ಜಮೀನು ಕೊಡಲು ಸಮ್ಮತಿಸಲೇ ಇಲ್ಲ...ತುಂಬಾ ಬೇಜಾರಾಗಿದ್ದರು ನನ್ನ ಕಲೀಗ್..
ನಾನು ಯಾಕ್ರೀ ಇಂತಹ ಕಾಯಿಲೆ ಬಂದದ್ದು,ಈಗಂತೂ ಎಷ್ಟೆಲ್ಲಾ ಒಳ್ಳೆಯ ವೈದ್ಯಕೀಯ ಸೌಲಭ್ಯ ಇದೆ   ಅಂತ ಕೇಳಿದಾಗ ಅವರೊಂದು ಘಟನೆ ಹೇಳಿದರು...
ಆಮನೆಯ ಯಜಮಾನ ಅಂದ್ರೆ ಅಕಾಲಿಕ ಮರಣ ಹೊಂದಿದರಲ್ಲ ಅವರ ತಂದೆಗೆ ಬೇಕಾದಷ್ಟು ಜಮೀನು ಇತ್ತು.. ಹಾಕಿದ ಬೆಳೆ ಕೈಗೆ ಚೆನ್ನಾಗೆ ಬರುತ್ತಿತ್ತು..ಆತನ ತೋಟದಲ್ಲಿ ಬಿದಿರಿನ ಮೆಳೆ ಇತ್ತು . ಅದರಲ್ಲಿ ಒಮ್ಮೆ ಒಂದಷ್ಟು ಕೋತಿಗಳ ಫ್ಯಾಮಿಲಿ ಬಂದು ಸೇರಿ ಬಿಡ್ತು. ಅವುಗಳಿದ್ದ ಕಡೆ ತಂಟೆ ಇದ್ದದ್ದೇ.. ಇದ್ದ ಬೆಲೆಯನ್ನು ನಾಶ ಮಾಡುತ್ತಿತ್ತು.. ಆ ರೈತ ಸಿಟ್ಟಿಗೆದ್ದ.. ಒಂದು ದಿನ ಸಮಯನೋಡಿ  ಆ ಮೇಲೆಗೆ ಒಂದರ್ಥದಲ್ಲಿ ಕೋಟೆಯಂತೆ ಕಟ್ಟಿ ಅದಕ್ಕೆ ಚೆನ್ನಾಗಿ ಸೀಮೆ ಎಣ್ಣೆ ಸುರಿದು ಬೆಂಕಿ ಹತ್ತಿಸಿ ಬಿಟ್ಟ.. ಅಲ್ಲಿಂದ ಯಾವ ಕೋತಿಯು ಹೊರ ಬರದಂತೆ ಮಾಡಿದ್ದ ಆತ.. ಆ ಬೆಂಕಿಗೆ ಅಲ್ಲಿದ್ದ ಕೋತಿಗಳು ಉರಿದು ಬೂದಿ ಆದವು..ಅದಾದ ಸ್ವಲ್ಪ ವರ್ಷಗಳ ಬಳಿಕ ಇವರ ಮನೆಯಲ್ಲಿ ವಯಸ್ಸಿಗೆ ಬಂದ ಯುವಕ ಕೋತಿಯಂತೆ ಕುಬ್ಜನಾಗಿ ವಿಚಿತ್ರ ಕಾಯಿಲೆಯಿಂದ ನರಳಿ ಸತ್ತು ಹೋದ.. ಇದು ಕೊನೆ ಮಗನ ತನಕ ನಡೆಯಿತು..
ದೇವರು , ದೆವ್ವ, ಶಾಪ, ಪುನರ್ ಜನ್ಮ ಅಂತ ನಂಬಿಕೆ ಇಲ್ಲದ ಓದುಗರು ಇದನ್ನು ಯಾವ ರೀತಿ   ಬೇಕಾದರೂ ತಗೋ ಬಹುದು, ಆದರೆ ಆಕೆ  ಹೇಳಿದ ಸಂಗತಿ ಆದ ಅನೇಕ ವರ್ಷಗಳ ಬಳಿಕ ಈ ಮನೆಯಲ್ಲಿ ಸಂತಾನವೇ ನಾಶ ಆಯ್ತು ಅದಂತೂ ಸತ್ಯ..

Thursday, March 20, 2014

ಹೊಗಳಿಕೆ ....



ಬದುಕಿನಲ್ಲಿ ಹೊಗಳಿಕೆ ಅನ್ನೋದು ಸಂಜೀವಿನಿ ರೀತಿಯಲ್ಲಿ ಕೆಲಸ ಮಾಡುತ್ತೆ.. ಸತ್ತೆ ಹೋದೆವು ಅನ್ನುವ ಅನೇಕ ಜೀವಗಳನ್ನು ಬದಕಿಸಿ ಅವರು ಅಪರೂಪದ ಸಾಧನೆ ಮಾಡುವಂತೆ ಮಾಡುತ್ತೆ ಹೊಗಳಿಕೆ. ನಿಜ ಅತಿಯಾದರೆ ಅಮೃತವು ಸಹ  ವಿಷ.. ಆದರೆ ಹಾಗಂತ ಹೊಗಳದೆ ಇದ್ದರೆ ಅದು ಸಹ ತಪ್ಪು..ಸಾಮಾನ್ಯವಾಗಿ ಸದಾ ಮರ್ಯಾದೆ ಪಡೆದ ಮಂದಿಗೆ ಹೊಗಳಿಕೆ  ಅಂದ್ರೆ ನಗಣ್ಯ. ಅದೇ ಅದರ ಅಗತ್ಯ   ಇರುವವರಿಗೆ ನಾವು ಕೊಡೋದೇ ಇಲ್ಲ.


 ನನ್ನ ಅಕ್ಕನ ಮಗಳು ಕಲ್ಪ.. ಇಂಜಿನಿಯರಿಂಗ್   ಓದುತ್ತಿದ್ದಾಳೆ .. ನನಗೆ ಅವಳೆಂದರೆ ಒಂದು ಹಿಡಿ ಹೆಚ್ಚೇ ಪ್ರೀತಿ. ಅವಳ ಜೊತೆಗಾತಿ ಮತ್ತು ಪಕ್ಕದ   ಮನೆಯ ಹೆಣ್ಣುಮಗಳು ರಶ್ಮಿ. ಅವಳು ಸಹ ಇಂಜಿನಿಯರ್  ಈಗಷ್ಟೇ ಮುಗಿಸಿರುವವಳು. ಇಬ್ಬರು ಒಳ್ಳೆ ಫ್ರೆಂಡ್ಸ್.. ರಶ್ಮಿ ಅವಳ ಕ್ಲಾಸ್ಮೇಟ್ ಒಬ್ಬಳ ಬಗ್ಗೆ ಒಮ್ಮೆ ಹೇಳಿದುದನ್ನು ಕಲ್ಪ ನನ್ನ ಹತ್ರ ಹೇಳಿದಳು..
ಆ ಹುಡುಗಿ ಹುಟ್ಟಿನಿಂದ ರೂಪವಂಚಿತೆ.. ಹಾಗೆಂದು ನೋಡೋಕೆ ಚಂದ ಇಲ್ಲ ಅಂತಲ್ಲ.. ಅತಿ ಸಾಧಾರಣ ರೂಪ. ಆದರೆ ಮನೆಯಲ್ಲಿ ಆಕೆ ಬಗ್ಗೆ ನಿರ್ಲಕ್ಷ್ಯ  . ತಾಯಿತಂದೆ ಯಾವಾಗ ತಮ್ಮ ಮಕ್ಕಳನ್ನೇ ಈ ರೀತಿ ಕಾಣ್ತಾರೋ ಆಗ ಸಮಾಜ ಅಂತಹವನ್ನು ಎಲ್ಲಿ ತಾನೇ ಪ್ರೀತಿಸುತ್ತೇ. ಆ ಹುಡುಗಿ ಒಂದು ಗುಣ ಅಂದ್ರೆ ಯಾರೇ ಆಗಲಿ ಹೇಯ್ ನೀನು ಇವತ್ತು ಚಂದ ಇದ್ದೀಯ   ಅಂದ್ರೆ ಸಾಕು ಅಂದೆಲ್ಲ ಅವರ ಹಿಂದೇನೆ.. ಆ ಪರಿ ಮುಗ್ಧತೆ.ತಾಯಿತಂದೆ ಎಷ್ಟೇ  ಹಿಂದೆ ತಳ್ಳಿದರು ಆಕೆ ಓದಿನಲ್ಲಿ ಮುಂದೆ.. ಈಗ ಲೈಫ್ ಸೆಟ್ ಆಗಿದೆ..


ಇಂತಹ ಹೆಣ್ಣುಮಕ್ಕಳು ಒಂದು ಕಡೆ , ನನ್ನ ಮನದಲ್ಲಿ ಸದಾಖೇದ  ಉಂಟು ಮಾಡುವ ಹುಡುಗಿ ಒಬ್ಬಳ ಬಗ್ಗೆ ಹೇಳ್ತೀನಿ.. ನಾನಾಗ ಡಿಗ್ರಿಯಲ್ಲಿ   ಇದ್ದೆ. ನನ್ನ ಗೆಳತಿ ಅವಳ ಮನೆಯ ಪಕ್ಕದ ಮನೆಯ ಹುಡುಗಿಯ ಪರಿಚಯ ಮಾಡಿಕೊಟ್ಟಳು ಒಮ್ಮೆ.. ಮುದ್ದಾಗಿದ್ದಳು ಆ ಹುಡುಗಿ.. ಅವಳಿಗಿಂತ ನೂರುಪಟ್ಟು ಮಧುರವಾಗಿತ್ತು ಆಕೆಯ ಕಂಠ .. ತಾಯಿ ಹೊರಗಡೆ ದುಡಿದು ಬರುತ್ತಿದ್ದರು. ಮಗಳ ಬಗ್ಗೆ ಸದಾ ಅನುಮಾನ. ಒಂದು ನಿಮಿಷವೂ ಬಿಡುವಿಲ್ಲದ ಜೀವನ ಆಹುಡುಗಿಯದ್ದು.. ಮಾಡುವ ಕೆಲ್ಸಕ್ಕೆ ಸಣ್ಣ ಮೆಚ್ಚುಗೆಯೂ ಇಲ್ಲದ ಪರಿಸ್ಥಿತಿ.


ಅಂತಹ ಹುಡುಗಿ ತಾಯಿ ಆರ್ಕೇಸ್ಟ್ರಾ ಇಟ್ಟಿದ್ದರು. ಅದರಲ್ಲಿ ಹಾಡುವ ಜೊತೆಗಾರ ಆಕೆ ಮನ ಗೆದ್ದಿದ್ದ.. ಎಷ್ಟೇ ಮುಚ್ಚಿಟ್ಟರು ಪ್ರೀತಿಯ ಹೂವಿನ ಘಮಲು ಆಕೆ ತಾಯಿಯ ಮೂಗಿಗೆ ಬಡಿಯಿತು.. ರಾತ್ರಿ ಇಡಿ ಆ ಹುಡುಗಿಗೆ ಚಿತ್ರಹಿಂಸೆ.. ಮಾರನೆಯ ದಿನ ಆ ಹೆಣ್ಣುಮಗಳು ನೇಣಿಗೆ ಮೊರೆಹೊಕ್ಕಿದ್ದಳು .. ಸಣ್ಣ ಹೊಗಳಿಕೆ, ಸಾಂತ್ವಾನ ಉತ್ತಮ ಕಲಾವಿದೆಯನ್ನು ನೀಡುತ್ತಿತ್ತು.. ಆದರೆ ಹಾಗಾಗಲಿಲ್ಲ ...! 

Tuesday, March 18, 2014

ಹೆಜ್ಜೆಗಳು..



ಇತ್ತೀಚೆಗೆ ಕೋಲಾರದ  ಹಳ್ಳಿಗೆ ಹೋಗಿದ್ದೆ. ನನ್ನ ತಾಯಿಯ ತವರೂರು ಆ ಹಳ್ಳಿ. ಅವರು ಓದಿದ ಶಾಲೆಗೇ ಐವತ್ತರ ಸಂಭ್ರಮ. ಅಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ರಮೇಶ್ ಕುಮಾರ್, ಡಿ ಕೆ ಶಿವಕುಮಾರ್,ಸುದರ್ಶನ್ ಹೀಗೆ ರಾಜಕೀಯ ಗಣ್ಯರು ಸೇರಿದ್ದರು. ಅವೆಲ್ಲಕ್ಕಿಂತ ಎಲ್ಲರಿಗು ತಮ್ಮ ಬಾಲ್ಯದ ಗೆಳೆಯ ಗೆಳತಿಯರ ಜೊತೆ ಮಾತನಾಡುವ ಸಂಭ್ರಮ. ನಾವೆಲ್ಲಾ ಅವರುಗಳ ಖುಷಿಯನ್ನು ನೋಡುತ್ತಾ ನಾವು ನಮ್ಮ ಮಟ್ಟಿಗೆ ಎಂಜಾಯ್ ಮಾಡಿಕೊಳ್ತಾ ಇದ್ವಿ. ನನ್ನ ದೊಡ್ಡ ಸೋದರ ಮಾವ ಆ ಊರಲ್ಲಿ ನೆಲೆಸಿದ್ದರು. ಅವರಿಲ್ಲ ಈಗ ಆದರೆ ಅತ್ತೆ ಅಲ್ಲೇ ಇದ್ದಾರೆ. ನಾನು ಕಂಡಂಗೆ ನಮ್ಮ ಮನೆಗಳಲ್ಲಿ ಹೇಳಿಕೊಟ್ಟಿರುವ   ಮೊದಲ ಪಾಠ ಸರಳ ಜೀವನ.. ಉತ್ತಮ ಆಲೋಚನೆ. ಎಷ್ಟೇ ಇದ್ದರು ಆಡಂಬರದ ಬದುಕು ನಮ್ಮ ಬದುಕಲ್ಲಿ ಪ್ರಭಾವ ಬೀರಿಲ್ಲ.

ಸರಿ ನಾಳೆ ಕಾರ್ಯಕ್ರಮ ಇದೆ ಅಂದಾಗ ಹಿಂದಿನ ದಿನವೇ ಊರಿಗೆ ಹೋದೆವು. ಅಲ್ಲಿ ರಾತ್ರಿ ಮಿಮಿಕ್ರಿ ಷೋ,ಒಂದು ನಾಟಕ ಎಲ್ಲವು ಇತ್ತು.. ನಾಟಕದಲ್ಲಿ ಒಬ್ಬಳೇ ಹೆಣ್ಣುಮಗಳು ಸತ್ಯ ಭಾಮೆ  , ದ್ರೌಪತಿ, ಹೀಗೆ ಅನೇಕ ಪಾತ್ರಗಳನ್ನೂ ಮಾಡಿದ್ದಳು.. ಅಯ್ಯೋ ಅನ್ನೋ ಹಾಗೆ ಆಯ್ತು ಆಕೆ ಕುಣಿತ ನೋಡಿ...! ಆದರು ಇರುವಷ್ಟು ಕಾಲ ಸಕತ್ ಎಂಜಾಯ್ ಮಾಡಿ ನಕ್ಕೆವು.. ಮುಂಜಾನೆ ಊರು ಸುತ್ತಲು ಹೊರಟಾಗ ನನ್ನ ಕಸಿನ್ ಒಂದು ಮನೆಯನ್ನು ತೋರಿಸಿ ನೋಡು ಇದು ... ಮನೆ ಅಂದ್ಲು..ಅದರಲ್ಲೇನು ವಿಶೇಷ ಅಂದಾಗ ಆ ಹೆಣ್ಣುಮಗಳ ಕಥೆ ಕೇಳಿ ಒಂದು ರೀತಿಯಲ್ಲಿ ಕಸಿವಿಸಿ .


ಗಂಡನ ಜೊತೆಯಲಿ ಬಾಳ್ವೆ ಮಾಡದೆ ಊರಿಗೆ ಬಂದ ಹೆಣ್ಣುಮಗಳು ಕೊನೆಗೆ  ತಂಗಿಯ ಗಂಡನ ಜೊತೆ ಕೂಡಿಕೆ ಮಾಡಿಕೊಂಡು ಬಿಟ್ಟಿದ್ದಳು. ಪರಿಣಾಮ ತಂಗಿ ಜೀವ ಬಿಟ್ಟಿದ್ದಳು. ತಂಗಿ ಬದುಕನ್ನು ಅಕ್ಕನೇ ನಾಶ ಮಾಡಿದ್ದನ್ನು ಕಂಡ ಹೆತ್ತ ಕರುಳು ಅದೇ ಚಿಂತೆಯಲ್ಲಿ ಜೀವ ಬಿಟ್ಟಿದ್ದರು. ಇಷ್ಟಾದರೂ ಆ ಹೆಣ್ಣುಮಗಳು ತನ್ನ ತಪ್ಪಿನ ಬಗ್ಗೆ ಸ್ವಲ್ಪವೂ ಬೇಸರಿಸದೆ ಬಡ್ಡಿ ವ್ಯವಹಾರ ಮಾಡಿ ಮೋಸ ಮಾಡಿ  ಸಿಕ್ಕಿ ಹಾಕಿಕೊಂಡು... ಮುಂದಿನದ್ದು ಹೇಳುವ ಅಗತ್ಯ ಇಲ್ಲ ಅಂತ ಅಂದುಕೊಳ್ತೀನಿ.
ಹೆಣ್ಣುಮಕ್ಕಳ ಸ್ಥಿತಿಯನ್ನು ಹೆಚ್ಚು ಸೌಹಾರ್ದವಾಗಿ ಕಾಣುವ ಮನಸ್ತತ್ವ ನನಗಿದೆ . ಅದು ನನ್ನ ಅಮ್ಮನಿಂದ ಬಂದ ಬಳುವಳಿ . ಇದು ದೊಡ್ಡಸ್ತಿಕೆಯ ಅಥವಾ ಸೆಲ್ಫ್ ಪ್ರೈಸಿಂಗ್ ಅಲ್ಲ.

ನನಗೆ ಜ್ಞಾಪಕಕ್ಕೆ ಬರುವ ಮತ್ತೊಬ್ಬ ಹೆಣ್ಣು ಮಗಳು ಸಹ ಅದೇ ಊರಿಗೆ ಸೇರಿದವರು. ಒಳ್ಳೆಯ ಹುದ್ದೆ ಸಿಕ್ಕಿತು ಸರ್ಕಾರಿ ಕಚೇರಿಯಲ್ಲಿ . ಆದರೆ ಅದ್ಯಾಕೋ ಆಕೆ ಬದುಕನ್ನು ಅಲೆಮಾರಿಯಾಗೆ   ಉಳಿಸಿಕೊಂಡು ಬಿಟ್ರು. ಒಂದು ಕಾಲದಲ್ಲಿ ಆಕೆಯಷ್ಟು ಆದರ್ಶದ ಅಕ್ಕ ಆ ಹಳ್ಳಿಯಲ್ಲಿ ಯಾರು ಇರಲಿಲ್ಲ ಅಂತಾನೆ ಹೇಳ ಬಹುದು. ಆಕೆಗಿದ್ದ ಗತ್ತು ಗೈರತ್ತು, ಪಾಪ್ಯುಲಾರಿಟಿ...ಎಲ್ಲವನ್ನು ಬಿಸಾಡಿ ಹೊರಟವರು ಹೊರಟೆ ಹೋದರು.. ಬದುಕನ್ನು ತಮ್ಮ ಕೈಯಾರೆ ಚೂರು ಚೂರು ಮಾಡಿಕೊಂಡು.. ಈಗ ಎಲ್ಲಿದ್ದರೋ ಗೊತ್ತಿಲ್ಲ.. ಯಾಕೆ ಇಂತಹ ಸ್ವಭಾವ ಎಂದು ಕೇಳುವ ಅಧಿಕಾರವು ನಮಗಿಲ್ಲ.. ಮಾನವ ಮನಸ್ಸು ಯಾರಿಗೂ ಅರ್ಥ ಆಗಲ್ಲ, ಹೆಣ್ಣಿನ  ಹೆಜ್ಜೆಗಳು ಸಹ!  

Saturday, March 1, 2014

ಬ್ಲಂಡರ್



ಕೆಲವು ಬಾರಿ ಬೇಡ ಇನ್ನು ಸಾಕು ಎಂದು ನಿರ್ಧರಿಸಿ ಬಾಂಧವ್ಯಗಳಿಂದ ದೂರವಾಗಲು ಪ್ರಯತ್ನಿಸಿದರೂ   ಸಹ ನನ್ನ ಬಾಳಲ್ಲಿ ಅಂತಹದ್ದೇನು ನಡೆಯಲ್ಲ. ಯಾಕೆಂದ್ರೆ ಮತ್ತೆ ಮತ್ತೆ ಅದು ನನ್ನನ್ನು ಸುತ್ತಿ ಕೊಳ್ಳುತ್ತದೆ. ಜತವಾಗಿ ನನ್ನ ಜೊತೆ ಸಾಗುತ್ತದೆ. ಮತ್ತಷ್ಟು ಹಸಿರಾಗಿ ಬೆಳೆಯುತ್ತದೆ. ಈ ವಿಧಕ್ಕೆ ಏನಂತ ಕರೀತಾರೋ ದಾರ್ಶನಿಕರು ಗೊತ್ತಿಲ್ಲ. ಯಾಕೆಂದ್ರೆ ಇಂತಹ  ಅನುಬಂಧಗಳು ನನ್ನನ್ನು ಮತ್ತೆ ಮತ್ತೆ ಆವರಿಸುತ್ತಲೇ ನನ್ನನು ಮಾನಸಿಕವಾಗಿ ಬೆಳೆಸಿದೆ.. ನನ್ನ ಅನೇಕ ಬಗೆಯ ಸಣ್ಣತನಗಳನ್ನು ದೂರ ಮಾಡಿದೆ..ನನ್ನನ್ನು ಹೆಚ್ಚು ನಿರ್ಲಿಪ್ತಳನ್ನಾಗಿಸಿದೆ. ಮುಖ್ಯವಾಗಿ  ನನ್ನ ಒಳಗಿನ ನನ್ನನ್ನು ಸಾಯಿಸದೇ ಉಳಿಸಿದೆ.
ನಿನ್ನೆ  ಕಿರುತೆರೆಯ ನಟಿಯೊಬ್ಬಾಕೆಗೆ ಸಂದರ್ಶನ ಮಾಡುವ ಕೆಲಸ. ಫೋನಿನ ಮುಖಾಂತರ ಎಲ್ಲ ವಿಷಯವನ್ನು ಹೊರಗೆಡವಿದ್ದಾಯಿತು  . ಪಾತ್ರಗಳನ್ನು  ಮಾಡಿರುವುದು ಬೆರಳೆಣಿಕೆಯಷ್ಟು ಮಾತ್ರ . ಆದರೆ ಅವುಗಳನ್ನೆಲ್ಲ ಮೀರಿರುವ ಸಾಧನೆ ಭರತನಾಟ್ಯದಲ್ಲಿ ಮಾಡಿದ್ದಾರೆ . ಯುಎಸ್ ನಲ್ಲಿ ಬರೋಬ್ಬರಿ ಹದಿನೈದು ವರ್ಷಗಳ ಕಾಲ ಆಕೆಯು ಕಲೆಯ ಸೇವೆ ಮಾಡಿ ಇಲ್ಲಿಗೆ ಬಂದು ಗಂಡಮಕ್ಕಳ  ನೆಮ್ಮದಿಯ ಸಂಸಾರದಲ್ಲಿ ಬದುಕನ್ನು ಆನಂದದಿಂದ ಕಳೆಯುತ್ತಿದ್ದಾರೆ. ಜೊತೆಗೆ ಕಲಾ ಸೇವಾ ಸೌಭಾಗ್ಯ.
ನಿಜ ಹೇಳಬೇಕು ಅಂದ್ರೆ ಆಕೆಯ ಜೊತೆ ಮಾತಾನಾಡೋಕೆ ಕೊಟ್ಟ ಸಮಯ ಬೇರೆ ಆದರೆ ಆಕೆ ಜೊತೆ ಹರಟಲು ಸಾಧ್ಯ ಆಗಿದ್ದು ನಿನ್ನೆ. ಮಾತಾಡಿದ ಬಳಿಕ ಆಕೆ ತುಂಬಾ ಇಂಪ್ರೆಸ್ ಆಗಿದ್ರು ( ದೊಡ್ಡಸ್ತಿಕೆ ಅಲ್ಲ.. ದಯವಿಟ್ಟು ) . ಈಗಾಗಲೇ ಹಲವಾರು ಸಂದರ್ಶನಗಳು ಆಗಿವೆ, ಆದರೆ ನಿಮ್ಮಂತೆ ಕಂಫರ್ಟಬಲ್ ಫೀಲ್ ಆಗುವ ವಾತಾವರಣ, ಪ್ರಶ್ನೆಗಳ ಶೈಲಿ ಎಲ್ಲೂ- ಯಾರು ಕೇಳಲಿಲ್ಲ ..ಎಂದು ಖುಷಿಯಾಗಿ ಹೇಳಿದ್ರು .. ಯಾಕೋ ಮುಜುಗರ ಆಯ್ತು.. ಆದರು ಕೇಳಲೇ ಬೇಕಾಗುತ್ತೆ , ಸರಿ ಇಂದು ಮತ್ತೆ ಆಕೆ ನನಗೆ ಫೋನಿಸಿ ಬೇರೆ ಪತ್ರಿಕೆಯಲ್ಲಿ ಬಂದ ತನ್ನ ಲೇಖನದ ತಿಳಿಸುತ್ತಾ ಅದರಲ್ಲಿನ ಬ್ಲಂಡರ್ ಗಳ ಬಗ್ಗೆ ಹೇಳುತ್ತಾ ಬೇಜಾರಾದರು .ಆಕೆಯ ಪತಿಯ ಹೆಸರನ್ನೇ ಬದಲಾವಣೆ ಮಾಡಿದ್ರು ಬರೆದವರು..ನಾವು ಅಂದ್ರೆ ಬರೆಯೋರು  ಇಂತಹ ಅನೇಕ ತಪ್ಪುಗಳನ್ನು ನಮ್ಮ ಅಜನ್ಮ ಸಿದ್ಧ ಹಕ್ಕು ಅನ್ನುವಂತೆ ಮಾಡ್ತೀವಿ. ಆಕೆಯನ್ನು ಸಮಾಧಾನಿಸಿದ್ದಾಯಿತು.

ಬಾಂಧವ್ಯಗಳು ಅಂದಾಗ ಹೆಚ್ಚು ನೆನಪಾಗುವ ಹೆಸರು ಚಿತ್ರ ಸಿನಿಮಾ ಪತ್ರಿಕೆಯ ಸಂಪಾದಕಿ ತುಂಗಾರೇಣುಕ    ಮತ್ತು ಅವರ ಸೋದರಿ ರಾಜಕುಮಾರಿ. ತುಂಗಾ ಮೇಡಂ, ರಾಜಿ ಆಂಟಿ ಅಂತ ಕರೆಯೋ ವಾಡಿಕೆ.. ತುಂಗಾ ರೇಣುಕಾ ಪತ್ರಿಕಾ ರಂಗದಲ್ಲಿ ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸಿದವರು. ಹಿರಿಯ ಪತ್ರಕರ್ತರುಗಳಾದ Ravi belagere, Udaya Marakini , Girish Rao Hatwar (ಜೋಗಿ ) ಎಲ್ಲರ ಬಗ್ಗೆ ಹೇಳ್ತಾ ಇರ್ತಾರೆ. ಅದು ಸಮಯ- ಸಂದರ್ಭಕ್ಕೆ ಅನುಗುಣವಾಗಿ,ಸಾಕಷ್ಟು ಬಾರಿ ಆ ಕಾಲದಲ್ಲಿನ ಪತ್ರಕರ್ತರ ಪರಿಸ್ಥಿತಿಗಳ ಬಗ್ಗೆ,ಹೀಗೆ  ಜೊತೆಜೊತೆಗೆ ಸಿನಿಮಾದವರ ಅನೇಕ ಕಥೆಗಳು... !! ಚಿತ್ರ-ಪ್ರಿಯಾಂಕ ಪತ್ರಿಕೆ ಬಿಟ್ಟ ಬಳಿಕವು ನಾನು ತುಂಗಾ ಮೇಡಂ ಪತ್ರಿಕೆಗೆ ಬರೆಯಲೇ ಬೇಕಿತ್ತು. ಮತ್ತೊಂದು ಸಂಗತಿ ನಾನು ಮೇಡಂ ಮನೆಗೆ ಹೋದಾಗ ತಪ್ಪದೆ ನನಗೆ ಇಡ್ಲಿ ಅಥವಾ ತುಮಕೂರಿನ ಅಕ್ಕಿ ರೊಟ್ಟಿ  ಮಾಡೇ ಇಡ್ತಾರೆ. ರಂಗಕರ್ಮಿ -ಚಿಂತಕ ಹಿರಿಮತ್ತು ಕಿರಿತೆರೆಯ ಕಲಾವಿದ ನಾಗರಾಜ್ ಮೂರ್ತಿ ಮೇಡಂ ಪತಿ. ಹೋದಾಗ ಹೇಳೋ  ಮಾತು ನಮಸ್ತೆ    ಸರ್  ಅಷ್ಟೇ :-) ಆ ಬಳಿಕ  ಹರಟಲು ಮ್ಯಾಡಂ ಮತ್ತು ರಾಜಿ ಆಂಟಿ ಜೊತೆ ಕೂತರೆ, ಸಂಜೆ ಮನೆಗೆ ಹೋಗುವಷ್ಟರಲ್ಲಿ   ತಿಂಡಿ-ಊಟ ಅದು ಇದು ಅಂತ ಸೇರಿ ಹೊಟ್ಟೆ ಬಿರಿಸಿಕೊಂಡು ದಣಿವಾಗಿಸಿಕೊಳ್ಳುವ ಸಂಭ್ರಮ.  ಆದರೆ ಸುಮಾರು ಆರು ತಿಂಗಳು ಚಿತ್ರ ಪತ್ರಿಕೆಗೆ ಬರೆಯದೆ ಸುಮ್ಮನಾದೆ ಕಾರಣಾಂತರಗಳಿಂದ. ಈಗ ಮತ್ತೆ  ಬರೆಯುತ್ತಿದ್ದೇನೆ! ಅದಕ್ಕೆಂದು ಈ ಹೆಣ್ಣು ಮಗಳನ್ನು  ಸಂದರ್ಶಿಸಿದ್ದು...ಆಗ ಹೀಗೆಲ್ಲ ಆಯ್ತು !!