Monday, September 17, 2012

ಆಗುಂತಕ

ಸಾವು  ಚಿರಪರಿಚಿತವಾಗಿರುವ ಅಪರಿಚಿತ. ಮರೆತರೂ ಮರೆಯದ ಭಾವ, ಅನುಯಾಯಿ, ಭಯ, ಆತಂಕ ,ಆಗುಂತಕ.. ಯಾವ ಹೆಸರಿನಿಂದ ಕರೆಯ ಬಹುದು? ಗೊತ್ತಿಲ್ಲ, ಗೊತ್ತಿಲ್ಲ.
ಅಮ್ಮನ ಮೇಷ್ಟ್ರು ತೀರಿಹೋದರು ಅನ್ನುವ ಸುದ್ದಿಯಿಂದ ಅಮ್ಮ ಸ್ವಲ್ಪ ಬೇಸರ ಆಗಿದ್ರು. ಇತ್ತೀಚೆಗಷ್ಟೇ ಅವರು ಮಗಳ ಮನೆಯಲ್ಲಿ ಸತ್ತದ್ದು ಹೃದಯಾಘಾತದಿಂದ ..
ಅಕ್ಷರ ಕಲಿಸಿದ ಮೇಷ್ಟ್ರು..
ಸಾವು ಹೀಗೆ ಗೊತ್ತೇ ಆಗಲ್ಲ ಹೇಗೆ ಬರುತ್ತೆ ಅಂತ..ಮಗಳ ಮನೆಗೆ ಹೋದವರು ಮತ್ತೆ ಮರಳಿದ್ದು ಹೆಣವಾಗಿ. ಇಂತಹ ಘಟನೆಗಳು ಹಲವಾರು .. ಆದರೆ ಬದುಕಲ್ಲಿ ಸದಾ ಚಿಂತಿಸುವ ವಿಷಯ  ಅಂದ್ರೆ ಸಾವು. ಎಷ್ಟರ ಮಟ್ಟಿಗೆ  ಅಂದ್ರೆ ಬಿಟ್ಟರೂ ಬಿಡದೀ  ಹಿ0ಬಾಲಕ.

ಈ ಮೇಷ್ಟ್ರ ತಂದೆ ಸತ್ತ ಕಥೆಯೂ ವಿಚಿತ್ರ ರೀತಿಯಲ್ಲಿದೆ. ತುಂಬು ಸಂಸಾರದ ಯಜಮಾನ ಸ್ವಲ್ಪ ಹಾಗೆ ಒಂಚೂರು ಅಬ್ಬೇಪಾರಿ. ಮನೆ ಬಿಟ್ಟು ಹೋದರೆ ತಲಪುವ ಕಡೆ ತಲುಪ ಬೇಕಾದ್ರೆ ತುಂಬಾ ದಿನ ಹಿಡಿಯುತ್ತಾ ಇತ್ತಂತೆ. ಅಂದ್ರೆ ಅಲ್ಲಿ ಸಿಕ್ಕ ನೆಂಟರ ಮನೆ, ಇಲ್ಲಿ ದೊರೆತ ಗೆಳೆಯರ ಮನೆ ಹೀಗೆ ತಂಗುದಾಣಗಳಲ್ಲಿ ನೆಲೆಸುವ ಪ್ರವೃತ್ತಿ.
ಹೀಗೆ ಒಮ್ಮೆ ನೆಂಟರ ಮನೆಗೆ ಹೊರಟಾತ ಬರಲೇ ಇಲ್ಲ. ಮನೆಯವರಿಗೆ ಈತನ ತಂಗುದಾಣದ  ಕಥೆ ಗೊತ್ತಿದ್ದರಿಂದ ಸುಮ್ಮನಾಗಿದ್ರು ಬರ್ತಾರೆ ಬಿಡು ಎಂದು.
ಆದರೆ ಆ ವ್ಯಕ್ತಿಯನ್ನು ಗಾಡಿ ಯೊಂದು ಗುದ್ದಿ ಹೋಗಿತ್ತು.. ಸಾವು ಬರಸೆಳೆದು ಅಪ್ಪಿತ್ತು. ಹೋಗ ಬೇಕಾದ ಕಡೆ ಹೋಗೆ ಇರಲಿಲ್ಲ., ಸಾವಿನ ಮನೆ ಬಾಗಿಲು ತಟ್ಟಿದ್ದರು ಆತ .ಮನೆಯವರಿಗೆ ಸುದ್ದಿ ತಲುಪಲೇ ಇಲ್ಲ, ಅನಾಥ ಶವವಾಗಿ ಪೋಲೀಸರ ಕೈಲಿ ಸಂಸ್ಕಾರ ಮಾಡಿಸಿಕೊಂಡಿದ್ದು ತುಂಬು ಸಂಸಾರವಂದಿಗನ  ಸಾವಿನ ಕಥೆ. ಇಂತಹವು ಹಲವಾರು ಕೇಳಿಬರುತ್ತದೆ .

ಈ ವಿಷಯ ಮನೆಯವರಿಗೆ ತಿಳಿದಿದ್ದು ಬಹಳ ಸಮಯದ ನಂತರ. !ಸಾವಿನ ನಿರೀಕ್ಷೆಯಲ್ಲಿ ಇರುವವರಿಗೆ ಅದು ಸಿಗೋದೆ ಇಲ್ಲ. ಆಕಸ್ಮಿಕವಾಗಿ ಹೀಗೆ ಬಂದು ಬಡಿದು ಬಾಯಲ್ಲಿ ಹಾಕಿಕೊಂಡು ಜಗಿದು ಬಿಡುತ್ತದೆ.ಸಾವು ಅಂದ್ರೆ ಹೀಗೆನಾ..! ಗೊತ್ತಿಲ್ಲ ಗೊತ್ತಿಲ್ಲ..!