Saturday, January 31, 2009

ಗ್ರಹಣ..ನಂಬಿಕೆ..

ನಂಗೆ ಆಕಾಶ ವೀಕ್ಷಣೆ ಮಾಡೋದು ಅಂತ ಅಂದ್ರೆ ತುಂಬಾ ಇಷ್ಟ.ಸಾಮಾನ್ಯವಾಗಿ ತಲೆ ಎತ್ತಿ ವಿಸ್ಮಯವಾಗಿ ನೋಡುತ್ತಾ ನಿಂತು ಬಿಡುತ್ತೆ.ಅದೊಂತರಾ ಹುಚ್ಚು ನಂಗೆ! ಅತಿ ಎತ್ತರಕ್ಕೆ ಹಾರುವ ಹದ್ದು,ಗರುಡ,ಅಲ್ಲಲ್ಲಿ ಗರಬಡಿದಂಗೆ ಪೆದ್ದು ಪೆದ್ದಾಗಿ ಹಾರಾಡುವ ಪಾರಿವಾಳ.. ಹೀಗೆ ಅವುಗಳ ದಿನಚರಿ ವೀಕ್ಷಣೆ ಮಾಡುವುದಕ್ಕೆ ತುಂಬಾ ಖುಷಿ ಆಗುತ್ತೆ.ಇತ್ತೀಚಿನ ತಿಂಗಳುಗಳಲ್ಲಿ ಒಂದು ಬೆರಗಿನ ವಿಷಯ ನಡೆಯಿತು.ಅದು ನಿಮಗೂ ಗೊತ್ತಿರ ಬಹುದು.ಎರಡು ಗ್ರಹಗಳನ್ನು ತನ್ನ ಕಣ್ಣು ಮಾಡಿಕೊಂಡು ನಾವೆಲ್ಲ ನೋಡುವಂತೆ ಮಾಡಿದ್ದ ಚಂದ್ರಮ.ಎಷ್ಟೋ ವರ್ಷಗಳಿಗೆ ಒಮ್ಮೆ ಮಾತ್ರ ಇಂತಹ ಅಪರೂಪದ ದೃಶ್ಯ ಕಾಣ ಸಿಗುತ್ತದೆ,ಅದೃಷ್ಟವಶಾತ್ ನಾವು ನೋಡುವಂತಾಯಿತು.ಒಂದು ಕಣ್ಣಾಗಿ ಗುರು,ಮತ್ತೊಂದು ಕಣ್ಣಾಗಿ ಶುಕ್ರ ಗ್ರಹ ಚಂದ್ರನ ಹೆಮ್ಮೆ ಹೆಚ್ಚು ಮಾಡಿ ಭುವಿಯ ಆನಂದ ಹೆಚ್ಚಿಸಿದ್ದರು.ಗುರು ತನ್ನ ಕಕ್ಷೆಯ ಸುತ್ತ ಒಂದು ಸುತ್ತು ತಿರುಗಲು ಹನ್ನೆರಡು ವರ್ಷಗಳ ಕಾಲ ಬೇಕಾದರೆ,ಶುಕ್ರ ಉಲ್ಟಾ ಗಿರಾಕಿ.ಈ ಎರಡು ಅಭಾಸಗಳ ನಡುವೆ ಅರ್ಧ ಚಂದ್ರ ತನಗೊಂದು ಸ್ಥಾನ ಪಡೆದು ಜಗತ್ ಖ್ಯಾತಿ ಗಳಿಸಿದ !!!ಹಾಗೆ ಒಟ್ಟಾಗಿ ಬಂದರೆ ನಮಗೆ ತೊಂದರೆ ತಪ್ಪಿದ್ದಲ್ಲ ಅಂತ ಅತಿಯಾಗಿ ಗ್ರಹಗಳನ್ನು ನಂಬುವ ಜನ ಒಂದು ಕಡೆ ಹೇಳಿದರೆ,ಇಂತಹ ವಿಶೇಷತೆ ನಮಗೆಲ್ಲರಿಗೂ ಒಳ್ಳೆದನ್ನು ಮಾಡುತ್ತದೆ ಅಂತ ಸಂತೋಷ ಪಟ್ಟಿದ್ದರು.ಏನಾದರಾಗಲಿ ನನ್ನಂತಹ ಆಕಾಶ ಪ್ರಿಯರಿಗೆ ಈ ದೃಶ್ಯ ಮಾತ್ರ ಸಿಕ್ಕಾಪಟ್ಟೆ ಖುಷಿ ಕೊಟ್ಟಿದ್ದಂತೂ ನಿಜ.ನಿಮಗೆ ಗೊತ್ತು ಕವಿ ದ.ರಾ.ಬೇಂದ್ರೆಯವರು ಅರ್ಧ ಚಂದ್ರನನ್ನು ಆಗಸದ ಬಟ್ಟೆ ಉಜ್ಜಿ ಉಜ್ಜಿ ಕರಗಿದ ಸಾಬೂನು ಅಂತ ಹೇಳಿದ್ದಾರೆ.ಈಗ ಕೆಲವು ದಿನಗಳಿಂದ ನಮ್ಮ ಚಂದ್ರ ಹಾಗು ಶುಕ್ರ ಮಿರ ಮಿರನೆ ಆಗಸದಲ್ಲಿ ಮಿಂಚುತ್ತಿದ್ದಾರೆ,ಅದನ್ನು ನೋಡಿ ಇವೆಲ್ಲ ನೆನಪಾಯಿತು.ಸೋಮವಾರ ಗ್ರಹಣ ಇತ್ತಲ್ಲ,ಚಂದ್ರ ಹಾಗು ಸೂರ್ಯ ತಮ್ಮಪಾಡಿಗೆ ಅವರ ಕೆಲಸ ಅವರು ಮಾಡಿಕೊಂಡರು .ಆದರೆ ಈ ಗ್ರಹಣ ಮಕರ ರಾಶಿಯವರಿಗೆ ತೊಂದರೆ ಉಂಟು ಮಾಡುತ್ತದೆ ಅಂತ ಸುದ್ದಿ ಹಬ್ಬಿಸಿ ಈ ಗ್ರಹಣದ ವಿಶೇಷತೆಯನ್ನು ಹೆಚ್ಚು ಮಾಡಿದ್ದರು.ಈ ರಾಶಿಯವರಿಗಾಗಿ ಒಂದು ಶ್ಲೋಕ ತಿಳಿಸಿದ್ದರು,ಅದನ್ನು ಓದಲು ಆಗದೆ ಇರುವವರು ಕನಿಷ್ಠ ತಮ್ಮ ಬಳಿಯಲ್ಲಿ ಇಟ್ಟುಕೊಂಡು ಇರಲೇಬೇಕು ಅಂತ ಕಾನೂನು ಹೊರಡಿಸಿದ್ದರು.ಅಂತು ಇಂತೂ ಗ್ರಹಣ ಮುಗಿತಪ್ಪ ಅಂತ ಸಂಜೆ ದೊಡ್ಡ ಉಸಿರು ಬಿಟ್ಟು ಪಾಪ ಭಕ್ತರು ದೇವಾಲಯಕ್ಕೆ ಹೋಗಿ ಭಗವಂತನಿಗೆ ಕಾಣಿಕೆ ಕೊಟ್ಟು ಬಂದರೆ,ಆ ಗ್ರಹಣ ಮತ್ತೊಂದು ರೂಪ ಪಡೆದಿತ್ತು.ಉತ್ತರ ಭಾರತ ಹೆಣ್ಣು ಮಗಳು ದ್ವಾಪರ ಯುಗದಲ್ಲಿ (ನನ್ನ ಹತ್ತಿರ ಎವಿಡೆನ್ಸ್ ಇಲ್ಲ)ಇಂತಿಂಥ ಸಮಯದ ಸೋಮವಾರದಲ್ಲಿ ,ಮಕರ ರಾಶಿಯವರಿಗೆ ತೊಂದರೆ ಮಾಡುವ ಗ್ರಹಣ ಬರುತ್ತದೆ , ಅದು ಕೇವಲ ಅವರಿಗೆ ಮಾತ್ರ ಅಲ್ಲದೆ ಎಲ್ಲರಿಗೆ ತೊಂದರೆ ಕೊಟ್ಟೆ ಕೊಡುತ್ತದೆ ಯಂತೆ..! ಅದು ಈಗ ಬಂದಿದೆ ನಮಗೆ ತೊಂದರೆ ತಪ್ಪಿದ್ದಲ್ಲ ಎಂದು ಚಿಂತಿಸಿ ನಮ್ಮ ತಲೆ ಕೆಡಿಸಿ ಬಿಟ್ಟರು..ಪ್ರಕೃತಿಯನ್ನು ಪ್ರಿತಿಸದೆ ಭಯ ಬೆಳಸಿ ಕೊಂಡರೆ ಹೀಗೆ ಆಗುವುದು ಅಂತ ಕಾಣುತ್ತದೆ!!

Friday, January 30, 2009

ಖಂಡ ಇದೆ ಕೋ..

ನಮಗೆ ಗೋವಿನ ಹಾಡು ಅಪರಿಚಿತ ಅಲ್ಲ.ನಿನ್ನೆ ನನ್ನ ಅಮ್ಮ ಲಲಿತಾ ಒಂದು ಕಥೆ ಹೇಳಿದರು ಆಗ ಯಾವ ರೀತಿ ಪ್ರತಿಕ್ರಿಯೆ ನೀಡಬೇಕೋ ತಿಳಿಯಲಿಲ್ಲ.ರಾಮನು ಹುಟ್ಟಿದ ನಾಡಲ್ಲಿ ,ಅದು ಹೆಣ್ಣುಮಕ್ಕಳಿಗೆ ಗೌರವ ಕೊಡಲೇ ಬೇಕೆಂದುಅರಿತುಕೊಂಡಿರುವ ಈ ನಾಡಲ್ಲಿ ಹೆಣ್ಣು ಮಕ್ಕಳನ್ನು ಅದು ಇತ್ತೀಚೆಗೆ ಹಿಗ್ಗಾಮುಗ್ಗಾ ಹೊಡೆದ ನಾಡಲ್ಲಿ ನಾವಿದ್ದೇವೆ.ಅಮ್ಮ ಹೇಳಿದ್ದು ನಿನ್ನೆ ಅವ್ರು ಪಾಠ ಮಾಡಿದ ಕಥೆಯನ್ನು.ಹಿಂದಿ ಲೇಖಕಿ ಮಹಾದೇವಿ ವರ್ಮ ಅವರ ಬದುಕಿನ ಪುಟಗಳಲ್ಲಿನ ಒಂದು ಅಧ್ಯಾಯ ಹಿಂದಿ ಮಾಧ್ಯಮದ ಮಕ್ಕಳಿಗೆ ಪಠ್ಯಕ್ರಮದಲ್ಲಿ ನೀಡಲಾಗಿದೆ.ಅಮ್ಮ ಆ ಕಥೆ ಓದಿ ಸ್ವಲ್ಪ ಅಪ್ಸೆಟ್ ಆಗಿದ್ದರು.ಅದು....
ಮಹಾದೇವಿ ಅವರ ತಂಗಿ ಪ್ರಾಣಿ ಪ್ರಿಯೆ.ಆಕೆಯ ಮನೆಯಲ್ಲಿ ಅನೇಕ ಸಾಕು ಪ್ರಾಣಿಗಳು ಇದ್ದವು.ಮಾತಿನಲ್ಲಿ ಚತುರೆ,ಒಮ್ಮೆ ಮಹಾದೇವಿ ಅವರು ತಂಗಿ ಮನೆಗೆ ಹೋದಾಗ ಆಕೆ ನೀನೂ ಕೇವಲ ಬರಹದಲ್ಲಿ ಪ್ರಾಣಿಗಳ ಮೇಲೆ ಪ್ರೀತಿ ತೋರುತ್ತಿಯ..ನಮ್ಮ ಮನೆಯಲ್ಲಿರುವ ಹಸು ತೆಗೆದುಕೊಂಡು ಹೋಗಿ ಸಾಕು.ಅದರಲ್ಲಿ ಸಿಗುವ ಆನಂದ ಅನುಭವಿಸು !ಅಂತ ಪ್ರೀತಿಯಿಂದ ಒತ್ತಾಯ ಮಾಡಿ ಬಹುಮಾನವಾಗಿ ಒಂದು ಹಸು ಕೊಟ್ಟರಂತೆ.ಇವರು ಆರೈಕೆ ಮಾಡುತ್ತಾ ಅದರ ಆನಂದ ಅನುಭವಿಸಲು ಆರಂಭಿಸಿದರು.ಈ ಹಸು ನೋಡಲು ತುಂಬಾ ಸುಂದರ ಆಗಿತ್ತಂತೆ,ಸರಿ ಅದಕ್ಕೆ ಅವರು ಗೌರ ಅನ್ನುವ ಹೆಸರು ನೀಡಿದರು.ಈ ಗೌರ ಸಹ ಹೇರಳವಾಗಿ ಹಾಲು ನೀಡಲು ಆರಂಭಿಸಿತು.ಆ ಹಾಲು ಮನೆ ಮಂದಿಗೆಲ್ಲ ಸಾಕಾಗಿ ಬೆಕ್ಕು,ನಾಯಿಗಳಿಗೂ ಹಾಕುವಷ್ಟು ಹಾಲು ಉತ್ಪತ್ತಿ ಆಗುತ್ತಿತ್ತು.ಇತರ ಪ್ರಾಣಿಗಳು ತನ್ನ ಹಾಲು ಕುಡಿಯುವುದನ್ನು ಕಂಡಾಗ ಆಕೆಗೆ ಧನ್ಯತಾಭಾವ.ಆ ಊರಲ್ಲಿ ಇದ್ದ ಹಾಲು ಮಾರುವವ ಮಹಾದೇವಿಯವರ ಬಳಿ ತನ್ನ ಬಳಿ ಹಾಲು ಕೊಲ್ಲದೆ ಇರುವುದಕ್ಕೆ ಬೇಸರ ವ್ಯಕ್ತ ಪಡಿಸಿದ.ಆಗ ಈಕೆ ಇನ್ನುಮುಂದೆ ಗೌರಳ ಹಾಲು ನೀನೆ ಕರಿ,ನಮಗಾಗಿ ಉಳಿದದ್ದು ನೀನೂ ಕೊಂಡೊಯ್ಯಿ ಎಂದರಂತೆ.ಅವನು ಬಂದ ಸ್ವಲ್ಪ ದಿನಗಳಾದ ಮೇಲೆ ಗೌರ ಸಣ್ಣಗೆ ಆಗಲು ಆರಂಭಾ ಆಯಿತು.ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ರಿಪೋರ್ಟ್ ನಲ್ಲಿ ಹಸುವಿನ ಕರುಳಲ್ಲಿ ಸುಜಿಗಳು ಇರುವುದು ಕಂಡು ಬಂದಿತು.ಅವು ಹೇಗೆ ಸೇರಿರ ಬಹುದು ಎಂದು ತಿಳಿಯದೆ ಗೊಂದಲಕ್ಕೆ ಈಡಾದರು ಮಹಾದೇವಿ.ವೈದ್ಯರ ಉಹೆ ಅನ್ವಯ ಅವುಗಳನ್ನು ಬೆಲ್ಲದ ಉಂಡೆಯಲ್ಲಿ ಸೇರಿಸಿ ಹಸುವಿಗೆ ತಿನ್ನಿಸಲಾಗಿತ್ತು. ಹೀಗೆ ಅದು ಕರುಳಲ್ಲಿ ಸೇರಿತ್ತು.ಸ್ವಲ್ಪ ದಿನಕ್ಕೆ ಹೃದಯಕ್ಕೆ ಸೇರುತ್ತದೆ ಎಂದು ವೈದ್ಯರು ತಿಳಿಸಿ,ಗೌರಳ ಸಾವು ನಿಶ್ಚಿತ ಎಂದು ತಿಳಿಸಿದಂತೆ.ಈ ದುಷ್ಕೃತ್ಯ ಮಾಡಿದವ ಆ ಹಾಲು ಮಾರುವವ ಎನ್ನುವ ಅಂಶ ಈಕೆಗೆ ಮನದಟ್ಟಾಯಿತು.ಸ್ವಲ್ಪ ದಿನಗಳಾದ ಮೇಲೆ ಆ ಹಸು ಸತ್ತು ಹೋಯಿತು..ಕೊನೆಯಲ್ಲಿ ಲೇಖಕಿ ಹೇಳುವುದು ಕೃಷ್ಣ ಹುಟ್ಟಿದ ಯಾದವರ ವಂಶದಲ್ಲಿ ಹುಟ್ಟಿದ ಈತ ಹಸುವಿನ ಸಾವಿಗೆ ಕಾರಣ ಆದನಲ್ಲ..!ಅವರು ವ್ಯಥೆ ಹೊಂದಿದಂತೆ ನಾವು ಈಗ...!!

Thursday, January 29, 2009

ಏನಿದರ ಅರ್ಥ?

ಕಳೆದ ವಾರ ಮಂಗಳೂರಿನ ಪಬ್ ದಾಳಿ ಅತ್ಯಂತ ಖಂಡನೀಯ,ಇದು ಹೇಯಕರ ಕೃತ್ಯ,ಧರ್ಮಾಂಧರ ಅತಿರೇಕದ ಪರಾಕಾಷ್ಠೆ, ಅದು ಇದು ಅಂತೆಲ್ಲ ಪ್ರಜ್ಞಾವಂತ ನಾಗರೀಕ ಸಮಾಜದ ಕುಡಿಗಳು ಕಿರುಚಾಟ ನಡೆಸಿದರು. ಆ ಘಟನೆ ಕಂಡಾಗ ಅತೀವ ದುಃಖಆಯಿತು.ಕಾರಣ ಇಷ್ಟೇ ಮನುಷ್ಯ ಎಷ್ಟು ಮುಂದುವರೆದರೇನು ಗಂಡಸಲ್ಲಿ ಅಡಗಿರುವ ಆ ಕ್ರೌರ್ಯ ಶತಶತಮಾನಗಳು ಕಳೆದರೂ ಬದಲಾವಣೆ ಕಂಡಿಲ್ಲ.ನಿಜ ಮೊದಲು ಇರುವಷ್ಟು ಅದರ ಓಘ ಈಗ ಇರದೇ ಇರಬಹುದು,ಆದರೆ ಮೂಲ ಸ್ವರೂಪ ಆಗಾಗ ಜಾಗೃತ ಆಗುತ್ತಲೇ ಇರುತ್ತದೆ.ರಾಮನ ನಾಡು ಎನ್ನುವ ಖ್ಯಾತಿ ಪಡೆದಿರುವ ಈ ಭಾರತ ಭೂಮಿಯಲ್ಲಿ ಹೆಣ್ಣುಮಕ್ಕಳನ್ನು ಗೌರವಿಸುವುದು ಆ ಪಕ್ಕಕ್ಕೆ ಇಡಿ ,ಅವರನ್ನು ಸಾರ್ವಜನಿಕ ಸ್ಥಳಗಲ್ಲಿ ಹಿಗ್ಗಾಮುಗ್ಗಾ ಹೊಡೆಯುವುದು ಅಂದರೆ ಏನು ಅರ್ಥ? ಅವರು ಅಶ್ಲೀಲವಾಗಿ ಡ್ಯಾನ್ಸ್ ಮಾಡುತ್ತಿದ್ದರು,ಡ್ರಗ್ಸ್ ತಗೊಂಡಿದ್ದರು,ಇಂತಹ ಕೆಲಸ ಮಾಡಿದರೆ ನಮ್ಮ ಸಹೋದರಿಯರಾದರು ಸರಿಯೇ ನಾವು ಸುಮ್ಮನೆ ಬಿಡುವುದಿಲ್ಲ.. ಹಾಗೆ ಹೀಗೆ ಅಂತ ರಾಮನ ಮಕ್ಕಳು ಆ ಪರಿ ಕಿರುಚಾಟ ನಡೆಸಿದರು.ಆದರೆ ಅವರಿಗೆ ಹೊಡೆಯುವ ಹಕ್ಕು ಕೊಟ್ಟವರು ಯಾರು? ಡ್ರಗ್ಸ್ ವಿಷಯಕ್ಕೆ ಬರುವುದಾದರೆ ಅವರು ಡ್ರಗ್ಸ್ ತೆಗೆದು ಕೊಳ್ಳುವುದಕ್ಕೆ ಅವಕಾಶ ಮಾಡಿದವರು ಯಾರು? ಆ ಪಬ್ ಯಜಮಾನ ತಾನೆ? ಅವನನ್ನು ಮೊದಲು ಹೊಡೆಯದೆ ನೇರವಾಗಿ ಗಂಡುಸಿಂಹಗಳು!ಹೆಣ್ಣುಮಕ್ಕಳನ್ನು ಎಳೆದು ಅಸಹ್ಯಕರ ರೀತಿಯಲ್ಲಿ ಅಬ್ಬ! ಆ ದೃಶ್ಯ ನೆನೆದರೆ ಈಗಲೂ ಮೈ ಜುಮ್ !ಅಂತ ಅನ್ನುತ್ತೆ, ಒಬ್ಬ ಹೆಣ್ಣುಮಗಳು ಎರ್ರಾಬಿರ್ರಿ ಓದಿದರೆ,ಮತ್ತೊಬ್ಬಳು ಆ ಗಂಡು ಸಿಂಹದ ಏಟಿಗೆ ಕುಸಿದು ಬಿದ್ದಳು.ಇಲ್ಲಿ ಆಗ ಬೇಕಾಗಿರುವುದು ಪುರುಷ ತನ್ನ ಮೂಲ ಗುಣ ಬಿಟ್ಟು ಹೆಣ್ಣನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಬೇಕು.ಪ್ರಾಯಶ: ಈ ರೀತಿ ಹಿಂಸೆ ನೀಡುವ ಪುರುಷಸಿಂಹಗಳು ಹೆಣ್ಣಿ ಬೆಳವಣಿಗೆ,ಅವಳ ಸ್ವಾತಂತ್ರ ,ಜೀವನ ಶೈಲಿಯಲ್ಲಿನ ಮಾರ್ಪಾಟು ಒಪ್ಪಿಕೊಳ್ಳಲು ಇಷ್ಟ ಪಡುತ್ತಿಲ್ಲ.ಅದರ ಪರಿಣಾಮ ಇಂತಹ ದುಷ್ಕ್ರ್ಯುತ್ಯಗಳ ಹುಟ್ಟಿಗೆ ಕಾರಣ.ಯಾವ ಅಂಶವು ಇದರ ಮುಂದೆ ಇಲ್ಲ.ಎಂದು ಆತ ಹೆಣ್ಣನ್ನು ಅರ್ಥ ಮಾಡಿಕೊಳ್ಳುತ್ತಾನೋ ಆಗ ಕೌಟುಂಬಿಕ ,ಸಾರ್ವಜನಿಕ ಹಿಂಸೆಗಳಿಗೆ ಅಂತ್ಯ ಕಾಣುತ್ತದೆ.ಪುರುಷರು ಬದಲಾಗುತ್ತರಾ?

Saturday, January 24, 2009

ಸಾವು..ಸದಾ ಕಾಡುತ್ತೆ!!

ನಿನ್ನೆ ಸಿರ್ಸಿ ಸರ್ಕಲ್ ಸಮೀಪದ ರೇಲ್ವೆ ಕಂಬಿ ಬಳಿ ಇರುವ ಕಾಪೋಂಡ್ ಬಳಿ ಹೆಣವೊಂದು ಬಿದ್ದಿತ್ತು.ಅಂತಹ ಅನಾಥ ಹೆಣಗಳು ಮಹಾನಗರಗಳಲ್ಲಿ ಸಾಮಾನ್ಯ.ಆದರೆ ಯಾಕೋ ಗೊತ್ತಿಲ್ಲದಂತೆ ಮನಸ್ಸು ವಿಹ್ವಲ ಆಯ್ತು.ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ.. ! ಅಂತ ನಾರ್ಮಲ್ ಆಗಿ ಹೇಳಿ ಸುಮ್ಮನಾಗುವ ಮನಸ್ಥಿಯಲ್ಲಿ ನಾನು ಇರೋಕೆ ಸಾಧ್ಯ ಆಗಲಿಲ್ಲ..ಸಾವಿನ ಬಗ್ಗೆ ನನಗೆ ಹೆದರಿಕೆ ಇಲ್ಲ,ಅತಿ ಕುತೂಹಲ ಘಟ್ಟ ಅಂತ ಭಾವಿಸ್ತೀನಿ.ಗೊತ್ತಿಲ್ಲ ಈ ರೀತಿಯ ಮನಸ್ಥಿತಿಗೆ ಕಾರಣ ಏನು ಅಂತ.ಪ್ರಾಯಶಃ ನನ್ನ ಹತ್ತಿರ ಹಣ,ಆಸ್ತಿ,ಹೆಸರು ಇಲ್ಲದ ಇರುವುದು ಇದಕ್ಕೆ ಕಾರಣ ಆಗಿರ ಬಹುದೇನೋ.ಆದರೆ ಆ ಅನಾಥ ಹೆಣ ಯಾಕೋ ನನ್ನ ಮನಸ್ಸಿನಲ್ಲಿ ಉಳಿದು ಹೋಯಿತು?ನಾವು ಹಲವು -ಕೆಲವುಗಳಿಗಾಗಿ ಸದಾ ಚಿಂತಿಸುತ್ತಿರುತ್ತೇವೆ.ಅದು ಸಿಕ್ಕರೂ,ಸಿಗದೇ ಇದ್ದರು ಸಾವು ತನ್ನ ಸಮಯಕ್ಕೆ ತಾನು ಬಂದು ತಮ್ಮನ್ನು ಕರೆದುಕೊಂಡು ಹೋಗಿಬಿಡುತ್ತದೆ. ಕೆಲವರು ಬದುಕಲ್ಲಿ ಎಲ್ಲ ಪಡೆದಿರುತ್ತಾರೆ ಆದರೆ ಸಾಯುವ ಕೊನೆ ಗಳಿಗೆಯಲ್ಲಿ ಒಂದು ಹನಿ ನೀರು ಹಾಕಲು ಒಬ್ಬರು ಇರುವುದಿಲ್ಲ.ಕೆಲವರು ಬದುಕಲ್ಲಿ ಎಲ್ಲವನ್ನು ಕಳೆದುಕೊಂಡಿರುತ್ತಾರೆ ಸಾವಿನ ಮೂಲಕ ಎಲ್ಲರನ್ನು ಪಡೆದು ಕೊಳ್ಳುತ್ತಾರೆ.ವಿಚಿತ್ರ! ಒಂದು ಸರ್ತಿ ಪರಿಚಿತ ಹೆಣ್ಣು ಮಗಳು ತಾನು ಸೀಮೆ ಎಣ್ಣೆ ಸುರಿದು ಕೊಂಡು ಬೆಂಕಿ ಹಚ್ಚಿಕೊಂಡು ಸತ್ತು ಹೋದಳು.. ಕಾರಣ ಯಾರಿಗೂ ಗೊತ್ತಿರಲಿಲ್ಲ.ಒಂದು ಸರ್ತಿ ಆ ಹೆಣ್ಣುಮಗಳ ತಾಯಿ ಇಂತಹುದೇ ನೋವು ಉಣ್ಣುತ್ತಿದ್ದ ತಾಯಿ ಮತ್ತೊಬ್ಬ ತಾಯಿ ಬಳಿ ಅಕ್ಕ ನಿನ್ನ ಮಗಳ ಸಾವಿಗೆ ಒಂದು ಕಾರಣ ಇದೆ ಆದರೆ ನನ್ನ ಮಗಳು ಕಾರಣ ಹೇಳದೆ ಸತ್ತಳು.. ಇದು ನಾನು ಸಾಯುವ ತನಕ ಕೊರಗುವಂತೆ ಮಾಡುತ್ತದೆ ಅಂತ ಅತ್ತಿದ್ದರು.ಕೆಲವು ಸರ್ತಿ ಕೋಪವು ಅಂತಹ ಸಾವಿಗೆ ಕಾರಣ ಆಗುತ್ತದೆ ಅಂತ ಕಾಣುತ್ತದೆ.ಆದರೆ ಎಲ್ಲದಕ್ಕಿಂತ ಬದುಕಿನ ಬಗ್ಗೆ ಅತಿ ಆಸೆ ಇಟ್ಕೊಂಡು ವಿದೇಶಗಳಿಗೆ ಹೋಗಿ ಸಾಧನೆ ಮಾಡುವ ಆಸೆ ಹೊಂದಿರುತ್ತಾರಲ್ಲ ಅಂತಹವರು ಕೊಲೆ ಆಗಿ,ಅದು ಅಬ್ಬೇಪಾರಿ ಹೆಣವಾಗಿ ಎಂದೋ ತಾಯಿ-ತಂದೆ ಸಂಬಂಧಿಕರಿಗೆ ತಿಳಿಯುತ್ತದಲ್ಲ ಅದರಷ್ಟು ದು:ಖಕರ ಸಂಗತಿ ಮತ್ತೊಂದಿಲ್ಲ.ಅಂತಹ ನ್ಯೂಸ್ ಓದಿದರೆ ನನಗೆ ನೋವು ತಡಿಯೋಕೆ ಆಗೋದಿಲ್ಲ.ಬದುಕಿನೊಂದಿಗೆ ಸಾವು ಇದ್ದೆ ಇರುತ್ತದೆ,ನಾವು ನಮ್ಮ ಟೈಮ್ ಬರುವ ತನಕ ಕಾಯುತ್ತ (ಅರಿವಿಲ್ಲದಂತೆ ) ಆ ಸಂಗತಿಯನ್ನು ಮರೆತು ಮುಂದೆ ಸಾಗ್ತಾನೆ ಇರ್ತಿವಿ.ಇದೆ ಜೀವನ ಅಲ್ವ!

Friday, January 23, 2009

ಸೀತೆ ಅಂತ ಕರೀತಾರೆ!

ನಿನ್ನೆ ನಾನು ಒಬ್ಬ ಹೆಣ್ಣು ಮಗಳನ್ನು ಭೇಟಿ ಮಾಡಿದೆ.ಆಕೆ ನೋಡೋದಕ್ಕೆ ಆಕರ್ಷಕ ಆಗಿದ್ದಳು.ಚಟಪಟ ಅಂತ ಮಾತಾಡಿ ಮಾತಾಡಿ ದಣಿತಾಯಿದ್ದಳು.ನಾನು ಭಾಗವಹಿಸಿದ ಕಾರ್ಯಕ್ರಮದಲ್ಲಿ ಯಾರು ನನಗೆ ಪರಿಚಯ ಇರಲಿಲ್ಲ,ತಾನೆ ಖುದ್ ಪರಿಚಯ ಮಾಡಿಕೊಂಡ ಈ ಹೆಣ್ಣುಮಗಳ ಮಾತು ಕೇಳೋದಷ್ಟೇ ನಂಗೆ ಉಳಿದದ್ದು! ತನ್ನ ಮಗನ ಗುಣಗಾನ ಹೆಚ್ಚಾಗಿ ಅದರಲ್ಲಿತ್ತು.ಸಾಮಾನ್ಯವಾಗಿ ತುಂಬಾ ಜನ ಹೆಣ್ಣು ಮಕ್ಕಳು ಮಾಡುವ ಅತಿ ಮುಖ್ಯ ಕೆಲಸಗಳಲ್ಲಿ ಇದು ಒಂದು.ನಾನೇನು ಕಡಿಮೆ ಇಲ್ಲ!!ಆಕೆ ಮಾತಿನ ಮಧ್ಯದಲ್ಲಿ ತನ್ನ ಅತ್ತೆ ಮನೆಯವರು ತನಗೆ ಯಾವ ರೀತಿ ಕಷ್ಟ ಕೊಟ್ಟರು,ತಾನು ಹೇಗೆ ಕಷ್ಟಪಟ್ಟೆ ಎಂದು ಬಿಡಿಸಿ,ಬಿಡಿಸಿ..ಹೇಳಿದರು.ಆಕೆ ಗರ್ಭಿಣಿ ಆಗಿದ್ದಾಗ ಅತಿಯಾದ ವಾಂತಿ ಆಗುತ್ತಿತ್ತಂತೆ.ಆ ಸಂದರ್ಭದಲ್ಲಿ ಆಕೆ ಮುದ್ದೆ ತಿನ್ನಲು ಇಷ್ಟ ಪಟ್ಟಾಗ ಮಗು ಕಪ್ಪು ಬಣ್ಣದಲ್ಲಿ ಹುಟ್ಟುತ್ತದೆ ಅಂತ ಹೇಳಿ ತೊಂದರೆ ಕೊಡುತ್ತಿದ್ದರಂತೆ .ಹೀಗೆ ಹೇಳ್ತಾ ಆಕೆ ಪಾಪ ತಾನು ಹೇಗೆಲ್ಲಾ ಅತ್ತೆ ಮನೆಯವರಿಂದ ದೈಹಿಕವಾಗಿ ತೊಂದರೆಗೆ ಒಳಗಾದೆ ಎಂದು ತಿಳಿಸಿದರು.(ಆಕೆ ಮೈಮೇಲೆ ಆದ ಗಾಯದ ಹಳೆ ಗುರುತುಗಳು ಅಸ್ಪಷ್ಟವಾಗಿ ಇದೆ.)ಹಾವು ಕೈಲಿ ಕಚ್ಚಿಸಿದ್ರು??!!(ಯಾವ ಹಾವೋ ಗೊತ್ತಿಲ್ಲ) ಎಂದು ಆಕೆ ಹೇಳಿದರು.ನನ್ನ ಮಗನನ್ನು ಕಂಡರೆ ಎಲ್ಲರಿಗು ಇಷ್ಟ ಆಗುತ್ತೆ ಆದರೆ ನನ್ನ ಅತ್ತೆ ಮನೆಯವರಿಗೆ ಉಹುಂ ಸ್ವಲ್ಪವೂ ಇಷ್ಟ ಇಲ್ಲ ಎನ್ನುತ್ತಾ ಆಕೆ ಬೇಸರ ಪಟ್ಟುಕೊಂಡರು.ದೇಹದ ಮೇಲೆ ಆದ ಗಾಯ ಮರೆಯಾದರು ಆಕೆಯ ಮನದ ಮೇಲೆ ಆದ ಗಾಯ ಮಾಯದೆ ಹಾಗೆ ಉಳಿದು ಬಿಟ್ಟಿದೆ.ಈಕೆ ಕಷ್ಟಗಳ ಬಗ್ಗೆ ಪತ್ರಿಕೆ ಒಂದು ಸವಿಸ್ತಾರವಾಗಿ ಬರೆದಿತ್ತು ಅಂತ ಆಕೆ ಹೇಳಿಕೊಂಡರು.ಮಾತು ಆಡುತ್ತ ಆಕೆ ನಿಮಗೆ ಸಿನಿಮ ನಟಿ ಅಭಿನಯ ಗೊತ್ತ? ಆಕೆ ಅತ್ತಿಗೆ ನಾನು..ಅಂದ್ರು.ಕಥೆ ಪೂರ್ಣಚಿತ್ರಣ ಸಿಕ್ಕಿತ್ತು.ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವುದಕ್ಕೆ ಸೀತೆ ಅಂತ ಕರೀತಾರೆ.ಈ ಪಟ್ಟಿಯಲ್ಲಿ ಎಷ್ಟು ಜನ ಸೇರ್ಪಡೆ ಆಗಿದ್ದಾರೋ ಅದು ಲೆಕ್ಕಕ್ಕೆ ಸಿಕ್ಕೊಲ್ಲ..ರಾಮನು ಹುಟ್ಟಿದ ನಾಡಲ್ಲಿ ಮಾತ್ರ ಅಲ್ಲ ಇಡಿ ಮಾನವ ಸಮಾಜದಲ್ಲಿ ಸೀತೆಗಳಿಗೇನು ಕೊರತೆ ಇಲ್ಲ .ಆದರೆ ಈ ಪಟ್ಟಿ ಹೆಣ್ಣಿಗೆ ಮಾತ್ರ ಸೀಮಿತ ಆಗಿದೆ ಅಂತ ಅಂದು ಕೊಂಡರೆ ಅದು ನಮ್ಮ ತಪ್ಪು ಕಲ್ಪನೆ ಅಷ್ಟೆ!

Wednesday, January 21, 2009

ಉಫ್ ಭೂತ..!!

ಆಂಗ್ಲ ಬರಹಗಾರರಿಗೆ ದೆವ್ವ,ಭೂತ ಕಂಡ್ರೆ ಅದೇನು ಭಯಾನೂ ನಾಕಾಣೆ!!ನಾನು ಸಾಕಷ್ಟು ಸರ್ತಿ ಹಾರರ್ ಕಥೆಗಳನ್ನು ಓದಿದ್ದೀನಿ ಅದರಲ್ಲಿ ಪಾತ್ರಗಳು ಹೆದರಿ,ಮುದರಿ ಬ್ಯಾಡ ಬರದವನ ಕಥೆ!! ಕೆಲವು ಹಾರರ್ ಕಥೆಗಳು ಶುರು ಆಗುತ್ತೆ ಆದರೆ ಅದರಲ್ಲಿ ಬರುವ ದೆವ್ವದ ಥರಾನೇ ಇದ್ದಕ್ಕಿದ್ದ ಹಾಗೆ ಆಸಕ್ತಿ ಕಳೆದು ಕೊಂಡು ಬಿಡುತ್ತದೆ.ಒಂದು ಕಥೆ ಆತ ತನ್ನ ಸತ್ತ ಹೆಂಡತಿಯನ್ನು ನೆನಪಿಸಿ ಕೊಳ್ಳೋದು.ಆದರೆ ಮೊದಲಿಂದ ಕೊನೆವರಗು ಅದರಲ್ಲಿ ಮನೇಲಿರೋ ಗಡಿಯಾರಗಳ ವರ್ಣನೆ !ಪ್ರಾಯಶಃ ಆ ಲೇಖಕನಿಗೆ ಗಡಿಯಾರದ ಫೋಬಿಯಾ ಇರಬೇಕು.ಇವೆಲ್ಲಕ್ಕಿಂತ ನಮ್ಮಲ್ಲಿ ರಚನೆ ಆಗಿರೋ ಮಾಟಗಾತಿ ಕಥೆಗಳು,ವಿಕ್ರಮ್ ಔರ್ ಬೇತಾಲ್.. ಅಲ್ಲದೆ ಕೆಲವು ಅತಿ ರೋಚಕ ದೆವ್ವದ ಕಥೆಗಳು ತುಂಬ ಆಸಕ್ತಿ ಹೆಚ್ಚಿಸುತ್ತೆ.ಸಾಮಾನ್ಯವಾಗಿ ದೆವ್ವ ಇದೆ ಅಂತ ನಂಬೋರಿಗೆ ಅದು ಇದ್ದೆ ಇದೆ (ನಾನು ಅರ್ಧಂಬರ್ಧ ನಂಬ್ತೀನಿ!! ದೇವ್ರೇ ಕಾಪಾಡಪ್ಪ!).ದೆವ್ವ ಇದೆ ಅಂತ ತಿಳಿ ಬೇಕಾದರೆ ಫಾರಿನ್ ಜನರ ದೆವ್ವ ಸೈಟ್ಗಳನ್ನು ಓದಬೇಕು.ವಿಷಯ ಅದಲ್ಲ,ನನ್ನ ಪರಿಚಯಸ್ತರಿಗೆ ದೆವ್ವ ಕಾಣಿಸಿತಂತೆ.ಅವರು ಥೇಟ್ ಕನ್ನಡ ಸಿನಿಮಾ ರೀತಿಯಲ್ಲಿ(ಎಲ್ಲ ಪ್ರಾದೇಶಿಕ ಭಾಷೆಗಳಿಗೂ ಇದು ಅನ್ವಯ ಆಗುತ್ತೆ) ಬೈಕ್ನಲ್ಲಿ ಕಾಡಿನ ಮಧ್ಯೆ ಹೋಗಬೇಕಾಗಿ ಬಂತಂತೆ.ತಪ್ಪಿಸಿಕೊಳ್ಳೋಕೆ ಚಾನ್ಸ್ ಇಲ್ಲದ ಕಡೆ ಇದ್ದಕ್ಕಿದ್ದ ಹಾಗೆ ಆಕಾಶ-ಭೂಮಿ ಟಚ್ ಮಾಡೋ ಹಾಗೆ ಒಂದು ಆಕೃತಿ ಇವರ ಬೈಕ್ ಮುಂದೆ ನಿಲ್ತಂತೆ.ಸರಿ ಈತ ಆ ದೆವ್ವಕ್ಕೆ ಕೇರ್ ಮಾಡದೆ ನನಗಿಂತ ನೀನೂ ದೊಡ್ಡವನಾ??!! ನನ್ ಮುಂದೆ ನಿಲ್ಲೋಕೆ ನಿನಗೆಷ್ಟು ಧೈರ್ಯ ಅಂತ ಆವಾಜ್ ಹಾಕಿದನಂತೆ.ಅದು ತಕ್ಷಣ ಚಿಕ್ಕ ಆಕಾರ ಆಗಿ ಬದಲಾಗಿ ಪುಟ,ಪುಟನೆ ತೆವಳಿಕೊಂಡು ಹೋಯ್ತಂತೆ.ಸೊ ನನಗೆ ತಿಳಿದು ಬಂದ ಸಂಗತಿ ನಾನು ನಿನಗಿಂತ ಅಧ್ವಾನ !ಅಂತ ಹೇಳಿಕೊಂಡರೆ ಸಾಕು,ದೆವ್ವ ಓಡೋಡಿ ..ಓಡೋಡಿ..! ಹೋಗುತ್ತೆ... ಸ್ವೀಟ್ ಸಲುಶನ್!! ಮನುಷ್ಯ ಎದುರು ಬಂದರೆ ಇದು ಅಸಾಧ್ಯ ಅಲ್ವ?

Tuesday, January 20, 2009

ಮೋಸ ಮಾಡಿದವನ ಹೆಸರ...

ಈಗಂತೂ ಎಲ್ಲ ಕಡೆ ಸತ್ಯಮ್ ರಾಜುದೇ ಕಥೆ.ಪೇಪರ್ ಓದ್ತಾಯಿದ್ದಾಗ ಈ ಸುದ್ದಿ ಗಮನಕ್ಕೆ ಬಂತು.ಒಂದು ಆನ್ ಲೈನ್ ಗೇಮ್ ಶುರು ಆಗಿದೆಯಂತೆ,ಅದರ ಹೆಸರು ನೇಲ್ ಟು ದ ಥೀಫ್ ಅಂತಾನೋ ಏನೋ.ಅದರಲ್ಲಿ ರಾಜು ಮೇಲೆ ಮೊಟ್ಟೆ ಎಸೆಯೋದು.ಈಗಾಗಲೇ ಸಾಕಷ್ಟು ಜನ ಆ ಆತ ಆಡಿದ್ದಾರಂತೆ.ಅದರಲ್ಲಿ ಅತಿ ಹೆಚ್ಚು ಮೊಟ್ಟೆ ಎಸೆತ ಆಗಿರೋದು ಹದಿನೆಂಟು ಅಂತೆ.ಪ್ರಾಯಶಃ ಈ ಆಟ ಆಡ್ತಾಯಿರೋರು ಸತ್ಯಮ್ ನಲ್ಲಿ ಶೇರ್ಕೊಂಡವರು ಆಗಿರ ಬೇಕು ಅಂತ ತಮಾಶೆಯಾಗಿ ಬರೆದವರು ಎಂಡ್ ಮಾಡಿದ್ದಾರೆ,.ಆದರೆ ಈ ವಿಷಯ ತಮಾಷೆ ಅನ್ನಿಸುತ್ತದೆಯೇ? ಈ ಸಂದರ್ಭದಲ್ಲಿ ಒಂದು ಮಾತು ಜ್ಞಾಪಕಕ್ಕೆ ಬರುತ್ತದೆ..ಮೋಸ ಮಾಡಿದವನ ಹೆಸರೆನ್ನ ಮಗನಿಗೆ ಇಡಬೇಕು..ಹಿರಿಯರ ಹಿತನುಡಿಗಳಲ್ಲಿ ಇದು ಒಂದು. ಆದರೆ ಈ ಮಾತು ಎಷ್ಟು ಕ್ರೂರ ಅಲ್ವ.ಮೊದಲೇ ಮೋಸ ಹೋಗಿರ್ತಾರೆ,ಪದೇಪದೆ ಜ್ಞಾಪಕದಲ್ಲಿ ಇಟ್ಟುಕೊಳ್ಳಲು ಸಾಧ್ಯ ಆಗುವಂತೆ ಆ ಹೆಸರು ಮಗನಿಗೆ ಇಡಬೇಕಂತೆ ಆ ಬಡಪಾಯಿ.ಈ ಮಾತನ್ನೇ ನಿಜ ಬದುಕಿಗೆ ಅಳವಡಿಸಿಕೊಂಡರೆ ಸತ್ಯಮ್ ರಾಜು,ವಿನಿವಿಂಕ್ ಶಾಸ್ತ್ರಿ,ಹರ್ಷದ್ ಮೆಹ್ತಾ,ಇನ್ನು ಹಲವಾರು ಅತ್ಯುಪಕಾರಿಗಳ ಹೆಸರು ಪ್ರತಿಯೊಂದು ಮನೆಯ ಮಕ್ಕಳ ಹೆಸರಾಗಿ ನಲಿದಾಡ್ತಾ ಇರ್ತಾ ಇತ್ತು.ಮೋಸ ಮಾಡಿದವನ ನೆನಪೇ ಬೇಡ ಅನ್ನಿಸುವಾಗ ಆ ವ್ಯಕ್ತಿಯ ಹೆಸರು ಮಗನಿಗೆ ರಾಮ ರಾಮ!!!

Saturday, January 17, 2009

ಯಾಕೆ ಹೀಗೆ..?

ಇತ್ತೀಚೆಗೆ ಬ್ಲಾಗ್ ಒಂದರಲ್ಲಿ ಓದಿದೆ.ಅದರಲ್ಲಿ ಆತ ಹಿರಿಯ ಪತ್ರಕರ್ತರ ಇತಿಹಾಸ ಕೆದಕಿ ಜನಗಳಿಗೆ ತೋರುವ ಪ್ರಯತ್ನ ಮಾಡಿದ್ದರು.ಅದೇ ಬ್ಲಾಗ್ನಲ್ಲಿ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಓರ್ವ ಓದುಗರು ಪತ್ರಕರ್ತರು ಉತ್ತರ ಕೊಡುವ ಅವಶ್ಯಕತೆ ಇಲ್ಲ ಎನ್ನುವಂತೆ ಆ ಬರೆದಾತನಿಗೆ ಉತ್ತರ ಕೊಟ್ಟಿದ್ದರು.ಆ ಬ್ಲಾಗ್ ಕತೃ ಬರೆಯುವ ರಭಸದಲ್ಲಿ ಬಳ್ಳಾರಿಯ ಜನರಿಗೆ ಕನ್ನಡ ಅರೆಬರೆ ಗೊತ್ತು ಎನ್ನುವ ಮೆಸೇಜ್ ಕೊಟ್ಟಿದ್ದರು.ನನಗೆ ಆಶ್ಚರ್ಯ ಆಗಿದ್ದು ಏನೆಂದರೆ,ಆತ ಒಬ್ಬ ವ್ಯಕ್ತಿ ಮೇಲೆ ದ್ವೇಷ ಸಾರಲು ಹೊರಟಿದ್ದಾರೋ ,ಭಾಷೆ ಅಥವಾ ಆ ಪ್ರಾಂತ್ಯದಲ್ಲಿನ ನಿವಾಸಿಗಳ ಬಗ್ಗೆ ಕೋಪ ತೀರಿಸಲು ಹೊರಟಿದ್ದಾರೋ ... ಅಂತು ಅದರ ಒಟ್ಟು ಪರಿಣಾಮ ಇದೊಂದು ವಯುಕ್ತಿಕ ದ್ವೇಷದ ಪರಮಾವಧಿ ಅಂತ ಅನ್ನ ಬಹುದು,ಹಾಗಾದರೆ ಈತನ ಪ್ರಕಾರ ಕೋಲಾರದವರು ಸಹ ತೆಲಗು ಮುದ್ದು ಬಿಡ್ಡಲುಅಂತ ಆಯ್ತಲ್ಲ.ನಮ್ಮ ರಾಜ್ಯ ಭೌಗೋಳಿಕವಾಗಿ ಯಾವ ರೀತಿಯಲ್ಲಿ ನಿರ್ಮಿತ ಆಗಿದೆ ಅಂತ ನಿಮಗೆ ಗೊತ್ತು,ಇಲ್ಲಿ ಕನ್ನಡ ಭಾಷೆ ಜೊತೆ ಜೊತೆಗೆ ತಮಿಳು,ತೆಲಗು,ಮರಾಠಿ,ಉರ್ದು,ಮಲಯಾಳಂ... ಅಲ್ಲದೆ ಹಿಂದಿ... ಹೀಗೆ ಹಲವಾರು ಭಾಷೆಗಳು ಗಡಿಯ ಕಾರಣದಿಂದ ಅಲ್ಲದೆ,ವ್ಯಾಪಾರದ ಕಾರಣದಿಂದಲೂ ತನ್ನ ಪ್ರಭಾವ ಬೀರಿದೆ .ಅದನ್ನು ಅರಿತು ಇದು ಇಷ್ಟಕ್ಕೆ ಸೀಮಿತ ಅಂತ ನಿರ್ಧಾರ ಮಾಡುವ ಹಕ್ಕು ವಯುಕ್ತಿಕವಾಗಿ ಯಾರಿಗೂ ಇಲ್ಲ.ಗಡಿಯಲ್ಲಿ ಕನ್ನಡ ಇಲ್ಲ ಎನ್ನುವ ವಾದ ಪುಷ್ಟಿಕರಿಸುವ ಪ್ರಯತ್ನ ಮಾಡುತ್ತಿದ್ದರೋ ಅಥವಾ ವಯುಕ್ತಿಕ ಕಾರಣ ಮುಂದಿಟ್ಟುಕೊಂಡು ಈ ರೀತಿ ಬರೆಯುತ್ತಾರೋ ಆ ಭಗವಂತ ಬಲ್ಲ.ಇತ್ತೀಚೆಗೆ ಶಶಿಧರ್ ಭಟ್ಟರು ತಮ್ಮ ಬ್ಲಾಗ್ ಕುಮ್ರಿಯಲ್ಲಿ ಯಾವುದೋ ಒಂದು ಬ್ಲಾಗ್ ತಮ್ಮ ಬಗ್ಗೆ ಕೆಟ್ಟದಾಗಿ (ಈ ಪದ ಬಳಸ ಬಹುದಾ?) ಬರೆದ ಬಗ್ಗೆ ಹೇಳಿದ್ದರು ,ಆ ವ್ಯಕ್ತಿಯ ದೃಷ್ಟಿಕೋನ ಸರಿಯಿಲ್ಲ ಎನ್ನುವುದಕ್ಕೆ ತಮ್ಮದೇ ಆದ ರೀತಿಯಲ್ಲಿ ಸಮರ್ಥನೆ ಮಾಡಿಕೊಂಡಿದ್ದರು.ಆ ವಿಧಾನ ಒಂದು ಅರ್ಥದಲ್ಲಿ ಸರಿ,ಕೆಲವು ಬಾರಿ ನಮ್ಮ ಬಗ್ಗೆ ನಾವೇ ಹೇಳ ಬೇಕಾಗಿ ಬರುತ್ತದೆ.ಅಂತಹ ಬ್ಲಾಗರ್ ಗೆ ಅದರಿಂದ ಪ್ರಯೋಜನ ಆಗದೆ ಹೋದರು ಕನಿಷ್ಠ ಅವರನ್ನು ಗೌರವಿಸುವ ಮಂದಿಗೆ ಸಮಾಧಾನ ಆಗುತ್ತದೆ.ಪತ್ರಿಕೆ ಒಂದರಲ್ಲಿ ವಿಶ್ವೇಶ್ವರ ಭಟ್ ಅವ್ರಿಗೆ ತರ್ಜುಮೆ ಗಂಧ ಗಾಳಿ ಗೊತ್ತಿಲ್ಲ,ಅವರ ಪತ್ರಿಕೆ ಸಧ್ಯದಲ್ಲೇ ಪೀತ ಪತ್ರಿಕೆ ಆಗುತ್ತೆ ಅನ್ನುವ ಸುದ್ದಿ ಓದಿ ನಾನು ಅಲ್ಲಿ ಕೆಲಸ ಮಾಡುವ ಗೆಳೆಯನನ್ನು ಕೇಳಿದೆ.ಆತ ನಕ್ಕು ನೀವು ಭಟ್ಟರು ಬರೆಯೋದನ್ನು ಕಣ್ಣಾರೆ ಕಂಡು ಈ ರೀತಿ ಪ್ರಶ್ನೆ ಕೇಳ್ತಾ ಇದ್ದೀರಲ್ಲ ಎಂದಿದ್ದಲ್ಲದೆ,ಇದು ನಮ್ಮ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಕಿಡಿಗೇಡಿ ಪತ್ರಕರ್ತರ ಬ್ಲಾಗ್ ನಲ್ಲಿ ಪ್ರಕಟ ಆಗಿದ್ದ ವಿಷಯ,ಅದನ್ನು ಅವ್ರು ನಿಜ ಅಂತ ತಿಳಿದು ಪ್ರಕಟ ಮಾಡಿದ್ದಾರೆ ಸಧ್ಯದಲ್ಲೇ ಅವ್ರು ಯಾರು ಅಂತ ಗೊತ್ತಾಗುತ್ತೆ ಬಿಡಿ ಅಂತ ಅಂದರು..ಮುಂದೆ ಯಾವ ಪತ್ರಿಕೆ ಏನು ಆಗುತ್ತದೆಯೋ ಗೊತ್ತಿಲ್ಲ,ಆದರೆ ಬ್ಲಾಗ್ ಗಳಲ್ಲಿ ಈ ರೀತಿಯ ವಾರ್ತೆಗಳಿಗೆ ಕೊರತೆ ಇಲ್ಲ ಬಿಡಿ!!